
CHITRADURGA NEWS | 28 FEBRUARY 2026
ಹೊಸದುರ್ಗ: ಕುಂಚಿಟಿಗ ಮಠದ ಶ್ರೀಶಾಂತವೀರ ಸ್ವಾಮೀಜಿ ಅವರ 25ನೇ ಪಟ್ಟಾಧಿಕಾರ ಮಹೋತ್ಸವ, 36ನೇ ಸಂಗಮೇಶ್ವರ ಜಯಂತಿ ಹಾಗೂ 46ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ನೆರವೇರಿತು.
ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 40 ವಿವಿಧ ಮಠಗಳ ಪೀಠಾಧೀಶರು ಭಾಗವಹಿಸಿ ಶಾಂತವೀರ ಶ್ರೀಗಳ ಮೇಲೆ ನಾನಾ ರೀತಿಯ ಪುಷ್ಪವೃಷ್ಠಿ ಮೂಲಕ ಶುಭ ಹಾರೈಸಿದರು. ಈ ವೇಳೆ ಶ್ರೀಗಳ ಅತ್ಯಾಪ್ತರಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕೂಡಾ ಜೊತೆಯಾಗಿದ್ದರು.

ಸರಳವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಆಗಮಿಸಿದ್ದ ಭಕ್ತರಿಗೆ ಮಠದ ಆವರಣದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಠಾಧೀಶರು ಹಾಗೂ ಗಣ್ಯರು ಶಾಂತವೀರ ಸ್ವಾಮೀಜಿ ಅವರು ಸಮಾಜ ಹಾಗೂ ಹಿಂದುಳಿದ, ದಲಿತ ಮಠಾಧೀಶರ ಓಕ್ಕೂಟಕ್ಕೆ ಮಾಡಿರುವ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಶಾಂತವೀರ ಸ್ವಾಮೀಜಿ, ಒಬ್ಬ ವ್ಯಕ್ತಿ ಆಸ್ತಿ ಸಂಪಾದನೆ ಮಾಡಿದರೆ ಅದು ಮುಂದೆ ಅವನ ಮಕ್ಕಳ, ಕುಟುಂಬದ ಆಸ್ತಿಯಾಗಿರುತ್ತದೆ. ಆದರೆ, ಒಬ್ಬ ಮಠಾಧೀಶರು ಆಸ್ತಿ ಸಂಪಾದನೆ ಮಾಡಿದರೆ ಅದು ಆ ಮಠದ ಭಕ್ತರು ಹಾಗೂ ಸಮಾಜಕ್ಕೆ ಸೇರಿರುತ್ತದೆ ಎಂದರು.
ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದಿಂದ ಸಮಾಜಕ್ಕೆ ಸಾಕಷ್ಟು ಕೆಲಸ ಮಾಡುತ್ತಿದ್ದು, ಅತ್ಯಂತ ಸಣ್ಣ ಸಮುದಾಯಗಳಿಗೂ ಅನುದಾನ, ಮಠ, ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮ ಮನವಿಗೆ ಸ್ಪಂದಿಸಿ, ಬೆಂಗಳೂರಿನಲ್ಲಿ ಒಕ್ಕೂಟಕ್ಕೆ 53 ಎಕರೆ ಜಮೀನು ನೀಡಿದ್ದಾರೆ ಎಂದು ಸ್ಮರಿಸಿದರು.
ಮುಖಂಡರಾದ ಎಸ್.ಲಿಂಗಮೂರ್ತಿ, ಮುರುಳೀಧರ ಹಾಲಪ್ಪ, ಲಗ್ಗೆರೆ ನಾರಾಯಣಸ್ವಾಮಿ, ಸೌಭಾಗ್ಯ ಬಸವರಾಜನ್, ಡಿ.ಗುರುಸ್ವಾಮಿ, ದೊಡ್ಡಘಟ್ಟ ಲಕ್ಷ್ಮಣ, ದ್ಯಾಮಣ್ಣ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಶಿವಭದ್ರಯ್ಯ, ಕಲ್ಕೆರೆ ಶೇಖರಣ್ಣ, ಕೋಡಿಹಳ್ಳಿ ತಮ್ಮಣ್ಣ, ಧರಣಪ್ಪ, ತಂಡಗ ಕಲ್ಲೇಶಣ್ಣ ಸೇರಿದಂತೆ ಸಮಾಜದ ಮುಖಂಡರು, ಭಕ್ತರು ಭಾಗವಹಿಸಿದ್ದರು.
