
CHITRAUDRGA NEWS | 19 JULY 2026
ಚಿತ್ರದುರ್ಗ: ರಾಜ್ಯಾದ್ಯಂತ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲದ ಪರಿಸ್ಥತಿ ಎದುರಾಗಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಓಗಳು ಸಂಭವನೀಯ ಬರಗಾಲದ ವಿಪತ್ತನ್ನು ಎದುರಿಸಲು ಸನ್ನದ್ದರಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.
ಇದನ್ನೂ ಓದಿ: ಮಾದಕ ವಸ್ತುಗಳ ದುಶ್ಚಟಮುಕ್ತ ಜೀವನದಿಂದ ಉತ್ತಮ ಆರೋಗ್ಯ | ಎಸ್.ಬಸವರಾಜು
ಈ ಕುರಿತು ಭಾನುವಾರ ಬೆಂಗಳೂರಿನ ವಿಧಾನ ಸೌಧ 3ನೇ ಮಹಡಿಯಲ್ಲಿರುವ ಸಮಿತಿ ಕೊಠಡಿ ಸಂಖ್ಯೆ 313, ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಬರದ ವಿಪತ್ತು ಎದುರಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡಬೇಕು. ಯುದ್ದೋಪಾದಿಯಲ್ಲಿ ಬರದ ನಿರ್ವಹಣೆ ಒತ್ತು ನೀಡಬೇಕು.
ಬರ ಸಂದರ್ಭದಲ್ಲಿನ ಸರ್ಕಾರ ಕೈಗೊಂಡಿರುವ ಕಾರ್ಯಗಳು ಹಾಗೂ ಕಾಳಜಿ ಜನರಿಗೆ ಮನದಟ್ಟಾಗುವ ರೀತಿಯಲ್ಲಿ ಅಧಿಕಾರಿಗಳು ಸರ್ಕಾರದ ಧ್ವನಿಯಾಗಿ ಕೆಲಸ ಮಾಡಬೇಕು.ವಿಪತ್ತು ಪರಿಹಾರ ಕಾರ್ಯಕ್ಕೆ ಸರ್ಕಾರ ಸನ್ನದ್ಧವಾಗಿದೆ.ಯಾವುದೇ ಹಣಕಾಸಿನ ಕೊರತೆಯಿಲ್ಲ. ಜನರಿಗೆ ಕುಡಿಯುವ ನೀರು ಕೈಗೊಂಡ ಕ್ರಮಗಳ ಬಗ್ಗೆ ಜನತೆಗೆ ತಿಳಿಸಿ.
ಇದನ್ನೂ ಓದಿ: UPSC ತರಬೇತಿ | ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓಗಳು ಕೃಷಿ,ತೋಟಗಾರಿಕೆ, ಪಶುಪಾಲನೆ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಬರ ನಿರ್ವಹಣೆಗೆ ಕಾರ್ಯಯೋಜನೆ ರೂಪಿಸಬೇಕು. ಈ ಬಗ್ಗೆ ಪ್ರಜಾಸೇವಾ, ಕಂದಾಯ ಇಲಾಖೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿಯಮಿತವಾಗಿ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರು.
ಬರದ ಹಿನ್ನೆಲೆಯಲ್ಲಿ ಅಗತ್ಯ ಇರುವ ಜಿಲ್ಲೆಗಳಿಗೆ ಕೂಡಲೇ ಹಣ ಪೂರೈಸಲು ಈಗಾಗಲೆ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿನ ಎಲ್ಲ ಜಲಾಶಯಗಳಲ್ಲಿನ ನೀರಿನ ಮಟ್ಟದ ಪರಿಸ್ಥಿತಿಯ ಬಗ್ಗೆ ವಾರಕ್ಕೆ ಒಮ್ಮೆ ಮಾಹಿತಿ ನೀಡುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಮಾಡಬೇಕು. ಅಗತ್ಯವಿರುವ ಕಡೆ ಮೇವು ಬ್ಯಾಂಕಿನ ಸ್ಥಾಪಿಸಬೇಕು.
