CHITRADURGA NEWS | 11 SEPTEMBER 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂಬ ಕಾಲಘಟ್ಟದಲ್ಲಿ ಹೋರಾಟ ಸಮಿತಿ ರಚಿಸಿಕೊಂಡು, ಸರ್ಕಾರಕ್ಕೆ ನೀರಿನ ಲಭ್ಯತೆ ಕುರಿತು ಮಾಹಿತಿ ನೀಡಿ ಅಸಾಧ್ಯವೆನಿಸಿದ್ದನ್ನು ಸಾಧಿಸಿದ ಈ ಕ್ಷಣ ರೋಮಾಂಚನ ಮೂಡಿಸಿದೆ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಹೇಳಿದರು.
ಇದನ್ನೂ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 11 | ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ಅಗತ್ಯಕ್ಕೆ ತಕ್ಕಂತೆ ಆರ್ಥಿಕ ಸಹಾಯ ದೊರೆಯುತ್ತದೆ
ಗೋನೂರು ಬಳಿ ಭದ್ರಾ ನೀರು ಹರಿಯುವ ಸ್ಥಳದಲ್ಲಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಗುರುವಾರ ಆಯೋಜಿಸಿದ್ದ ಪೂಜಾ ಕಾರ್ಯಕ್ರಮ ಹಾಗೂ ಸಮಗ್ರ ನೀರಾವರಿ ಯೋಜನೆ ಜಾರಿಗಾಗಿ ಎರಡನೇ ಹಂತದ ಹೋರಾಟದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದಲ್ಲಿಯೇ ಬೃಹತ್ ಮೊತ್ತದ ಯೋಜನೆಯಾಗಿದೆ. ಅನೇಕ ಅಡ್ಡಿ-ಆತಂಕಗಳ ನಡುವೆಯೂ ಯೋಜನೆ ಜಾರಿಗೊಂಡು ನೀರು ಹರಿಯುತ್ತಿರುವುದು ಅತ್ಯಂತ ಸಂತಸದ ಸಂಗತಿ. ಸುಮಾರು 5 ಲಕ್ಷ ಎಕರೆ ಭೂಮಿಗೆ ನೀರುಣಿಸುವ ಯೋಜನೆಯಾದರೂ, ಇನ್ನಷ್ಟು ಕೆರೆ-ಕಟ್ಟೆಗಳು ಹಾಗೂ ತಾಲ್ಲೂಕುಗಳು ಯೋಜನೆಯ ವ್ಯಾಪ್ತಿಯಿಂದ ಹೊರಗುಳಿದಿವೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಹಂತದ ಹೋರಾಟ ಅಗತ್ಯವಿದೆ ಎಂದರು.
ಆಂಧ್ರಪ್ರದೇಶ ನೀರಾವರಿ ಯೋಜನೆಗಳ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಲೋಕಸಭೆಯಲ್ಲಿ ಭದ್ರಾ ಯೋಜನೆ ಕುರಿತು ಧ್ವನಿ ಎತ್ತಿದ ಸಂದರ್ಭದಲ್ಲಿ, ‘ಆಂಧ್ರಪ್ರದೇಶದಲ್ಲಿ ಹುಟ್ಟಿದ ನೀವು ನಮ್ಮ ಪರ ಧ್ವನಿ ಎತ್ತಬೇಕು’ ಎಂದು ಕೆಲವರು ಆಗ್ರಹಿಸಿದ್ದರು. ಆದರೆ, ನನ್ನ ಹುಟ್ಟು ಆಂಧ್ರಪ್ರದೇಶದಲ್ಲಾದರೂ ಕರ್ಮಭೂಮಿ ಕರ್ನಾಟಕ ಎಂದು ಅಂದೇ ಹೇಳಿದ್ದೇನೆ ಎಂದು ಸ್ಮರಿಸಿದರು.
