CHITRADURGA NEWS | 22 OCTOBER 2026
ಚಿತ್ರದುರ್ಗ: ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಗೆ ಇದೇ ಅಕ್ಟೋಬರ್ 23ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ.
ಇದನ್ನೂ ಓದಿ: ಮಧ್ವಾಚಾರ್ಯರ ತತ್ವಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ
ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್ ಕಾರ್ಯದ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ರಮ್ಯಾ ಅವರು, ಚುನಾವಣಾ ಕರ್ತವ್ಯ ನಿರ್ವಹಿಸಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಮತಗಟ್ಟೆಗಳಲ್ಲಿ ನಿರ್ವಹಿಸುವ ಕರ್ತವ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಚುನಾವಣೆಗಳು ಅತ್ಯಂತ ಸಂವೇದನಾಶೀಲವಾಗಿರುವುದರಿಂದ ಮೈಕ್ರೋ ಅಬ್ಸರ್ವರ್‍ಗಳು ಕಡ್ಡಾಯವಾಗಿ ಬೆಳಿಗ್ಗೆ 6:30 ರಿಂದ 6:45 ರೊಳಗೆ ತಮ್ಮ ಪೋಲಿಂಗ್ ಬೂತ್‍ಗಳನ್ನು ತಲುಪಬೇಕು. ಪೋಲಿಂಗ್ ಬೂತ್‍ನಲ್ಲಿ ಮತಗಟ್ಟೆ ಅಧಿಕಾರಿ ಹೊರತುಪಡಿಸಿ ಬೇರೆಯವರಿಗೆ ಮೊಬೈಲ್ ಬಳಕೆಗೆ ಅವಕಾಶವಿಲ್ಲ.
ಚುನಾವಣೆಗೆ ನೇಮಿಸಿದ ಎಲ್ಲಾ ಅಧಿಕಾರಿಗಳು ಒಂದು ತಂಡ ಎಂಬ ಭಾವನೆಯಿಂದ ಕಾರ್ಯನಿರ್ವಹಿಸಬೇಕು. ತರಬೇತಿ ಮತ್ತು ಚೆಕ್‍ಲಿಸ್ಟ್‍ಗಳನ್ನು ಸರಿಯಾಗಿ ಓದಿಕೊಂಡು ಗೊಂದಲಗಳಿಗೆ ಅವಕಾಶವಿಲ್ಲದಂತೆ ಕೆಲಸ ಮಾಡಬೇಕು. ಮತಗಟ್ಟೆಯಲ್ಲಿ ಯಾವುದೇ ಗೊಂದಲ ಅಥವಾ ತಪ್ಪುಗಳು ಕಂಡುಬಂದಲ್ಲಿ, ಮೊದಲು ನಿಮ್ಮ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಸೂಚಿಸಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ | ಹುತಾತ್ಮರ ತ್ಯಾಗ ಸ್ಮರಿಸಿ ಗೌರವ ನಮನ
ಈ ವೇಳೆ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲೆಯಲ್ಲಿ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಒಟ್ಟು 55 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನ ಪ್ರಕ್ರಿಯೆಗಾಗಿ ಪ್ರತಿಯೊಂದು ಮತಗಟ್ಟೆಗೆ ಪಿಆರ್‍ಒ, ಎಪಿಆರ್‍ಒ ಹಾಗೂ ಮೂವರು ಪೋಲಿಂಗ್ ಆಫೀಸರ್‍ಗಳು ಸೇರಿದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಯಾವುದೇ ತುರ್ತು ಸಂದರ್ಭ ಎದುರಿಸಲು 15 ಹೆಚ್ಚುವರಿ ತಂಡಗಳನ್ನು