CHITRADURGA NEWS | 22 OCTOBER 2026
ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ–2026ರ ಅಂಗವಾಗಿ ಚಿತ್ರದುರ್ಗದ ಶ್ರೀ ಮುರುಘಾಮಠದಲ್ಲಿ ಶೂನ್ಯಪೀಠಾರೋಹಣ ಕಾರ್ಯಕ್ರಮವನ್ನು ವೈಭವದಿಂದ ನೆರವೇರಿಸಲಾಯಿತು. ಶ್ರೀಮಠದ ರಾಜಾಂಗಣದ ಸದುರು ಕಟ್ಟೆಯಲ್ಲಿ ಮಠದ ಕರ್ತೃ ಶ್ರೀ ಮುರಿಗಿ ಶಾಂತವೀರ ಮಹಾಸ್ವಾಮಿಗಳ ಮೂರ್ತಿಯನ್ನು ಶೂನ್ಯಪೀಠಾರೋಹಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಾಯಿತು.
ಇದನ್ನೂ ಓದಿ: ಪದವೀಧರ ಕ್ಷೇತ್ರದ ಚುನಾವಣೆ | ಚಿತ್ರದುರ್ಗ ಜಿಲ್ಲೆಯಲ್ಲಿ 55 ಮತಗಟ್ಟೆ ಸಿದ್ಧ
ಶೂನ್ಯಪೀಠ ಪರಂಪರೆಯ ಮೂಲ ಮಠವಾಗಿರುವ ಶ್ರೀ ಮುರುಘಾಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಹರಗುರು ಚರಮೂರ್ತಿಗಳು, ಮಠಾಧೀಶರು, ಶ್ರೀಮಠದ ಆಡಳಿತ ಮಂಡಳಿ ಸದಸ್ಯರು, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಶ್ರೀ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಶ್ರೀ ಎಸ್.ಎನ್. ಚಂದ್ರಶೇಖರ್, ಡಾ. ಬಸವಪ್ರಭು ಸ್ವಾಮಿಗಳು ಸೇರಿದಂತೆ ನಾಡಿನ ವಿವಿಧ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೋಲಾಟ ಪದಗಳು, ಡೊಳ್ಳು ಕುಣಿತ, ವೀರಗಾಸೆ, ಭಜನಾ ತಂಡಗಳು, ಕಹಳೆ ಹಾಗೂ ವಿವಿಧ ಜನಪದ ಕಲಾತಂಡಗಳು ಶೂನ್ಯಪೀಠಾರೋಹಣ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದವು. ಆಗಮಿಸಿದ್ದ ಭಕ್ತರಿಗೆ ಮಹಾದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಬಸವಣ್ಣ, ಅಲ್ಲಮಪ್ರಭು ಭಾವಚಿತ್ರಗಳ ಮೆರವಣಿಗೆ
ಶ್ರೀ ಮುರುಘಾಮಠದ ಆವರಣದಲ್ಲಿ ಮಹಾಮಾನವತಾವಾದಿ ಬಸವಣ್ಣನವರು ಹಾಗೂ ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭುದೇವರ ಭಾವಚಿತ್ರಗಳೊಂದಿಗೆ ಪ್ರಾಚೀನ ಹಸ್ತಪ್ರತಿಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ನಡೆಸಲಾಯಿತು.
