CHITRADURGA NEWS | 04 October 2026
ಚಿತ್ರದುರ್ಗ: ಜೂಜಾಟ ಆಡುವ ಮಾನ್ಸೂನ್‍ನೊಂದಿಗೆ ಈ ಬಾರಿ ಜಾಗತಿಕ ಎಲ್ ನಿನೋ ಪರಿಣಾಮ ಜೊತೆಗೂಡಿ, ರಾಜ್ಯಾದ್ಯಂತ ಬರಗಾಲ ತಂದೊಡ್ಡಿದೆ. ಮೊದಲ ಹಂತದಲ್ಲಿ ಬರ ಘೋಷಣೆಯಾದ ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ಹಳ್ಳಿಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ರೈತರ ಅಸಾಯಕತೆ ಹಾಗೂ ಭೀಕರ ಕ್ಷಾಮವನ್ನು ಕಣ್ಣಾರೆ ಕಂಡ ತಂಡ, ರೈತರ ದುಸ್ಥಿತಿಗೆ ಮಮ್ಮಲ ಮರುಗಿತು.
ಇದನ್ನೂ ಓದಿ: ಹಿಂದುಳಿದ ವರ್ಗಗಳ ನಿಗಮಗಳ ಸಾಲಸೌಲಭ್ಯಕ್ಕೆ ಅರ್ಜಿ | ಅ.15ರವರೆಗೆ ವಿಸ್ತರಣೆ
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ನೇತೃತ್ವದಲ್ಲಿ, ಉಪನಿರ್ದೇಶಕ ಚೇತ್ ರಾಮ್ ಮೀನಾ, ಕೇಂದ್ರದ ನೀತಿ ಆಯೋಗದ ಓಎಸ್‍ಡಿ ಕರ್ನಲ್ ಅಮರೇಂದ್ರ ಸಿಂಗ್, ಜಲಸಂಪನ್ಮೂಲ ಹಾಗೂ ನದಿ ಪುನಶ್ಚೇತನ ನಿದೇರ್ಶಕ ಡಾ.ಜೆ.ಹರ್ಷ ಅವರ ಅಧ್ಯಯನ ತಂಡ, ಮೊದಲಿಗೆ ಹಿರಿಯೂರು ತಾಲ್ಲೂಕು, ಧರ್ಮಪುರ ಹೋಬಳಿಯ ಸಕ್ಕರ ಗ್ರಾಮದ ತಿರುಮಲಪ್ಪ ನವರ ಜಮೀನಿಗೆ ಭೇಟಿ ನೀಡಿತು.
ಸುಮಾರು 2.5 ಎಕೆರೆ ಜಮೀನಿನಲ್ಲಿ 1 ಕ್ವಿಂಟಾಲ್ ಶೇಂಗಾ ಬೀಜ ಬಿತ್ತಿರುವ ತಿರುಮಲಪ್ಪ, ಬಿತ್ತನೆ ಹಾಗೂ ರಸಗೊಬ್ಬರಕ್ಕಾಗಿ ಸುಮಾರು ರೂ.86,893 ಖರ್ಚು ಮಾಡಿದ್ದಾರೆ. ಮಳೆಯಿಲ್ಲದೆ ಕಾರಣ ಶೇಂಗಾ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಈಗಾಗಲೇ ರೂ. 1 ಲಕ್ಷ ನಷ್ಟ ಅನುಭವಿಸಿರುವ ರೈತ ತಿರುಮಲಪ್ಪ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಕೇಂದ್ರ ಅಧ್ಯಯನ ತಂಡ ಎದುರು ಅಸಹಾಯಕತೆ ತೊಡಿಕೊಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ನೆರವಿಗೆ ಆಗಮಿಸುವಂತೆ ರೈತ ತಿರುಮಲಪ್ಪ ಮನವಿ ಮಾಡಿದರು.
ಪಕ್ಕದ ಮುಕುಂದಪ್ಪನವರ ಜಮೀನಿನಲ್ಲಿ ಅಂರ್ತಜಲ ಮಟ್ಟ ಕುಸಿದು, ನೀರಾವರಿ ಆಶ್ರಿತ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳು ಕುಂಠಿತವಾಗಿರುವುದನ್ನು ವೀಕ್ಷಿಸಿದ ತಂಡ, ಇನ್ನೊಂದು ಪಕ್ಕದಲ್ಲಿ ಈಗಾಗಲೇ ಓಣಗಿರುವ ಶೇಂಗಾ ಬೆಳೆಯನ್ನು ಕತ್ತರಿಸಿ ತಂದು ಮನೆಯ ಮುಂದೆ ಒಟ್ಟು ಮಾಡಿದ್ದ ರೈತ ನಾಗರಾಜ ಅವರನ್ನು ಭೇಟಿ ಮಾಡಿತು.
