CHITRADURGA NEWS | 06 SEPTEMBER 2025
ಚಿತ್ರದುರ್ಗ: ಜೀವನದಲ್ಲಿ ಒಳ್ಳೆ ಕೆಲಸ ಆರಂಭಿಸಿದರೆ ಅದು ಚರಿತ್ರೆಯಾಗುತ್ತದೆ. ಬಡವ ಸಾಲದ ಸುಳಿಯಲ್ಲಿ ಸಿಲುಕಿ ಮದುವೆಯಾಗುವುದಕ್ಕಿಂತ ಸ್ವಾಮಿಗಳ ಸಮ್ಮುಖದಲ್ಲಿ ಮದುವೆಯಾಗುವವರು ನಿಜವಾದ ಸಹೃದಯವುಳ್ಳ ಶ್ರೀಮಂತರು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಉತ್ತಮ ಸಮಾಜ ನಿರ್ಮಾಣದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ | ಶಾಸಕ ಡಾ.ಚಂದ್ರಪ್ಪ
ನಗರದ ಶ್ರೀ ಬಹನ್ಮಠದಲ್ಲಿ ನಡೆದ 35ನೇ ವರ್ಷದ 9 ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 7 ಜೋಡಿಗಳ ವಿವಾಹ ನೆರವೇರಿಸಿ, ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ.ಸರ್ವಪಲ್ಲಿ ರಾಧಾಕಷ್ಣನ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಶ್ರೀಗಳು,
ದುಡಿಯದೆ ಇರುವ ದುಡ್ಡು ನಮಗೆ ಶ್ರೀಮಂತಿಕೆ ಕೊಡಬಹುದು. ಆದರೆ ಅದರಿಂದ ನೆಮ್ಮದಿ ಸಿಗುವುದಿಲ್ಲ. ಚಿತ್ರದುರ್ಗದವರೇ ಆದ ಎಸ್.ನಿಜಲಿಂಗಪ್ಪನವರು ತಮ್ಮ ಹೆಸರಿಗೆ ಏನೂ ಮಾಡಿಕೊಳ್ಳದೆ ಇಂದು ಶ್ರೇಷ್ಠ ವ್ಯಕ್ತಿಗಳಾಗಿ ಪ್ರಾಮಾಣಿಕ ಜನಸೇವಕರಾಗಿ ನಮಗೆಲ್ಲ ಮಾದರಿಯಾಗಿದ್ದಾರೆ. ಇಂತಹ ನ್ಯಾಯಯುತ ಬದುಕು ನಮ್ಮದಾಗಬೇಕೆಂದರು.
ಕಷ್ಟಪಟ್ಟು ದುಡಿದ ದುಡ್ಡು ನಮ್ಮನ್ನು ಮೇಲೆತ್ತುತ್ತದೆ. ಬಸವಣ್ಣನವರು ಹೇಳುವಂತೆ ಪರ ಧನಕ್ಕೆ ಅಂಜಬೇಕು. ಯಾರೂ ಸಹ ಹಣ, ಅಧಿಕಾರ, ಬಂಗಾರ ತಿನ್ನಲು ಸಾಧ್ಯವಿಲ್ಲ. ಹಸಿವಾದಾಗ ಅನ್ನವನ್ನೇ ಸೇವಿಸಬೇಕು. ನವ ವಧು-ವರರು ಸತ್ಯಶುದ್ಧ ಕಾಯಕ ಮಾಡುತ್ತ ಸರಳವಾದ ಜೀವನ ಮಾಡಬೇಕು. ಹಣವಿದ್ದವರು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ.