ಇದನ್ನೂ ಓದಿ: ಮಧ್ವಾಚಾರ್ಯರ ತತ್ವಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ
ಹಸ್ತಪ್ರತಿಗಳು ನಾಡಿನ ಜ್ಞಾನ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸದ ಅಮೂಲ್ಯ ಸಂಪತ್ತಾಗಿವೆ. ಬಸವಾದಿ ಶರಣರು ರಚಿಸಿದ ವಚನಗಳು ಸೇರಿದಂತೆ ಹಿಂದಿನ ಕಾಲದ ಮಹತ್ವದ ಸಾಹಿತ್ಯ ಕೃತಿಗಳು ಹಸ್ತಪ್ರತಿಗಳ ಮೂಲಕ ಉಳಿದುಬಂದಿವೆ. ಇವು ಕನ್ನಡ ಭಾಷೆ, ಸಾಂಸ್ಕೃತಿಕ ಪರಂಪರೆ ಹಾಗೂ ವಚನ ಸಾಹಿತ್ಯದ ಅಧ್ಯಯನಕ್ಕೆ ಪ್ರಮುಖ ಆಧಾರಗಳಾಗಿವೆ. ಮಠಮಾನ್ಯಗಳು ಇಂತಹ ಅಮೂಲ್ಯ ಸಂಪತ್ತನ್ನು ಹಿಂದಿನಿಂದಲೂ ಸಂರಕ್ಷಿಸಿಕೊಂಡು ಬಂದಿವೆ. ಹಸ್ತಪ್ರತಿಗಳನ್ನು ಧಾರ್ಮಿಕ ಪರಂಪರೆಯ ಸಂಕೇತವಾಗಿ ಮಾತ್ರವಲ್ಲದೆ ನಾಡಿನ ಜ್ಞಾನದ ಕಣಜವಾಗಿ ಗೌರವಿಸುವ ಉದ್ದೇಶದಿಂದ ಶ್ರೀಮಠದಲ್ಲಿ ಪ್ರತಿವರ್ಷ ವಿಶೇಷ ಸಂಪ್ರದಾಯದಂತೆ ಮೆರವಣಿಗೆ ನಡೆಸಲಾಗುತ್ತದೆ.
ಮೆರವಣಿಗೆಯಲ್ಲಿ ಖಾಸಾ ಬೇಡರ ಪಡೆ, ಹಗಲು ವೇಷಗಾರರು, ಮಹಿಳಾ ಡೊಳ್ಳು ಕುಣಿತ, ವೀರಗಾಸೆ, ಗೊರವನ ಕುಣಿತ, ಲಂಬಾಣಿ ನೃತ್ಯ, ನಾಸಿಕ್ ಡೋಲು, ನಗಾರಿ, ಪೂಜಾ ಕುಣಿತ, ಕೊಂಬು ಕಹಳೆ ಹಾಗೂ ವಿವಿಧ ಜನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಕಹಳೆಯ ನಿನಾದ ಮತ್ತು ಜನಪದ ಕಲಾಪ್ರದರ್ಶನಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದವು.
ಮೆರವಣಿಗೆಯಲ್ಲಿ ಶಿವಯೋಗಿ ಸಿ. ಕಳಸದ, ಡಾ. ಬಸವಕುಮಾರ ಮಹಾಸ್ವಾಮಿಗಳು, ಡಾ. ಬಸವಪ್ರಭು ಮಹಾಸ್ವಾಮಿಗಳು, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು, ವೇಮಾನಂದ ಸ್ವಾಮಿಗಳು, ಮೋಕ್ಷಪತಿ ಸ್ವಾಮಿಗಳು, ಆಡಳಿತ ಮಂಡಳಿ ಸದಸ್ಯ ಎನ್.ಎಸ್. ಚಂದ್ರಶೇಖರ್ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಭಾಗವಹಿಸಿದ್ದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ | ಹುತಾತ್ಮರ ತ್ಯಾಗ ಸ್ಮರಿಸಿ ಗೌರವ ನಮನ
ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯು ಕಾರ್ಯಕ್ರಮದ ಸುಗಮ ನಿರ್ವಹಣೆಗೆ ಸಹಕಾರ ನೀಡಿತು. ಶ್ರೀಮಠದ ಭಕ್ತರು ಹಾಗೂ ಸಾರ್ವಜನಿಕರು ಶೂನ್ಯಪೀಠಾರೋಹಣ ಮತ್ತು ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆಗೆ ಸಾಕ್ಷಿಯಾದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