ಮಳೆ ಕೊರತೆ ಮುಂದುವರೆದಲ್ಲಿ ಮತ್ತಷ್ಟು ತಾಲೂಕುಗಳಲ್ಲಿ ಬರದ ಛಾಯೆ ಆವರಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬರ ಅಧ್ಯಯನಕ್ಕೆ ಕೇಂದ್ರ ತಂಡ:
ಸದ್ಯದಲ್ಲೇ ರಾಜ್ಯಕ್ಕೆ ಬರ ಪರಿಸ್ಥಿತಿ ಅವಲೋಕನಕ್ಕಾಗಿ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಲಿದೆ. ತಂಡಕ್ಕೆ ಅತ್ಯಗತ್ಯ ಮಾಹಿತಿ ಕೊಡಲು ತಯಾರಿ ಮಾಡಿಕೊಳ್ಳಬೇಕು. ಈಗಾಗಲೇ ರಾಜ್ಯದಿಂದ ಕಲಬುರಗಿ, ಬೆಳಗಾವಿನಲ್ಲಿ ಸಂಚರಿಸಿ ಬರದ ಅವಲೋಕನ ನಡೆಸಲಾಗಿದೆ. ಇದೆ ರೀತಿ ರಾಜ್ಯದ ಬೇರೆ ಬೇರೆ ಕಡೆಗೆ ಸಂಚರಿಸಿ ಬರ ಅವಲೋಕನ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಬಿ- ಜಿ ರಾಮ್ ಜಿ ಅಡಿ ಉದ್ಯೋಗ ಒದಗಿಸಲು ಸೂಚನೆ:
ವಿಪತ್ತು ನಿರ್ವಹಣೆ ಅನುವಾಗುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹಣಕಾಸಿನ ನೆರವು ಒದಗಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟನಲ್ಲಿ ಅಂದಾಜು 397 ಕೋಟಿ ರೂ ಹಣಯಿದೆ. ರಾಜ್ಯದ ಯಾದಗಿರಿ, ವಿಜಯಪುರ ಸೇರಿದಂತೆ ಇನ್ನೀತರ ಕಡೆ ಜನತೆ ಗುಳೆ ಹೊರಟಿದ್ದಾರೆ ಎನ್ನುವ ಮಾಹಿತಿಯಿದೆ.
ಇದನ್ನೂ ಓದಿ: ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ರಸಗೊಬ್ಬರ ನಿರ್ವಹಣೆ ಮತ್ತು ಪರ್ಯಾಯ ವ್ಯವಸ್ಥೆ ಕುರಿತು ತರಬೇತಿ
ಜನತೆ ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಜಿಲ್ಲೆಗಳಲ್ಲಿ ಕೂಡಲೇ ವಿಬಿ- ಜಿ ರಾಮ ಜಿ ಯೋಜನೆಯಡಿ ಉದ್ಯೋಗ ಒದಗಿಸಬೇಕು. ರಾಜ್ಯದ 487 ಗ್ರಾಮ ಪಂಚಾಯತಗಳಲ್ಲಿ ಜನತೆಗೆ ಉದ್ಯೋಗ ಕೊಡುವ ಕಾರ್ಯಗಳು ಆರಂಭವಾಗಿವೆ. ಬರ ಪರಿಸ್ಥಿತಿಯ ಗಂಭೀರತೆ ಅರಿತು ರಾಜ್ಯದ 2,446 ಗ್ರಾಪಂಗಳಲ್ಲೂ ಕೂಡಲೇ ವಿಬಿ ಜಿ ರಾಮ್ ಜಿ ಯೋಜನೆಯ ಕಾರ್ಯ ಆರಂಭಿಸಲು ಸಿಇಓಗಳಿಗೆ ಸೂಚನೆ ನೀಡಿದರು.
ಎಸ್ ಐಆರ್ ವ್ಯವಸ್ಥಿತವಾಗಿ ನಡೆಸಿ:
ಎಸ್ ಐ ಆರ್ ಕಾರ್ಯವು ಎಲ್ಲ ಜಿಲ್ಲೆಗಳಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಶುದ್ಧ ನೀರು ಪೂರೈಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಾಕೀತು:
ರಾಜ್ಯದ ಜನತೆಗೆ ಶುದ್ಧ ಕುಡಿವ ನೀರು ಪೂರೈಸಬೇಕು. ಈ ದಿಶೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೂಚನೆ ನೀಡಿದರು.
