ಹೊಳಲ್ಕೆರೆ
ಭವಿಷ್ಯ ನುಡಿಯುವ ಗಂಗೆ ಹೊಂಡ | ರಾಮಗಿರಿಯಲ್ಲಿ ಒಂದು ದಿನ ತಂಗಿದ್ದ ಪ್ರಭು ಶ್ರೀರಾಮ

CHITRADURGA NEWS | 22 JANUARY 2024
ಚಿತ್ರದುರ್ಗ (CHITRADURGA): ದೂರದ ಅಯೋಧ್ಯೆಯ ಶ್ರೀರಾಮಚಂದ್ರನಿಗೂ ರಾಮಗಿರಿಗೂ ನಂಟಿರುವುದು ಪುರಾಣಗಳಿಂದ ತಿಳಿದುಬರುತ್ತದೆ. ಸೀತೆಯನ್ನು ಹುಡುಕಿಕೊಂಡು ಲಂಕೆಗೆ ಹೊರಟಿದ್ದ ಶ್ರೀರಾಮ, ರಾಮಗಿರಿಯಲ್ಲಿ ಒಂದು ದಿನ ತಂಗಿದ್ದ ಎಂಬ ಐತಿಹ್ಯವಿದೆ. ಈ ಬಗ್ಗೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ನ್ಯಾಸ ಟ್ರಸ್ಟ್‌ನವರು ರಾಮಗಿರಿಯಲ್ಲಿ ಫಲಕ ಕೂಡ ಅಳವಡಿಸಿದ್ದಾರೆ.
‘ಹಿಂದೆ ರಾಮಗಿರಿಗೆ ಅಂಬ್ಲಿಹಳ್ಳಿ ಎಂಬ ಹೆಸರಿತ್ತು. ಈ ಪ್ರದೇಶ ದಟ್ಟ ಕಾಡಿನಿಂದ ಕೂಡಿತ್ತು. ಸನ್ಯಾಸಿಯಾಗಿದ್ದ ಕರಿಸಿದ್ದಯ್ಯ ಒಡೆಯರ್ ಬೆಟ್ಟದ ಮೇಲೆ ನೆಲೆಸಿರುತ್ತಾರೆ. ಲಂಕೆಗೆ ಹೊರಟಿದ್ದ ಶ್ರೀರಾಮ ರಾತ್ರಿಯಾದ್ದರಿಂದ ಬೆಟ್ಟದ ಮೇಲೆ ಉಳಿದುಕೊಳ್ಳುವುದಾಗಿ ಕರಿಸಿದ್ದಯ್ಯ ಅವರನ್ನು ಕೇಳಿಕೊಳ್ಳುತ್ತಾನೆ. ಆಗ ರಾಮನ ಗುರುತು ಹಿಡಿಯದ ಕರಿಸಿದ್ದಯ್ಯ ಯಾರೋ ಸಾಮಾನ್ಯ ವ್ಯಕ್ತಿ ಇರಬೇಕು ಎಂದು ಭಾವಿಸಿ ಆಶ್ರಯ ನೀಡುತ್ತಾರೆ’ ಎನ್ನುತ್ತಾರೆ ಗ್ರಾಮದ ಶಿಕ್ಷಕ ಗಂಗಾಧರಪ್ಪ.
ಇದನ್ನೂ ಓದಿ: ಸಾಲದ ಬಾಧೆ ತಾಳಲಾರದೆ ವಿಷ ಸೇವಿಸಿ ಮೃತಪಟ್ಟ ವ್ಯಕ್ತಿ

‘ಶ್ರೀರಾಮ ಬೆಳಿಗ್ಗೆ ಎದ್ದಾಗ ಸಂಧ್ಯಾವಂದನೆ, ಶಿವಪೂಜೆ ಮಾಡಲು ಸ್ನಾನಕ್ಕೆ ನೀರು ಸಿಗುತ್ತದೆಯೇ ಎಂದು ಕರಿಸಿದ್ದಯ್ಯ ಅವರನ್ನು ಕೇಳುತ್ತಾನೆ. ಪಕ್ಕದಲ್ಲೇ ಕಲ್ಯಾಣಿ ಇದ್ದು, ಅದರಲ್ಲಿ ನೀರು ಇರುವುದಾಗಿ ಹೇಳುತ್ತಾರೆ. ಆದರೆ, ಶ್ರೀರಾಮನಿಗೆ ಕಲ್ಯಾಣಿ ಕಾಣಿಸುವುದಿಲ್ಲ. ಆಗ ಬೆಟ್ಟದ ಮೇಲೆ ನಿಂತು ಭೂಮಿಗೆ ಬಾಣ ಹೊಡೆಯುತ್ತಾನೆ. ಅಲ್ಲಿ ಬಾವಿಯೊಂದು ಸೃಷ್ಟಿಯಾಗಿ ನೀರು ಚಿಮ್ಮುತ್ತದೆ. ಅದರಲ್ಲಿ ಸ್ನಾನ ಮಾಡಿ, ಪೂಜೆ ಮಾಡಿದ ಶ್ರೀರಾಮ ಹೊರಡುವಾಗ ತನ್ನ ನಿಜ ನಾಮ ಹೇಳಿ ಹೋಗುತ್ತಾನೆ. ಶ್ರೀರಾಮಚಂದ್ರನೇ ಕಾಲಿಟ್ಟ ಈ ಕ್ಷೇತ್ರಕ್ಕೆ ರಾಮಗಿರಿ ಎಂಬ ಹೆಸರು ಬಂದಿದೆ’ ಎಂದು ಗ್ರಾಮದ ಹಿರಿಯರಾದ ರಾಮಣ್ಣ ಹೇಳುತ್ತಾರೆ.
ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಪತ್ನಿ ಸೀತಾಮಾತೆಯನ್ನು ಹುಡುಕಿಕೊಂಡು ಲಂಕೆಗೆ ಹೋಗುವಾಗ ಸಹೋದರ ಲಕ್ಷ್ಮಣನ ಜತೆಗೆ ಹಲವು ಸ್ಥಳಗಳಲ್ಲಿ ತಂಗಿದ್ದ. ಅದರಂತೆ ತಾಲ್ಲೂಕಿನ ರಾಮಗಿರಿಯಲ್ಲೂ ಉಳಿದುಕೊಂಡಿದ್ದ. ರಾಮ ಜನ್ಮಭೂಮಿ ನ್ಯಾಸ ಟ್ರಸ್ಟ್ ಶ್ರೀರಾಮ ನಡೆದಾಡಿದ ಸ್ಥಳಗಳನ್ನು ವೈಜ್ಞಾನಿಕ ಆಧಾರದಲ್ಲಿ ಗುರುತಿಸುವ ಒಂದು ಆಧ್ಯಾತ್ಮಿಕ ಸಂಸ್ಥೆ.

