ಲೋಕಸಮರ 2024
ಅಖಾಡಕ್ಕೆ ರಾಜಾಹುಲಿ ಎಂಟ್ರಿ | ಶಮನವಾಯ್ತು ಚಿತ್ರದುರ್ಗ ಬಿಜೆಪಿ ಬಂಡಾಯ
CHITRADURGA NEWS | 1 APRIL 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಮೀಸಲು ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್ ಬಂಡಾಯದ ಭಾವುಟ ಹಾರಿಸಿದ್ದರು. ಪಕ್ಷೇತರವಾಗಿ ಸ್ಪರ್ಧಿಸಲು ಸಹ ಸಕಲ ಸಿದ್ಧತೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆ ಗಮನಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ ಎಂಟ್ರಿಯಾಗಿ ಬಂಡಾಯ ಶಮನಗೊಳಿಸಿದ್ದಾರೆ.
ಸೋಮವಾರ ಸಂಜೆ ಬೆಂಗಳೂರಿಗೆ ಪುತ್ರನನ್ನು ಕರೆದುಕೊಂಡು ಬರುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಸಕ ಎಂ.ಚಂದ್ರಪ್ಪ ತಿಳಿಸಿದ್ದಾರೆ. ಕೂಡಲೇ ಪುತ್ರ ಹಾಗೂ ಬೆಂಬಲಿಗರ ಜತೆ ಬೆಂಗಳೂರಿಗೆ ತೆರಳಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಂದ್ರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಚಂದ್ರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಕೆಲಸ ಮಾಡಲು ಚಂದ್ರಪ್ಪ ಹಾಗೂ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಪುತ್ರ ರಘುಚಂದನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕ್ಲಿಕ್ ಮಾಡಿ ಓದಿ: ಅಪ್ಪ–ಮಗನ ಸಂಬಂಧ ಕೆಡಿಸಲು ಬರಬೇಡ | ತಿಪ್ಪಾರೆಡ್ಡಿಗೆ ಶಾಸಕ ಎಂ.ಚಂದ್ರಪ್ಪ ಎಚ್ಚರಿಕೆ
‘ಯಡಿಯೂರಪ್ಪ ಮತ್ತು ವಿಜಯೇಂದ್ರ ನಮಗೆ ಯಾವತ್ತೂ ಅನ್ಯಾಯ ಮಾಡಿದವರಲ್ಲ. ಅವರು ನನ್ನೊಂದಿಗೆ ಮತ್ತು ಬೆಂಬಲಿಗರ ಜೊತೆ ಮಾತಾಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ನನ್ನ ಮಗ ಪಕ್ಷೇತರನಾಗಿ ಸ್ಪರ್ಧೆ ಮಾಡುವುದಿಲ್ಲ. ನಾವು ಬಿಜೆಪಿ ಪರ ಕೆಲಸ ಮಾಡುತ್ತೇವೆ. ಅದು ಅನಿವಾರ್ಯ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಪ್ರಚಾರದಲ್ಲಿ ಭಾಗಿಯಾಗುತ್ತೇವೆ. ಪುತ್ರ ರಘುಚಂದನ್‌ಗೆ ಮುಂದೆ ಉತ್ತಮ ಅವಕಾಶ ನೀಡುವ ವಿಶ್ವಾಸ ಇದೆ’ ಎಂದು ಶಾಸಕ ಚಂದ್ರಪ್ಪ ತಿಳಿಸಿದ್ದಾರೆ.
‘ಯಡಿಯೂರಪ್ಪ ಅವರು ತಂದೆ ಸ್ಥಾನದಲ್ಲಿದ್ದಾರೆ, ಅವರ ಮಾತನ್ನು ಕೇಳುತ್ತೇವೆ. ಅವರ ನೆರಳಲ್ಲೇ ರಾಜಕೀಯಕ್ಕೆ ಬಂದಿದ್ದೇವೆ. ಸಾಹೇಬರನ್ನು ನಂಬಿ ಕೆಜೆಪಿ ಕಟ್ಟಿದಾಗ, ಮತ್ತೆ ಬಿಜೆಪಿಗೆ ಬಂದಾಗ ಅಚಲವಾಗಿ ನಿಂತಿದ್ದೆವು. ಬಿಜೆಪಿ ಅಭ್ಯರ್ಥಿಗೆ ನಾವು ಬೆಂಬಲ ಕೊಡುವ ತೀರ್ಮಾನ ಮಾಡಿದ್ದೇವೆ. ನರೇಂದ್ರ ಮೋದಿ ಕೈಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ರಘುಚಂದನ್ ಸ್ಪಷ್ಟಪಡಿಸಿದ್ದಾರೆ.