ಇದನ್ನೂ ಓದಿ: ಶರಣ ಸಂಸ್ಕೃತಿ ಉತ್ಸವದಲ್ಲಿ ಕೃಷಿಮೇಳ, ವಸ್ತು ಪ್ರದರ್ಶನ | ಮುರುಘಾಮಠದಲ್ಲಿ ಪೂರ್ವ ಸಿದ್ದತಾ ಸಭೆ
ಹಾಗಾಗಿ ನಮ್ಮ ನಮ್ಮ ಕಾಯಕವನ್ನು ನಾವು ನಿರ್ವಹಿಸುತ್ತ ನೆಮ್ಮದಿಯನ್ನು ಕಾಣಬೇಕು. ಮರ್ಯಾದೆ, ಮಾತಿಗೆ ಅಂಜಿ ಕೆಲವರು ಸಾಲ ಮಾಡಿ ಮದುವೆ ಮಾಡಿ ಬದುಕನ್ನು ಸಾಲದ ಕೂಪಕ್ಕೆ ಈಡುಮಾಡುತ್ತಾರೆ. ಅದನ್ನು ತಪ್ಪಿಸಲು ಇಂಥ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು. ಸರಳವಾದ ಬದುಕು ಸಹಜವಾದ ವರ್ತನೆ ನಿಮ್ಮೆಲ್ಲರದಾಗಿರಲಿ. ತಮ್ಮ ಮೇಲೆ ಮುರುಘೇಶನ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ರಾಧಾಕಷ್ಣನ್ ಅವರು ಮೂಲತಃ ಶಿಕ್ಷಕರು. ಆದರೆ ಮುಂದೆ ಅವರು ಭಾರತದ ರಾಷ್ಟ್ರಪತಿಯಾಗುತ್ತಾರೆ. ಶಿಕ್ಷಕರು ನಮ್ಮ ಜೀವನದ ಶಿಲ್ಪಿಗಳು. ಪ್ರತಿಯೊಬ್ಬರ ಬದುಕನ್ನು ಉದ್ಧರಿಸುವವರು. ಶಿಕ್ಷಕ ವೃತ್ತಿ ಪವಿತ್ರವಾದುದು.
ವಿದ್ಯೆಯನ್ನು ಪ್ರತಿಯೊಬ್ಬರು ಕಲಿಯಬೇಕು. ಮಕ್ಕಳನ್ನು ತಿದ್ದಿ ತೀಡಿ ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಶಿಕ್ಷಕ ತುಂಬಾ ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಿಂದ ಅತ್ಯಂತ ಪ್ರೀತಿಯ ಗೌರವವನ್ನು ಸಂಪಾದಿಸಲು ಸಾಧ್ಯ.
ಶಿಕ್ಷಣವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಶಿಕ್ಷಣದಿಂದ ತಿಳುವಳಿಕೆ ಬರುತ್ತದೆ. ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜ್ಞಾನವೇ ಶಿಕ್ಷಣ ಎಂದು ಹೇಳಿದರು.
ಇದನ್ನೂ ಓದಿ: ಗುರುಭವನ ನಿರ್ಮಾಣಕ್ಕೆ ರೂ.2 ಕೋಟಿ | ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಡಿ.ಸುಧಾಕರ್ ಭರವಸೆ
ಅತ್ತೆ ಮತ್ತು ಸೊಸೆ ತಾಯಿ-ಮಗಳಂತೆ ಇರಬೇಕು. ಜೀವನದಲ್ಲಿ ಸುಖವೇ ಬರಲಿ ದುಃಖವೇ ಘಟಿಸಲಿ ಸಮಾಧಾನವಾಗಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಜೀವನ ಏರುಪೇರಾಗುತ್ತದೆ. ಒಬ್ಬರನ್ನೊಬ್ಬರು ಪರಸ್ಪರ ಅರಿತು ನಡೆಯಬೇಕೆಂದು ನುಡಿದರು.
ಶ್ರೀ ಮುರುಘೇಂದ್ರ ಸ್ವಾಮಿಗಳು ವೇದಿಕೆಯಲ್ಲಿದ್ದರು. ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಚಿನ್ಮಯ ದೇವರು ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