ಇದನ್ನೂ ಓದಿ: ಗೌರಿ-ಗಣೇಶ ಹಬ್ಬ | ಶಾಂತಿ-ಸುವ್ಯವಸ್ಥೆಗೆ ಜಿಲ್ಲಾಡಳಿತ ಕಟ್ಟೆಚ್ಚರ
ಯೋಜನೆ ಜಾರಿಗೊಂಡು ನೀರು ಹರಿಯುತ್ತಿದ್ದರೂ ಇನ್ನೂ ಹಲವು ಕೆಲಸಗಳು ಆಗಬೇಕಿವೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳೂ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಬೇಕು. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ ಎಂದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯೋಜನೆ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಬೇಕು. ಸಕಾಲಕ್ಕೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಬಯಲುಸೀಮೆಯನ್ನು ಸಂಪೂರ್ಣ ಹಸಿರಾಗಿಸಬೇಕು. ಕೇಂದ್ರ ಸರ್ಕಾರ ನೀಡಿರುವ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸುಧೀರ್ಘ ಹೋರಾಟದ ಫಲ
ಸಮಿತಿಯ ಹಿರಿಯ ಮುಖಂಡ ಬೇಡರರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಹೋರಾಟದ ಆರಂಭದಲ್ಲಿ ಜನಬೆಂಬಲ ದೊರೆಯಲಿಲ್ಲ. ಆದರೂ ಸುಧೀರ್ಘ ಚಳವಳಿಯ ಪರಿಣಾಮ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡಿದೆ. ಮೊಳಕಾಲ್ಮೂರು ಸೇರಿದಂತೆ ಇನ್ನಷ್ಟು ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಯಬೇಕಿದ್ದು, ಈ ನಿಟ್ಟಿನಲ್ಲಿ ಮತ್ತೊಂದು ಹಂತದ ಚಳವಳಿ ಅಗತ್ಯವಿದೆ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 10 | ಹತ್ತಿ ರೇಟ್…
ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ತಾವು ಹೋರಾಟದಲ್ಲಿ ಇರದಿದ್ದರೂ ಚಳವಳಿಯಲ್ಲಿ ಪಾಲ್ಗೊಂಡು ಸಾರ್ಥಕತೆ ಕಂಡವರನ್ನು ಗೌರವಿಸುವ ಗುಣ ಹೊಂದಿದ್ದೇವೆ. ಎಲ್ಲ ಹೋರಾಟಗಾರರನ್ನು ಪೀಠದ ವತಿಯಿಂದ ಗೌರವಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಎಂದಾಕ್ಷಣ ಅಸಾಧ್ಯ ಎಂಬ ಮನೋಭಾವ ಜನರಲ್ಲಿತ್ತು. ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಹೋರಾಟಗಾರರು ಹಾಗೂ ಮಠಾಧೀಶರ ಬದ್ಧತೆ ಪ್ರಮುಖ ಪಾತ್ರ ವಹಿಸಿದೆ. ಹೋರಾಟದ ಹಾದಿಯಲ್ಲಿ ಬದುಕನ್ನೇ ಸಮರ್ಪಿಸಿದವರನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.
ಮುಖ್ಯವಾಗಿ ರೈತರು ಕೃಷಿ ಭೂಮಿಯನ್ನು ಗುತ್ತಿಗೆ ನೀಡುವ ಪದ್ಧತಿ ಹಾಗೂ ಭೂಮಿ ಮಾರಾಟದ ಮನಸ್ಥಿತಿಯಿಂದ ಹೊರಬಂದು ಸ್ವಂತ ಉಳುಮೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ರ್ಲಹಳ್ಳಿ ರವಿಕುಮಾರ್, ಲಕ್ಷ್ಮೀಕಾಂತ್, ಮಲ್ಲಿಕಾರ್ಜುನ್, ಕೆ.ಟಿ.ತಿಪ್ಪೇಸ್ವಾಮಿ, ಎಂ.ಡಿ.ರವಿ, ಜೆ.ಯಾದವರೆಡ್ಡಿ ಹಾಗೂ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಹೋರಾಟ ಸಮಿತಿಯ ಚಳವಳಿಯ ಹಾದಿ ಹಾಗೂ ಹೋರಾಟಗಾರರನ್ನು ಸದಾ ಸ್ಮರಿಸುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಸಮಗ್ರ ನೀರಾವರಿ ಜಾರಿಗೆ ಹೋರಾಟ ಕೈಗೆತ್ತಿಕೊಳ್ಳುವುದು ಅಗತ್ಯ ಎಂದರು.