ಇದು ಶ್ರೀರಾಮಚಂದ್ರನು ಲಂಕೆಯಿಂದ ವಾಪಸ್ ಅಯೋಧ್ಯೆಗೆ ಬರುವಾಗ ತಂಗಿದ್ದ ಜಾಗಗಳು ಹಾಗೂ ಆತನು ಪ್ರತಿಷ್ಠಾಪಿಸಿದ ಶಿವಲಿಂಗಗಳನ್ನು ಗುರುತಿಸಿದೆ. ಶ್ರೀರಾಮಚಂದ್ರನು ನಡೆದಾಡಿದ ಜಾಗಗಳ ಬಗ್ಗೆ ನಕ್ಷೆ ಸಮೇತ ದೇವಾಲಯಗಳಲ್ಲಿ ತೂಗುಹಾಕಿದ್ದಾರೆ. ಜೊತೆಗೆ ಶ್ರೀರಾಮನು ನಡೆದ ಮಾರ್ಗಗಳಲ್ಲಿ ‘ಶ್ರೀ ರಾಮಗಮನ್ ಮಾರ್ಗ’ ಎಂಬ ಫಲಕಗಳನ್ನು ಅಳವಡಿಸಿದ್ದಾರೆ. ಟ್ರಸ್ಟ್ ಸದಸ್ಯರು ಅಯೋಧ್ಯೆಯಿಂದಲೇ ಬಂದು ರಾಮಗಿರಿಯಲ್ಲಿ ಫಲಕ ಅಳವಡಿಸಿದ್ದಾರೆ’ ಎನ್ನುತ್ತಾರೆ ರಾಮಗಿರಿ ಇತಿಹಾಸದ ಬಗ್ಗೆ ಹೊಳಲ್ಕೆರೆ ತಾಲ್ಲೂಕು ದರ್ಶನ ಕೃತಿ ಬರೆದ ಕೆ.ವಿ.ಸಂತೋಷ್.
‘ಹಿಂದೆ ಶ್ರೀರಾಮಚಂದ್ರ ಬಾಣದಿಂದ ಸೃಷ್ಟಿಸಿದ ಬಾವಿಗೆ ಗಂಗೆ ಹೊಂಡ ಎಂದು ಕರೆಯಲಾಗುತ್ತದೆ. ಬೆಟ್ಟದ ಮೇಲಿನ ಕರಿಸಿದ್ದೇಶ್ವರ ಸ್ವಾಮಿ ದೇವಾಲಯದ ಒಳಗೆ ಈ ಗಂಗಮ್ಮನ ಬಾವಿ ಇದ್ದು, ಇದನ್ನು ‘ಕಾಲಜ್ಞಾನಿ ಬಾವಿ’ ಎಂದೇ ನಂಬಲಾಗಿದೆ. ಬೆಟ್ಟದ ತುದಿಯಲ್ಲಿದ್ದರೂ, ಈ ಬಾವಿಯ ನೀರು ಎಂದೂ ಬತ್ತಿಲ್ಲ. ಇದು ಭವಿಷ್ಯ ನುಡಿಯುವ ಬಾವಿಯಾಗಿದ್ದು, ಇದರಲ್ಲಿನ ನೀರು ಸ್ವಲ್ಪ ಕೆಳಗೆ ಹೋದರೆ ಆ ವರ್ಷ ಹೆಚ್ಚು ಮಳೆ ಬರುತ್ತದೆ, ನೀರು ಮೇಲೆ ಬಂದರೆ ಬರಗಾಲ ಬರುತ್ತದೆ. ಈ ನೀರು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ’ ಎನ್ನುತ್ತಾರೆ ಇಲ್ಲಿನ ಅರ್ಚಕರು.
– ಸಾಂತೇನಹಳ್ಳಿ ಸಂದೇಶ್ ಗೌಡ, ಹೊಳಲ್ಕೆರೆ