ಇದನ್ನೂ ಓದಿ: ನೀಟ್ ಫಲಿತಾಂಶ | SRS ಪಿಯು ಕಾಲೇಜಿಗೆ ರಾಷ್ಟ್ರ, ರಾಜ್ಯ ಮಟ್ಟದಲ್ಲಿ 75ನೇ ರ್ಯಾಂಕ್
ಸುಮಾರು 75 ವರ್ಷಗಳ ಹಿಂದೆ ರಾಜ್ಯದಲ್ಲಿ ಇಂತಹ ಬರದ ದುಸ್ತಿತಿ ಎದುರಾಗಿತ್ತು. 1965 ಮತ್ತು 1972ರಲ್ಲಿ ಸಹ ಇಂತಹ ಬರದ ಛಾಯೆ ರಾಜ್ಯದಲ್ಲಿ ಆವರಿಸಿತ್ತು. ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಉಷ್ಣಾಂಶದ ಪ್ರಮಾಣ ಏರಿಕೆ ಆಗುತ್ತಿದೆ. ಹೆಚ್ಚಿನ ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಮುಂದುವರೆದಿದೆ.
ರಾಜ್ಯದ ಅಂದಾಜು 88 ತಾಲೂಕುಗಳಲ್ಲಿ ಅಂತರ್ಜಲ ನೀರಿನ ಮಟ್ಟ ಕುಸಿತಿದೆ ಎಂದು ವರದಿಯಾಗುತ್ತಿದೆ. ಜನರಿಗೆ ಕುಡಿವ ನೀರು ಕೊಡಲೇಬೇಕು. ಜಲಾಶಯಗಳ ನೀರನ್ನು ಕುಡಿಯಲು ಮಾತ್ರ ಬಳಸಬೇಕು.ಜಾನುವಾರುಗಳಿಗೆ ಸಹ ಕುಡಿವ ನೀರು ಮತ್ತು ಮೇವು ಪೂರೈಕೆಗೆ ಸಹ ಒತ್ತು ಕೊಡಬೇಕು. ಈ ಎಲ್ಲದರ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿ ಕ್ರಮ ವಹಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅಂಕಿ ಸಂಖ್ಯೆಗಳ ಮಾಹಿತಿ ಆಯಾ ತಾಲ್ಲೂಕುವಾರು ಅಧಿಕಾರಿಗಳಲ್ಲಿ ಇರಬೇಕು. ಗೃಹ ಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿ, ಗೃಹಜ್ಯೊತಿ ಯೋಜನೆಗಳ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರಿಂದ ನಿರಂತರ ಸೂಚನೆ ಹೋಗಬೇಕು.
ಇದನ್ನೂ ಓದಿ: ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಜನ್ಮ ದಿನಾಚರಣೆ | ಹಲವು ಮಠಾಧೀಶರು ಭಾಗೀ
ಆಯಾ ಇಲಾಖೆಗಳ ವಿವಿಧ ಯೋಜನೆಗಳ ಅನುಷ್ಠಾನದ ಯಶೋಗಾಥೆಯ ಸಂಕ್ಷಿಪ್ತ ಮಾಹಿತಿಯು ನಿರಂತರವಾಗಿ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳಿಗೆ ಹೋಗಬೇಕು. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕರು ಸರ್ಕಾರಿ ಶಾಲೆಗಳ ಶಿಕ್ಷಕ ಕೊರತೆ ಹಾಗೂ ಪಾಠ ಪ್ರಚನಗಳ ಬಗ್ಗೆ ಗಮನ ಹರಿಸಬೇಕು. ಎಂದು ಸೂಚನೆ ನೀಡಿದರು.
ವಿಡಿಯೋ ಸಂವಾದ ಸತತ ಮೂರು ಗಂಟೆಗಳಿಗು ಹೆಚ್ಚು ಕಾಲ ನಡೆಯಿತು. ಇಂಧನ ಸಚಿವ ಕೆ.ಜೆ. ಜಾರ್ಜ್, ನೀರಾವರಿ ಸಚಿವರಾದ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ, ಆರೋಗ್ಯ ಸಚಿವ.ಟಿ. ಖಾದರ್, ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಮುಖ್ಯಮಂತ್ರಿಗಳೊಂದಿಗೆ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಕೋಠಡಿಯಿಂದ ವಿಡಿಯೊ ಸಂವಾದದಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಓ ಡಾ.ಎಸ್.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