ಸಿದ್ಧವಾಗಿಡಲಾಗಿದೆ. ಈಗಾಗಲೇ ಚುನಾವಣಾ ಸಿಬ್ಬಂದಿಗೆ ಎರಡು ಹಂತದ ತರಬೇತಿ ನೀಡಲಾಗಿದ್ದು, ಮತಗಟ್ಟೆಗೆ ತೆರಳುವ ಮುನ್ನ ಪೋಲಿಂಗ್ ಸಾಮಗ್ರಿಗಳೊಂದಿಗೆ ಅವರ ಮತಗಟ್ಟೆಗಳಿಗೆ ತೆರಳಲು ಸೂಕ್ತ ವಾಹನ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಮತಗಟ್ಟೆಗೂ ಕೇಂದ್ರ ಸರ್ಕಾರದ ನೌಕರರನ್ನು ಸೂಕ್ಷ್ಮ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಇವರಿಗೆ ಈಗಾಗಲೇ ಚುನಾವಣಾಧಿಕಾರಿಗಳು ತರಬೇತಿ ನೀಡಿದ್ದಾರೆ. ಹೆಚ್ಚುವರಿಯಾಗಿ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರು ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪ್ರತಿಯೊಂದು ಮತಗಟ್ಟೆಯಲ್ಲೂ ವೆಬ್‍ಕಾಸ್ಟಿಂಗ್’ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿನ ಚುನಾವಣಾಧಿಕಾರಿಗಳ (ಆರ್‍ಒ) ಕೇಂದ್ರದಿಂದ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲ ಮತಗಟ್ಟೆಗಳಿಗೂ ಕುಡಿಯುವ ನೀರು, ವಿದ್ಯುತ್, ರ್ಯಾಂಪ್ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮತಗಟ್ಟೆಯ 200 ಮೀಟರ್ ಹೊರಗೆ ಮಾತ್ರ ಅಭ್ಯರ್ಥಿಗಳ ಸಹಾಯ ಕೇಂದ್ರಗಳಿಗೆ (10×10 ಶಾಮಿಯಾನ, 1 ಟೇಬಲ್, 2 ಕುರ್ಚಿ) ಅವಕಾಶ ನೀಡಲಾಗಿದೆ. 100 ಮೀಟರ್ ಅಂತರದಲ್ಲಿ ಮತದಾರರ ನೆರವಿಗಾಗಿ ಬಿಎಲ್‍ಒಗಳನ್ನು ಒಳಗೊಂಡ ‘ಸಹಾಯ ಕೇಂದ್ರ’ ಕಾರ್ಯನಿರ್ವಹಿಸಲಿದೆ. ಈ ಬಾರಿ ವಿಶೇಷವಾಗಿ ಎಲ್ಲಾ ಪದವೀಧರ ಮತದಾರರಿಗೆ ಮತದಾರರ ಚೀಟಿಯನ್ನು ವಿತರಿಸಲಾಗಿದೆ. ಇದರಲ್ಲಿ ಮತಗಟ್ಟೆ ವಿವರ, ಸರಣಿ ಸಂಖ್ಯೆ ಮತ್ತು ಮತಗಟ್ಟೆಯ ಲೊಕೇಶನ್ ಮಾಹಿತಿಯನ್ನು ಒಳಗೊಂಡಿದೆ.
ಇದನ್ನೂ ಓದಿ: ಜಾನಪದ ಸಾಹಿತ್ಯವು ಸಂಸ್ಕೃತಿ, ಪರಂಪರೆಯ ಉಳಿವಿಗೆ ಪೂರಕ | ಗುರು ಬಸವ ಮಹಾಸ್ವಾಮಿಗಳು
ಮತಗಟ್ಟೆಯ ಒಳಗೆ ಮೊಬೈಲ್, ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಪೆನ್ ಸೇರಿದಂತೆ ಯಾವುದೇ ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಚುನಾವಣಾ ಆಯೋಗವು ಸರಬರಾಜು ಮಾಡಿರುವ ವಿಶೇಷ ನೇರಳೆ ಬಣ್ಣದ ಪೆನ್‍ನಿಂದ ಮಾತ್ರ ಮತ ಚಲಾಯಿಸಬೇಕಾಗುತ್ತದೆ. ಹೊರಗಿನಿಂದ ತರುವ ವಸ್ತುಗಳನ್ನು ಬಿಎಲ್‍ಒಗಳು ಪರಿಶೀಲಿಸಿ ಸಂಗ್ರಹಿಸಿಟ್ಟುಕೊಂಡು, ಮತದಾನ ಮುಗಿದ ನಂತರ ಹಿಂತಿರುಗಿಸಲಿದ್ದಾರೆ.