ಇದನ್ನೂ ಓದಿ: ಗೂಳಯ್ಯನಹಟ್ಟಿ ಮೊರಾರ್ಜಿ ಶಾಲೆಯ 12 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ಗೆ ಆಯ್ಕೆ
ಈ ವೇಳೆ ನಾಗರಾಜ ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದ್ದು, ಬೆಳೆ ಕೈಗೆ ಸಿಗುವ ಸಂಭವ ಕ್ಷೀಣಿಸಿದ್ದರಿಂದ, ಮನೆಯ ಜಾನುವಾರುಗಳಿಗೆ ಮೇವಿನ ಸುಲುವಾಗಿ ಬೆಳೆ ಕಟಾವು ಮಾಡಿರುವುದಾಗಿ ತಿಳಿಸಿದರು. ಸುಮಾರು 10 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತಿ ನಷ್ಟ ಹೊಂದಿದ ರೈತ ತಿಪ್ಪಯ್ಯನವರ ಹೊಲಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿತು.
ಹೊಲದಲ್ಲಿ ಕೊರೆಸಿರುವ ಬೋರ್‍ವಲ್‍ಗಳು ನೀರು ಸಿಗದೆ ವಿಫಲಗೊಂಡಿವೆ. ಈ ಬಾರಿ ಮೆಳೆ ನೆಚ್ಚಿಕೊಂಡು ರೂ.62,025 ಖರ್ಚು ಮಾಡಿ ತೊಗರಿ ಬಿತ್ತಿದ್ದೇನೆ. ಆದರೆ ಸೂಕ್ತ ಮಳೆ ಇರದ ಕಾರಣ ತೊಗರಿ ಗಿಡಗಳು ಟಿಸಿಲು ಒಡೆಯದೇ, ಬೆಳವಣಿಗೆ ಸಂಪೂರ್ಣ ಕುಂಠಿತವಾಗಿದೆ. ಒಂದು ಕಾಳು ತೊಗರಿಯೂ ಸಿಗುವುದಿಲ್ಲ. ಸುಮಾರು 3 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿಲಿದೆ. ಧರ್ಮಪುರ ಹೋಬಳಿಯಲ್ಲಿ ಮಳೆ ನೆಚ್ಚಿಕೊಂಡು ಬಿತ್ತನೆ ಮಾಡಿದ ಎಲ್ಲ ರೈತರ ಪರಿಸ್ಥಿತಿ ಹೀಗೆ ಇದೇ ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಕೃಷಿಕ ತಿಪ್ಪಯ್ಯ ಕೇಂದ್ರ ಅಧ್ಯಯನ ತಂಡದ ಮುಂದೆ ಬರಗಾಲದ ತೀವ್ರತೆಯನ್ನು ಅನಾವರಣ ಮಾಡಿದರು.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ತುಳಸಿ ನೀರು ಕುಡಿಯುವುದು ಒಳ್ಳೆಯದೇ?
ನಂತರ ಹೋಬಳಿಯ ಹೊಸಕೆರೆ ಗ್ರಾಮಕ್ಕೆ ತೆರಳಿದ ತಂಡವು, ಜಲಮೂಲಗಳ ಸಂರಕ್ಷಣೆ ಯೋಜನೆಯಡಿ (ವಿಬಿ-ಜಿ ರಾಮ್ ಜಿ ಯೋಜನೆ) ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿತು. ಜೊತೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕಲ್ಪಿಸಲಾಗಿರುವ ಗೃಹ ನಳ ಸಂಪರ್ಕದ ಕಾರ್ಯಕ್ಷಮತೆಯನ್ನು ಪರೀಕ್ಷಿಸಿತು. ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ, ಮಳೆಯಿಂದ ನಷ್ಟ ಉಂಟಾದ ತೊಗರಿ, ಹುರುಳಿ, ಮಿಡಿ ಸೌತೆ ಬೆಳಗಳನ್ನು ವೀಕ್ಷಿಸಿತು.
ರೈತರೊಂದಿಗೆ ಸಂವಾದ ಹಾಗೂ ಮನವಿ ಸ್ವೀಕಾರ:
ಕೇಂದ್ರ ಬರ ಅಧ್ಯಯನ ತಂಡವು ಪರುಶುರಾಮಪುರ ಹೋಬಳಿಯ ರೈತರ ಸಂಪರ್ಕ ಕೇಂದ್ರ ಆವರಣದಲ್ಲಿನ ರೈತ ಭವನದಲ್ಲಿ ಸ್ಥಳೀಯ ರೈತರೊಂದಿಗೆ ಸಂವಾದ ನಡಿಸಿ, ಮನವಿ ಸ್ವೀಕರಿಸಿತು.
