CHITRADURGA NEWS | 22 OCTOBER 2026
ಚಿತ್ರದುರ್ಗ: ಚಿತ್ರದುರ್ಗದ ಸರಸ್ವತಿ ವಿದ್ಯಾಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಸ್ವತಿ ಕಾನೂನು ಕಾಲೇಜು 60 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು, ಅ.24ರಂದು ವಜ್ರಮಹೋತ್ಸವ ಸಂಭ್ರಮ ಆಚರಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ವಕೀಲ ಫಾತ್ಯರಾಜನ್ ತಿಳಿಸಿದರು.
ಇದನ್ನೂ ಓದಿ: ದುಶ್ಚಟಗಳಿಂದ ದೂರವಿದ್ದರೆ ನೆಮ್ಮದಿಯ ಜೀವನ ಸಾಧ್ಯ
ನಗರದ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಾನೂನು ಶಿಕ್ಷಣ ಒದಗಿಸುವ ಉದ್ದೇಶದಿಂದ 1965ರಲ್ಲಿ ಕಾಲೇಜು ಸ್ಥಾಪಿಸಲಾಯಿತು. ಅಂದಿನ ಭಾರತದ ಉಪಪ್ರಧಾನಿ ಮುರಾರ್ಜಿ ದೇಸಾಯಿ ಕಾಲೇಜನ್ನು ಉದ್ಘಾಟಿಸಿದ್ದರು. ಆರು ದಶಕಗಳ ಅವಧಿಯಲ್ಲಿ ಸಾವಿರಾರು ಕಾನೂನು ಪದವೀಧರರನ್ನು ರೂಪಿಸಿದ್ದು, ಹಳೆಯ ವಿದ್ಯಾರ್ಥಿಗಳು ಉಚ್ಚ ನ್ಯಾಯಾಲಯ, ಜಿಲ್ಲಾ ಮತ್ತು ಕಿರಿಯ ಶ್ರೇಣಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ, ಸರ್ಕಾರಿ ವಕೀಲರಾಗಿ, ಪೊಲೀಸ್ ಅಧಿಕಾರಿಗಳಾಗಿ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
1964ರಲ್ಲಿ ಸರಸ್ವತಿ ವಿದ್ಯಾಸಂಸ್ಥೆ ಸ್ಥಾಪನೆಯಾಯಿತು. ಕಾಲೇಜಿನಲ್ಲಿ ಆರಂಭದಲ್ಲಿ ಮೂರು ವರ್ಷದ ಕಾನೂನು ಪದವಿ ಕೋರ್ಸ್ ಆರಂಭಿಸಲಾಗಿದ್ದು, 1984ರಿಂದ ಐದು ವರ್ಷದ ಇಂಟಿಗ್ರೇಟೆಡ್ ಬಿ.ಎ. ಎಲ್ಎಲ್.ಬಿ. ಕೋರ್ಸ್ ಪ್ರಾರಂಭಿಸಲಾಯಿತು. 1985-86ನೇ ಶೈಕ್ಷಣಿಕ ವರ್ಷದಿಂದ ಸ್ವಂತ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ. 1998ರಲ್ಲಿ ಬೆಳ್ಳಿ ಹಬ್ಬ ಆಚರಿಸಲಾಯಿತು. 2015ರಲ್ಲಿ ಸುವರ್ಣ ಮಹೋತ್ಸವವನ್ನು ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಉದ್ಘಾಟಿಸಿದ್ದರು. ಅದೇ ವರ್ಷ ಕರ್ನಾಟಕ ಸರ್ಕಾರದಿಂದ ವೇತನಾನುದಾನ ದೊರೆತಿದ್ದು, ಕಾಲೇಜು ಅನುದಾನಿತ ಸಂಸ್ಥೆಯಾಗಿದೆ ಎಂದು ಹೇಳಿದರು.
ಕಾಲೇಜು ಪ್ರತಿ ವರ್ಷ ಉತ್ತಮ ಫಲಿತಾಂಶ ದಾಖಲಿಸುತ್ತಿದ್ದು, ಈವರೆಗೆ 103 ರ್ಯಾಂಕ್ಗಳನ್ನು ಗಳಿಸಿದೆ. ಅಣಕು ನ್ಯಾಯಾಲಯ ಸ್ಪರ್ಧೆಗಳು, ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಗಳು, ಕಾನೂನು ಶಿಬಿರಗಳು, ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು, ಅತಿಥಿ ಉಪನ್ಯಾಸಗಳು, ಕ್ರೀಡಾ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿಶಿಷ್ಟ ಸ್ಥಾನ ಪಡೆದಿದೆ. 2009ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಹುಬ್ಬಳ್ಳಿಯ ಶಾಶ್ವತ ಸಂಯೋಜನೆ ಹೊಂದಿದೆ ಎಂದರು.
