
CHITRADURGA NEWS | 16 JUNE 2026
ಚಿತ್ರದುರ್ಗ: ಚುನಾವಣಾ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ, ಉದಾಸೀನತೆ ಹಾಗೂ ಬೇಜವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕಿ ಕೆ.ಶಿವಲೀಲಾ ಅವರನ್ನು ಸರ್ಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಶಾಲೆಯ ಅಡುಗೆ ಕೋಣೆಗೆ ನುಗ್ಗಿದ ನಾಗರಹಾವು..!
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2026ರ ಜೂನ್ 20 ರಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಆರಂಭವಾಗಲಿದ್ದು, ಖಾಲಿ ಇರುವ ಬಿ.ಎಲ್.ಓ ಹುದ್ದೆಗಳನ್ನು ಭರ್ತಿ ಮಾಡಲು ಆದೇಶಿಸಲಾಗಿತ್ತು.
ನಂ. 100 ಹಿರಿಯೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿವಲೀಲಾ ಅವರನ್ನು ಬಿ.ಎಲ್.ಓ ಕರ್ತವ್ಯಕ್ಕೆ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ಈ ಆದೇಶವನ್ನು ಸ್ವೀಕರಿಸಲು ನಿರಾಕರಿಸಿದ ಶಿಕ್ಷಕಿ, ಲಾಗಿನ್ ಐಡಿ ಕ್ರಿಯೇಟ್ ಮಾಡಲು ಅಗತ್ಯವಿರುವ ದಾಖಲೆಗಳನ್ನು ನೀಡದೆ ಅಸಹಕಾರ ತೋರಿದ್ದರು.
ಈ ಸಂಬಂಧ ಹಿರಿಯೂರು ತಹಶೀಲ್ದಾರರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರೂ, ಶಿಕ್ಷಕಿ ಯಾವುದೇ ಲಿಖಿತ ಉತ್ತರ ನೀಡಿರುವುದಿಲ್ಲ. ಇದರಿಂದಾಗಿ ಚುನಾವಣಾ ಆಯೋಗದ ಮಹತ್ವದ ಕಾರ್ಯದ ಪ್ರಗತಿಗೆ ಅಡ್ಡಿಯುಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಮತದಾರರ ನೋಂದಣಾಧಿಕಾರಿಗಳು ನೀಡಿದ ವರದಿಯನ್ನಾಧರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಈ ಕ್ರಮ ಕೈಗೊಂಡಿದ್ದಾರೆ. ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 134 ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10(2)(8) ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ನವೋದಯ ವಿದ್ಯಾಲಯದಲ್ಲಿ ಪ್ರಥಮ ಪಿಯು ವಿಜ್ಞಾನ ವಿಭಾಗದ ಪ್ರವೇಶ | ಅರ್ಜಿ ಆಹ್ವಾನ
ಅಮಾನತು ಅವಧಿಯಲ್ಲಿ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಹಾಗೂ ಕೆ.ಸಿ.ಎಸ್ ನಿಯಮ 98ರ ಅನ್ವಯ ನಿಲಂಬನಾ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