ರೈತಮುಖಂಡ ಚಿಕ್ಕಣ್ಣ ಮಾತನಾಡಿ, ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಬಿತ್ತನೆಗಾಗಿ ಪ್ರತಿ ಎಕರೆಗೆ ರೂ.30,000 ದಿಂದ ರೂ. 50,000 ವರೆಗೆ ವೆಚ್ಚ ಮಾಡಲಾಗಿದ್ದು, ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಆದ್ದರಿಂದ, ಪ್ರತಿ ಹೆಕ್ಟೇರ್‍ಗೆ ರೂ.40,000 ಅಥವಾ ಪ್ರತಿ ಎಕರೆಗೆ ಕನಿಷ್ಠ ರೂ.20,000 ಪರಿಹಾರ ಧನ ನೀಡಬೇಕು ಎಂದು ರೈತ ನಾಯಕರು ಒತ್ತಾಯಿಸಿದರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಅದ್ದೂರಿ ಶೊಭಾಯಾತ್ರೆ | ಹೈಕೋರ್ಟ್ ನ್ಯಾಯವಾದಿ ಅರುಣ್ ಶ್ಯಾಮ್ ಚಾಲನೆ
2019 ರಿಂದಲೂ ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆಯಡಿ ಭಾಗವಾದ ರೈತ ಕುಟುಂಬಗಳಿಗೆ ಆರ್ಥಿಕ ನೆರವು ಸಿಗುತ್ತಿಲ್ಲ. ಕೂಡಲೇ ತಾಂತ್ರಿಕ ಅಡಣೆಯನ್ನು ನಿವಾರಿಸಿ, ಭಾಗವಾದ ಕುಟುಂಬ ರೈತರಿಗೂ ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆ ಲಾಭ ದೊರೆಯುವಂತೆ ಮಾಡಬೇಕು. ಪ್ರಸ್ತುತ ಖಾಸಗಿ ಬ್ಯಾಂಕ್‍ಗಳ ಏಕಸ್ವಾಮ್ಯದಿಂದಾಗಿ ಹೋಬಳಿಯ ಸಾಮಾನ್ಯ ರೈತರಿಗೆ ವ್ಯವಹಾರ ಮಾಡಲು ತೊಂದರೆಯಾಗುತ್ತಿದೆ. ಆದ್ದರಿಂದ ಕೆನರಾ ಬ್ಯಾಂಕ್ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ರಾಷ್ಟ್ರೀಕೃತ ಬ್ಯಾಂಕ್‍ಗಳ ಶಾಖೆಗಳನ್ನು ತೆರೆಯಬೇಕು ಎಂದು ಮನವಿ ಮಾಡಿದರು. ರೈತರ ಸಮಸ್ಯೆಗಳಿಗೆ ತಂಡವು ಧನಾತ್ಮಕವಾಗಿ ಸ್ಪಂದಿಸಿ, ಉತ್ತಮ ತೀರ್ಮಾನದ ಭರವಸೆ ನೀಡಿತು.
ಶಾಶ್ವತ ಬರ ಪೀಡಿತ ಜಿಲ್ಲೆ ಘೋಷಣೆ ಒತ್ತಾಯ:
ದೊಡ್ಡೇರಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿದ ವೇಳೆ, ಕೇಂದ್ರ ಅಧ್ಯಯನ ತಂಡಕ್ಕೆ ರೈತರ ಮುಖಂಡ ಭೂತಯ್ಯನವರ ನಿಯೋಗ ಭೇಟಿ, ಜಿಲ್ಲೆಯನ್ನು ಶಾಶ್ವತ ಬರ ಪೀಡಿತ ಎಂದು ಘೋಷಣೆ ಮಾಡುವಂತೆ ಒತ್ತಾಯ ಮಾಡಿತು. ಕೂಡಲೇ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪಿಸುವಂತೆ ಮನವಿ ಮಾಡಿತು. ಬಳಿಕೆ ಕೇಂದ್ರ ತಂಡ ಕುರುಡಿಹಳ್ಳಿಯಲ್ಲಿ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿತು.
ಇದನ್ನೂ ಓದಿ: ಊಟದ ನಂತರ ಬೆಚ್ಚಗಿನ ನೀರು ಕುಡಿದರೆ ಏನಾಗುತ್ತದೆ ಗೊತ್ತಾ!
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ರಮ್ಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಸೇರಿದಂತೆ ಜಿಲ್ಲೆ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