ಇದನ್ನೂ ಓದಿ: ಶರಣ ಸಂಸ್ಕೃತಿ ಉತ್ಸವದಲ್ಲಿ ಶೂನ್ಯಪೀಠಾರೋಹಣ ವೈಭವ
ಎಲ್ಎಲ್.ಎಂ. ಕೋರ್ಸ್ ಆರಂಭ
ಸಂಸ್ಥೆಯ ಕಾರ್ಯದರ್ಶಿ ಹಾಗೂ ಹಿರಿಯ ವಕೀಲೆ ಡಿ.ಕೆ. ಶೀಲ ಮಾತನಾಡಿ, ಕಾಲೇಜಿನ ಅಭಿವೃದ್ಧಿಯ ಮತ್ತೊಂದು ಮೈಲಿಗಲ್ಲಾಗಿ 2026-27ನೇ ಶೈಕ್ಷಣಿಕ ವರ್ಷದಿಂದ ಸಂವಿಧಾನ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಎಲ್ಎಲ್.ಎಂ. ಕೋರ್ಸ್ ಆರಂಭಿಸಲು ಅನುಮತಿ ದೊರೆತಿದೆ. ಇದಕ್ಕಾಗಿ ಹೊಸ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಅ.24ರಂದು ಉದ್ಘಾಟನೆ ನೆರವೇರಲಿದೆ. ಬಳಿಕ ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ವಜ್ರಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳಾದ ಸುನಿಲ್ ದತ್ ಯಾದವ್, ಬಸವರಾಜ್ ಜಿ., ವೆಂಕಟೇಶ ನಾಯ್ಕ ಟಿ., ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಡಿ. ಮಹಾವರ್ಕರ್, ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ, ಸಂಸದ ಗೋವಿಂದ ಕಾರಜೋಳ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. (ಡಾ.) ರತ್ನಾ ಆರ್. ಭರಮಗೌಡರ್ ಭಾಗವಹಿಸಲಿದ್ದಾರೆ. ಫಾತ್ಯರಾಜನ್ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ಉಪಾಧ್ಯಕ್ಷ ಟಿ.ಎಚ್. ಬಸವರಾಜ್ ಉಪಸ್ಥಿತರಿರುವರು ಎಂದರು.
ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ
ಕಾಲೇಜಿನ ಪ್ರಾಂಶುಪಾಲೆ ಪ್ರೊ. (ಡಾ.) ಎಂ.ಎಸ್. ಸುಧಾದೇವಿ ಮಾತನಾಡಿ, ಗುಣಮಟ್ಟದ ಕಾನೂನು ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಹೊಂದಿರುವ ಸಮರ್ಥ ಹಾಗೂ ಸಮಾಜಮುಖಿ ಕಾನೂನು ವೃತ್ತಿಪರರನ್ನು ರೂಪಿಸುವುದು ಕಾಲೇಜಿನ ಮುಖ್ಯ ಧ್ಯೇಯವಾಗಿದೆ. ಇಲ್ಲಿ ವ್ಯಾಸಂಗ ಮಾಡಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಈರಣ್ಣ, ರಾಜಕುಮಾರ್, ಸ್ಮಿತಾ, ಸುಮಾ, ಮಧು, ರಾಧಾ, ರಾಜು, ಅಜಿತ್, ಮೊಹಮ್ಮದ್ ಷಮಾಶ್ರೀ ಆಲಿ ಸೇರಿದಂತೆ ಹಳೆಯ ವಿದ್ಯಾರ್ಥಿಗಳನ್ನು ಹಾಗೂ 2023-24ನೇ ಸಾಲಿನಲ್ಲಿ ಮೂರನೇ ರ್ಯಾಂಕ್ ಪಡೆದ ಸ್ವಾತಿಯವರನ್ನು ವಜ್ರಮಹೋತ್ಸವದಲ್ಲಿ ಗೌರವಿಸಲಾಗುವುದು ಎಂದರು.
ಇದನ್ನೂ ಓದಿ: ಪದವೀಧರ ಕ್ಷೇತ್ರದ ಚುನಾವಣೆ | ಚಿತ್ರದುರ್ಗ ಜಿಲ್ಲೆಯಲ್ಲಿ 55 ಮತಗಟ್ಟೆ ಸಿದ್ಧ
ಸುದ್ದಿಗೋಷ್ಠಿಯಲ್ಲಿ ವಕೀಲ ಅಂಜನೇಯ, ಸಹಾಯಕ ಪ್ರಾಧ್ಯಾಪಕ ಎನ್.ಡಿ. ಗೌಡ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ಮುರುಗೇಶ್ ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

