CHITRADURGA NEWS | 11 OCTOBER 2026
ಚಿತ್ರದುರ್ಗ: ರೈತರ ಕಷ್ಟಗಳಿಗೆ ಸ್ಪಂದಿಸುವುದು ಮತ್ತು ಕ್ಷೇತ್ರದ ಜನರ ಋಣ ತೀರಿಸುವುದು ತಮ್ಮ ಆದ್ಯ ಕರ್ತವ್ಯವಾಗಿದೆ. ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಿ, ರೈತರ ಕೃಷಿ ಚಟುವಟಿಕೆಗಳಿಗೆ ನಿರಂತರ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಇದನ್ನೂ ಓದಿ: ಹೆಚ್ಚು ಧ್ಯಾನದಿಂದ ವ್ಯಕ್ತಿ, ಕುಟುಂಬ ಮತ್ತು ಸಮಾಜ ಪ್ರಬುದ್ಧವಾಗುತ್ತದೆ
ಹೊಳಲ್ಕೆರೆ ಪಟ್ಟಣದ ಶಿವನಕೆರೆ ಪಂಪ್‌ಸೆಟ್ ಆವರಣದಲ್ಲಿ ಭಾನುವಾರ ನಡೆದ ಬಾಗಿನ ಸಮರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ ಹಾಗೂ ಆರ್ಥಿಕ ಭೇದವಿಲ್ಲದೆ ಕ್ಷೇತ್ರದ ಜನರ ಸೇವೆ ಮಾಡುವುದು ತಮ್ಮ ಧರ್ಮ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸದೆ, ರೈತರು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ತಾಲೂಕಿನ ಎಲ್ಲ ಕೆರೆಕಟ್ಟೆಗಳನ್ನು ತುಂಬಿಸಿ, ರೈತರ ಜಮೀನುಗಳು ಒಣಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಅನುದಾನ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೆರೆಗಳಿಗೆ ನೀರು ಹರಿಸುವುದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ಹಾಗೂ ವಿದ್ಯುತ್ ಪೂರೈಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ತ್ವರಿತಗೊಳಿಸಲಾಗುವುದು ಎಂದರು.
ತುಂಗಾ ನದಿಯಿಂದ ಗಾಜನೂರು ಅಣೆಕಟ್ಟಿನ ಮೂಲಕ 17.4 ಟಿಎಂಸಿ ನೀರನ್ನು ಭದ್ರಾ ಯೋಜನೆಗೆ ತಂದು ಹಂಚಿಕೆ ಮಾಡುವ ಉದ್ದೇಶವಿದೆ. ಗೊನೂರಿನಿಂದ ವಿವಿಧ ತಾಲೂಕುಗಳ ಕೆರೆಗಳಿಗೆ ನೀರು ಹರಿಸುವ ಯೋಜನೆಯಿಂದ ಮುಂದಿನ ಎಂಟರಿಂದ ಹತ್ತು ವರ್ಷಗಳಲ್ಲಿ ಕೆರೆಗಳು ಸಂಪೂರ್ಣವಾಗಿ ತುಂಬುವ ನಿರೀಕ್ಷೆಯಿದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಟವರ್‌ಗಳನ್ನು ನಿರ್ಮಿಸಿ ವಿದ್ಯುತ್ ತಂತಿಗಳನ್ನು ಅಳವಡಿಸಲಾಗಿದ್ದು, ನಿಗದಿತ ಅವಧಿಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮಾದಕ ವಸ್ತುಗಳಿಂದ ದೂರವಿರಿ, ಸಮಾಜದ ಸ್ವಾಸ್ಥ್ಯ ಕಾಪಾಡಿ
ಕುಡಿಯುವ ನೀರಿನ ಯೋಜನೆಗಾಗಿ ಈಗಾಗಲೇ ₹367 ಕೋಟಿ ವೆಚ್ಚ ಮಾಡಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ವೇಳೆಗೆ ಎಲ್ಲ ಗ್ರಾಮಗಳಿಗೂ ವಾಣಿವಿಲಾಸ ಸಾಗರದ ನೀರು ತಲುಪಿಸುವ ಭರವಸೆ ನೀಡಿದರು. ರೈತರಿಗೆ ಹತ್ತು ಗಂಟೆಗಳ ವಿದ್ಯುತ್ ಪೂರೈಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ರೈತರಿಗೆ ನೀರು ಮತ್ತು ಅಗತ್ಯ ಸೌಲಭ್ಯಗಳು ದೊರೆತಾಗ ಅವರ ಕುಟುಂಬಗಳ ಬದುಕಿಗೂ ಆಸರೆಯಾಗುತ್ತದೆ. ರೈತರ ಮುಖದಲ್ಲಿ ಮಂದಹಾಸ ಮೂಡಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದರು.
ನೀರಾವರಿ ಸೌಲಭ್ಯ ಕಲ್ಪಿಸುವ ಪ್ರಯತ್ನಗಳು ರೈತರ ಬದುಕಿನಲ್ಲಿ ಭರವಸೆ ಮೂಡಿಸಬೇಕು. ಎಲ್ಲ ರೈತರು ಸಂತೋಷದಿಂದ ಮತ್ತು ಸಮೃದ್ಧಿಯಿಂದ ಬದುಕುವಂತಾದಾಗ ಜನಪ್ರತಿನಿಧಿಗಳ ಸೇವೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ | 1 ಸಾವಿರ ಕೊಳವೆಬಾವಿಗಳ ಮರುಪೂರಣಕ್ಕೆ ಜಿ.ಪಂ. ಸಿಇಒ ಸೂಚನೆ
ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯದರ್ಶಿ ಮಾಧುರಿ ಗಿರೀಶ್, ನಾಗರಾಜ್, ಸಿದ್ದರಾಮಣ್ಣ, ಮಹಾಂತೇಶ್, ಶಿವಕುಮಾರ್, ಸಿದ್ದೇಶ್, ಮುರುಗೇಶ್, ಬಸವರಾಜು, ದೇವರಾಜು, ಮಂಜಣ್ಣ, ತಿಪ್ಪೇಸ್ವಾಮಿ, ಇಂದ್ರಣ್ಣ, ಅಶೋಕ್ ಕುಮಾರ್, ಸರಸ್ವತಿ, ಮಹೇಶ್ವರಪ್ಪ, ರಂಗಸ್ವಾಮಿ, ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

