CHITRADURGA NEWS | 11 OCTOBER 2026
ಚಿತ್ರದುರ್ಗ: ಮೊಬೈಲ್, ಕಂಪ್ಯೂಟರ್ ಯುಗದಲ್ಲಿ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಗರದ 2ನೇ ಕ್ರಾಸ್‌ನ ಲಕ್ಷ್ಮಿ ಅವರ ಮನೆಯಲ್ಲಿ ಕಳೆದ 35 ವರ್ಷಗಳಿಂದ ನವರಾತ್ರಿ ಗೊಂಬೆ ಪ್ರದರ್ಶನದ ಸಂಪ್ರದಾಯ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ಇದನ್ನೂ ಓದಿ: ನವರಾತ್ರಿಯ ಮೊದಲ ದಿನ ಕಣಿವೆಮಾರಮ್ಮನಿಗೆ ಗಾಯತ್ರಿದೇವಿ ಅಲಂಕಾರ
ನವರಾತ್ರಿ ಸಂದರ್ಭದಲ್ಲಿ ಮನೆಯಲ್ಲಿ ವಿವಿಧ ಬಗೆಯ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪ್ರತಿದಿನ ಪೂಜೆ ಸಲ್ಲಿಸುವ ಲಕ್ಷ್ಮಿ, ಗೊಂಬೆಗಳನ್ನು ವೀಕ್ಷಿಸಲು ಬರುವ ಮಹಿಳೆಯರು ಸೇರಿದಂತೆ ಎಲ್ಲರಿಗೂ ಪ್ರಸಾದ ವಿತರಿಸುತ್ತಾರೆ. ಇವರ ಮನೆಯ ಗೊಂಬೆ ಪ್ರದರ್ಶನವು ಸುತ್ತಮುತ್ತಲಿನ ಜನರ ಗಮನ ಸೆಳೆಯುತ್ತಿದೆ.
ದಶಾವತಾರ, ನವದುರ್ಗೆ, ಕೃಷ್ಣನ ಬೆಣ್ಣೆ ಕಳ್ಳತನ, ಮೈಸೂರು ದಸರಾ ಅಂಬಾರಿ, ಅರಮನೆ, ಅಷ್ಟಲಕ್ಷ್ಮಿ, ಪಾಂಡುರಂಗ ವಿಠಲ, ಪುರಿ ಜಗನ್ನಾಥ ರಥಯಾತ್ರೆ, ನವನರಸಿಂಹ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಹಲವು ಪೌರಾಣಿಕ ಹಾಗೂ ಧಾರ್ಮಿಕ ವಿಷಯಗಳನ್ನು ಗೊಂಬೆಗಳ ಮೂಲಕ ಅನಾವರಣಗೊಳಿಸಲಾಗಿದೆ. ಇದರೊಂದಿಗೆ ಚಿತ್ರದುರ್ಗದ ಮಿರ್ಚಿ ಮಂಡಕ್ಕಿ ಅಂಗಡಿ, ಪಾನಿಪುರಿ, ಸಿಹಿ ತಿಂಡಿ ಅಂಗಡಿಗಳು, ಮದುವೆ, ಆರತಕ್ಷತೆ, ಸೀಮಂತ, ನಾಮಕರಣ, ಮಕ್ಕಳ ಕಿವಿ ಚುಚ್ಚುವ ಕಾರ್ಯಕ್ರಮ, ಶಾಲೆ, ಉದ್ಯಾನ, ಹೋಟೆಲ್, ಟೈಲರಿಂಗ್ ಸೇರಿದಂತೆ ದೈನಂದಿನ ಬದುಕಿನ ವಿವಿಧ ಸನ್ನಿವೇಶಗಳನ್ನೂ ಮನಮೋಹಕವಾಗಿ ರೂಪಿಸಲಾಗಿದೆ.
ಮಣಿ, ಪಿಂಗಾಣಿ, ಹಿತ್ತಾಳೆ, ಬಳಪದ ಕಲ್ಲು, ಮಣ್ಣಿನಿಂದ ತಯಾರಿಸಿದ ಗೊಂಬೆಗಳು ಸೇರಿದಂತೆ 400ಕ್ಕೂ ಹೆಚ್ಚು ಬಗೆಯ ಗೊಂಬೆಗಳು ಪ್ರದರ್ಶನದಲ್ಲಿವೆ. ಬೆಂಗಳೂರು, ತಿರುಪತಿ, ಮೈಸೂರು, ಶ್ರೀರಂಗಪಟ್ಟಣ ಹಾಗೂ ಚನ್ನಪಟ್ಟಣದಿಂದ ಗೊಂಬೆಗಳನ್ನು ಖರೀದಿಸಿ ಸಂಗ್ರಹಿಸಲಾಗಿದೆ. ಚಿತ್ರದುರ್ಗದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವ ಹಾಗೂ ಹಿಂದೂ ಮಹಾಗಣಪತಿ ಉತ್ಸವದ ಸಂದರ್ಭದಲ್ಲಿಯೂ ವಿಶೇಷ ವಸ್ತುಗಳನ್ನು ಖರೀದಿಸಿ ಪ್ರದರ್ಶನಕ್ಕೆ ಬಳಸಲಾಗುತ್ತದೆ.