ಚುನಾವಣಾ ಸಿಬ್ಬಂದಿ ಮತ್ತು ಸಾಮಗ್ರಿಗಳ ರವಾನೆಗೆ ಒಟ್ಟು 10 ರೂಟ್‍ಗಳನ್ನು ಮಾಡಲಾಗಿದೆ. 8 ರೂಟ್‍ಗಳಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಹಾಗೂ 2 ರೂಟ್‍ಗಳಿಗೆ ಟ್ರ್ಯಾಕ್ಸ್ ವಾಹನಗಳನ್ನು ನಿಯೋಜಿಸಲಾಗಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ, ಎಲ್ಲಾ ಸಿಬ್ಬಂದಿಗಳು ಅದೇ ವಾಹನಗಳಲ್ಲಿ ಡಿ-ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಬ್ಯಾಲಟ್ ಬಾಕ್ಸ್ ಹಾಗೂ ಇತರ ದಾಖಲೆಗಳನ್ನು ಕಲೆಕ್ಟ್ ಮಾಡಿದ ನಂತರ, ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಎಸ್ಕಾರ್ಟ್‍ನೊಂದಿಗೆ ಮುಚ್ಚಿದ ಕಂಟೇನರ್‍ನಲ್ಲಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಗೆ ತಲುಪಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.
ಮತ ಚಲಾಯಿಸಲು ಪರ್ಯಾಯ ದಾಖಲೆ:
ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಮತದಾರರು ತಮ್ಮ ಗುರುತಿಗಾಗಿ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯ ಜೊತೆಗೆಯೂ 10 ಪರ್ಯಾಯ ದಾಖಲೆಗಳನ್ನು ಬಳಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಕಸಾಪ ವತಿಯಿಂದ ರಾಜ್ಯ ಮಟ್ಟದ ಕವಿಗೋಷ್ಠಿ
ಮತದಾರರು ತಮ್ಮ ಗುರುತಿಗಾಗಿ ಮತದಾರರ ಗುರುತಿನ ಚೀಟಿಯ ಪರ್ಯಾಯವಾಗಿ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾನ್ ಕಾರ್ಡ್, ಭಾರತೀಯ ಪಾಸ್‍ಪೋರ್ಟ್, ಕೇಂದ್ರ/ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ನೀಡುವ ಸೇವಾ ಗುರುತಿನ ಚೀಟಿ, ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಅಧಿಕೃತ ಗುರುತಿನ ಚೀಟಿ, ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ನೀಡುವ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾಲಯದ ಮೂಲ ಪದವಿ/ಡಿಪ್ಲೊಮೊ ಪ್ರಮಾಣಪತ್ರ, ವಿಕಲಚೇತನರ ಪ್ರಮಾಣಪತ್ರ ಅಥವಾ ಕೇಂದ್ರ ಸರ್ಕಾರದ ಯು.ಡಿ.ಐ.ಡಿ ಕಾರ್ಡ್‍ಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.
ಮಸ್ಟರಿಂಗ್ ಕಾರ್ಯದ ವೇಳೆ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಭಾವಿಮಠ, ಚುನಾವಣೆ ತಹಶೀಲ್ದಾರ್ ಫಾತೀಮ ಬೆಬಿ ಸೇರಿದಂತೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್‍ಗಳು ಹಾಗೂ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

