CHITRADURGA NEWS | 10 OCTOBER 2026
ಚಿತ್ರದುರ್ಗ: ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ಆರೋಗ್ಯ ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಇಂತಹ ಚಟುವಟಿಕೆಗಳ ಕುರಿತು ಮಾಹಿತಿ ಇದ್ದರೆ 112 ಉಚಿತ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹೇಳಿದರು.
ಇದನ್ನೂ ಓದಿ: ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ | 1 ಸಾವಿರ ಕೊಳವೆಬಾವಿಗಳ ಮರುಪೂರಣಕ್ಕೆ ಜಿ.ಪಂ. ಸಿಇಒ ಸೂಚನೆ
ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸಮಾಜಶಾಸ್ತ್ರ ವಿಭಾಗದ ವೇದಿಕೆ ಉದ್ಘಾಟನೆ, ವಿಶ್ವ ಹಿರಿಯರ ದಿನಾಚರಣೆ ಹಾಗೂ ನಶಾಮುಕ್ತ ಭಾರತ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರವಿದ್ದು, ಮಾದಕ ವಸ್ತುಗಳ ನಿರ್ಮೂಲನೆಗೆ ಕೈಜೋಡಿಸಬೇಕು. ಚಲನಚಿತ್ರಗಳು ಹಾಗೂ ಜಾಹೀರಾತುಗಳ ಮೂಲಕ ನೀಡುವ ನಶಾಮುಕ್ತ ಭಾರತದ ಸಂದೇಶಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಅಧಿಕಾರಿ ಗಿರೀಶ್ ಸಿ.ಎಚ್. ಮಾತನಾಡಿ, ಮಾದಕ ವಸ್ತುಗಳ ಸ್ವರೂಪ, ವ್ಯಸನಕ್ಕೆ ಒಳಗಾಗುವ ಕಾರಣಗಳು, ವ್ಯಸನದಿಂದ ಹೊರಬರಲು ಎದುರಾಗುವ ಸವಾಲುಗಳು ಹಾಗೂ ವ್ಯಕ್ತಿಯ ದೈನಂದಿನ ಜೀವನ ಮತ್ತು ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆ ಕೊಲೆ | ಆರೋಪಿ ಬಂಧನ
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ದಿವ್ಯ ಅಕ್ಕನವರು ವಿದ್ಯಾರ್ಥಿಗಳಿಗೆ ನಶಾಮುಕ್ತ ಜೀವನದ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಣಾಯಾಮ ಹಾಗೂ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಆರೋಗ್ಯಕರ ಬದುಕು ನಡೆಸಬಹುದು ಎಂದರು.
ನಿವೃತ್ತ ಸಹ ಪ್ರಾಧ್ಯಾಪಕ ಶಿವಕುಮಾರ್ ಎಸ್.ಬಿ. ಅವರು ವೃದ್ಧಾಪ್ಯದಲ್ಲಿ ಹಿರಿಯರು ಎದುರಿಸುವ ಸಮಸ್ಯೆಗಳು ಹಾಗೂ ಯುವಜನರು ಹಿರಿಯರನ್ನು ಗೌರವದಿಂದ ನೋಡಿಕೊಳ್ಳುವ ಅಗತ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ ಮಾತನಾಡಿ, ಸಾಮಾಜಿಕ ಸಮಸ್ಯೆಗಳ ಕುರಿತು ಸರಿಯಾದ ಅರಿವು ಹೊಂದುವ ಮೂಲಕ ಉತ್ತಮ ಜೀವನ ನಡೆಸಬಹುದು. ಯುವಜನರು ಹಿರಿಯರಿಗೆ ಗೌರವ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಮೀಸಲಾತಿ | ಯಾವ ಕ್ಷೇತ್ರಕ್ಕೆ ಯಾವ ಮೀಸಲು?
ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಟಿ.ಎಸ್. ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ಪ್ರೊ. ಎಂ.ಎಸ್. ಪರಮೇಶ್ವರ ಉಪಸ್ಥಿತರಿದ್ದರು. 2025-26ನೇ ಸಾಲಿನಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವರ್ಷಿತಾ ಮತ್ತು ಐಶ್ವರ್ಯ ಹನಿಗವನ ಹಾಗೂ ಚುಟುಕುಗಳನ್ನು ವಾಚಿಸಿದರು. ಮಡಿಹ ಮತ್ತು ಸಬ್ರೀನ್ ತಾಜಾ ತಮ್ಮ ಅನಿಸಿಕೆ ಹಂಚಿಕೊಂಡರು. ಕಾವೇರಿ ಸ್ವಾಗತಿಸಿದರು. ಸರಸ್ವತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಲಾವಣ್ಯ ವಂದಿಸಿದರು. ಶ್ರೇಯ ಎಂ. ಹಾಗೂ ಸೃಷ್ಟಿ ಎ. ನಿರೂಪಿಸಿದರು. ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