ಇದನ್ನೂ ಓದಿ: ಡಾ.ಕೆ.ಎಂ.ವೀರೇಶ್ ಅವರ ಸೇವೆ ಸದಾ ಸ್ಮರಣೀಯ | ಲಿಂಗಾರೆಡ್ಡಿ
ಲಕ್ಷ್ಮಿ ಅವರ ಪುತ್ರಿ ಶ್ರೀಪ್ರಿಯಾ ಮಾತನಾಡಿ, ಅಜ್ಜಿ ಮತ್ತು ಅಮ್ಮ ಚಿಕ್ಕದಾಗಿ ಆರಂಭಿಸಿದ ಗೊಂಬೆ ಪ್ರದರ್ಶನವನ್ನು ಕಾಲಕ್ಕೆ ತಕ್ಕಂತೆ ವಿಸ್ತರಿಸಲಾಗಿದೆ. ಮನೆಯ ಕೆಲಸ, ಕುಟುಂಬದ ಜವಾಬ್ದಾರಿಗಳ ನಡುವೆಯೂ ಗೊಂಬೆಗಳನ್ನು ಜೋಡಿಸಲು ಎಂಟು ದಿನಗಳ ಪರಿಶ್ರಮ ಬೇಕಾಗುತ್ತದೆ. ಈ ಕಾರ್ಯದಲ್ಲಿ ಭಾರತಿ ಕೂಡ ಸಹಕರಿಸುತ್ತಾರೆ ಎಂದು ತಿಳಿಸಿದರು.
ಪ್ರತಿ ವರ್ಷ ಗೊಂಬೆಗಳ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ನವರಾತ್ರಿಯಲ್ಲಿ ತಿರುಪತಿ ಮತ್ತು ಮಂತ್ರಾಲಯದ ವಿಶೇಷ ಮಾದರಿಗಳನ್ನು ರೂಪಿಸುವ ಯೋಜನೆಯಿದೆ ಎಂದು ಲಕ್ಷ್ಮಿ ಹೇಳಿದರು. ನವರಾತ್ರಿ ಸಂದರ್ಭದಲ್ಲಿ ಐದು ದಿನಗಳ ಕಾಲ ಶ್ರೀನಿವಾಸ ಕಲ್ಯಾಣದ ಪ್ರದರ್ಶನವಿದ್ದು, ಪ್ರತಿದಿನ ಸಂಜೆ ಅರ್ಧ ಗಂಟೆ ಭಜನಾ ಮಂಡಳಿಗಳಿಂದ ಭಜನೆ ನಡೆಯುತ್ತದೆ.
ಇದನ್ನೂ ಓದಿ: ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸುವುದು ಆದ್ಯತೆ
ನವರಾತ್ರಿ ಮುಗಿದ ಬಳಿಕ ಪ್ರತಿಯೊಂದು ಗೊಂಬೆಯನ್ನೂ ಬಟ್ಟೆಯಲ್ಲಿ ಸುತ್ತಿ, ಹಳೆಯ ಟ್ರಂಕ್‌ಗಳಲ್ಲಿ ಮುಕ್ಕಾಗದಂತೆ ಜೋಪಾನವಾಗಿ ಸಂಗ್ರಹಿಸಿ ಮುಂದಿನ ವರ್ಷ ಮತ್ತೆ ಪ್ರದರ್ಶನಕ್ಕೆ ಸಿದ್ಧಪಡಿಸುವುದು ಸವಾಲಿನ ಕೆಲಸವಾಗಿದೆ. ಈ ಸಂಪ್ರದಾಯ ಮುಂದಿನ ಪೀಳಿಗೆಯಲ್ಲಿಯೂ ಮುಂದುವರಿಯಬೇಕು ಎಂಬುದು ತಮ್ಮ ಆಶಯ ಎಂದು ಲಕ್ಷ್ಮಿ ಹೇಳಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