ಕುಂಚಿಟಿಗ ಮಹಾಸಂಸ್ಥಾನ ಮಠವನ್ನು ಶಾಂತವೀರ ಸ್ವಾಮಿಜಿ ನೂರಾರು ವರ್ಷಗಳಿಂದ ಇರುವ ಮಠಗಳ ಸಾಲಿಗೆ ಸೇರಿಸಿದ್ದಾರೆ. ಸ್ವತಃ ಕೃಷಿ ಮಾಡಿ ದಾಳಿಂಬೆ ಬೆಳೆದು ಮಠ ಕಟ್ಟಿದ ಏಕೈಕ ಮಠಾಧೀಶರು.
| ಶ್ರೀ ಈಶ್ವರಾನಂದಪುರಿ ಸ್ವಾಮೀಜಿ.
=====
ಶಾಂತವೀರ ಸ್ವಾಮೀಜಿ ಈ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಮುಂದಿನ ತಲೆಮಾರು ನೆನಪಿಟ್ಟುಕೊಳ್ಳುವಷ್ಟು ಕೆಲಸ ಮಾಡಿದ್ದಾರೆ. ಸಮಾಜ ಅದನ್ನು ಉಳಿಸಿಕೊಂಡು ಹೋಗಬೇಕು.
| ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ.
===
ಸಮಾಜ ಮಠದತ್ತ ಮುಖ ಮಾಡಬೇಕು. ಗುರುಗಳ ಜೊತೆಗೆ ನಿಲ್ಲಬೇಕು. ಸಮಾಜದ ಏಳ್ಗೆಗೆ ಎಲ್ಲರೂ ಕೈ ಜೋಡಿಸಬೇಕು.
| ಬಿ.ಜಿ.ಗೋಬಿಂದಪ್ಪ, ಶಾಸಕರು.
====
ಶ್ರೀಮಠಕ್ಕೆ ತಲೆಮಾರುಗಳ ಇತಿಹಾಸ ಇಲ್ಲ. ಆದರೆ ಶೂನ್ಯದಿಂದ ಬಂದು ಸಾಕಷ್ಟು ಸಾಧನೆ ಮಾಡಿದ್ದಾರೆ. ಹಿಂದುಳಿದ ಮಠಗಳಿಗೆ ಬೆಂಗಳೂರಿನಲ್ಲಿ ಜಮೀನು ಕೊಡಿಸುವ ನಿಟ್ಟಿನಲ್ಲಿ ಶಾಂತವೀರ ಶ್ರೀಗಳ ಕೆಲಸ ಸ್ಮರಣೀಯ.
| ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿ.
====
ಬೆಂಗಳೂರಿನಲ್ಲಿ ನಮ್ಮೆಲ್ಲ ಮಠಗಳಿಗೆ ಜಾಗ ಕೊಡಿಸುವಲ್ಲಿ ಅವರ ತಾಳ್ಮೆ ಅಗಾಧ. ಮುಂದುವರೆದು ಯಾವುದಾದರೂ ನದಿ ದಡದಲ್ಲಿ 15-20 ಎಕರೆ ಜಾಗದಲ್ಲಿ ಹಿಂದುಳಿದ, ದಲಿತ ಮಠಗಳಿಂದ ಸಂಸ್ಕಾರ ನೀಡುವ ಕೆಲಸ ಮಾಡುವುದು ನಮ್ಮ ಹಾಗೂ ಶಾಂತವೀರ ಸ್ವಾಮೀಜಿ ಕನಸು.
| ಶ್ರೀ ನಿರಂಜನಾನಂದಪುರಿ ಸ್ವಾಮೀಜಿ.
====
ಎಲ್ಲ ಮಠಾಧೀಶರು ಒಂದು ವೇದಿಕೆ, ಒಕ್ಕೂಟದಲ್ಲಿದ್ದು ಸಾಧನೆ ಮಾಡುವ ಮೂಲಕ ಇಡೀ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಸ್ವಾಮೀಜಿಗಳಂತೆ ಎಲ್ಲರೂ ಒಂದೇ ಎಂಬ ಭಾವನೆ ಹೊಂದಿದರೆ ಸಮಾಜದಲ್ಲಿ ಸಂಘರ್ಷಕ್ಕೆ ಅವಕಾಶವೇ ಇರುವುದಿಲ್ಲ.
| ಕೆ.ಎಸ್.ನವೀನ್, ವಿಧಾನ ಪರಿಷತ್ ಸದಸ್ಯರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