ಇದನ್ನೂ ಓದಿ: ಸಹಾಯಧನ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಸಮಿತಿ ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್ಕುಮಾರ್, ಜೋಗಿಮಟ್ಟಿ ಮಹೇಶಬಾಬು ಹಾಗೂ ಮುಖಂಡರಾದ ಪ್ರಸನ್ನ ಎಂ.ಜಯಣ್ಣ, ಬಾಗೇನಾಳ್ ಕೊಟ್ರಬಸಪ್ಪ, ವೆಂಕಟೇಶ್, ದಗ್ಗೆ ಶಿವಪ್ರಕಾಶ್, ಸಿ.ಶಿವುಯಾದವ್, ಕೂನಿಕೆರೆ ರಾಮಣ್ಣ, ಡಿ.ಸಿ.ನಾಗರಾಜ್, ಮುದ್ದಪುರ ನಾಗರಾಜ್, ಹಂಪಯ್ಯನಮಾಳಿಗೆ ಬಸವರಾಜ್, ಎಚ್.ಲಕ್ಷ್ಮಣ್, ವೀರೇಂದ್ರ ಕೋಗುಂಡೆ ಮಠ, ಪಾಂಡುರಂಗಪ್ಪ, ಗೌನಹಳ್ಳಿ ಗೋವಿಂದಪ್ಪ, ಟಿ.ಎಂ.ಪ್ರದೀಪ್ಕುಮಾರ್, ಮಲ್ಲಿಕಾರ್ಜುನ್, ರೆಡ್ಡಿಹಳ್ಳಿ ವೀರಣ್ಣ, ಟಿ.ಮಂಜಣ್ಣ, ದಯಾನಂದ್, ರೇವಣ್ಣಸಿದ್ದಪ್ಪ, ಮುಂಗಸವಳ್ಳಿ ಪ್ರಕಾಶ್, ಸಂಪತ್ಕುಮಾರ್, ಗುರುಮೂರ್ತಿ, ರಾಜಣ್ಣ, ಕೆಪಿಎಂ ಗಣೇಶಯ್ಯ, ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಾದಗಳಿಗೆ ನಮನ
ಬರಡು ನೆಲವನ್ನು ಹಸಿರುಗೊಳಿಸಲು ಹೋರಾಟ ನಡೆಸಿದವರ ಪಾದಗಳಿಗೆ ನಾವೆಲ್ಲರೂ ನಮಿಸಬೇಕು. ಅವರ ಹೆಸರು ಹೇಳಿಕೊಂಡು ಕೃಷಿ ಚಟುವಟಿಕೆ ಕೈಗೊಂಡು ಉನ್ನತಿ ಸಾಧಿಸಬೇಕು ಎಂದು ಎಂಎಲ್ಸಿ ಕೆ.ಎಸ್.ನವೀನ್ ಹೇಳಿದರು.
ಅಗಲಿದ ಹೋರಾಟಗಾರರಿಗೆ ನಮನ ಸಲ್ಲಿಸಬೇಕು. ಈಗ ಅರ್ಧ ಗೆಲುವು ಸಾಧಿಸಿದ್ದು, ಇನ್ನರ್ಧ ಸಾಧನೆಗಾಗಿ ನಾವೆಲ್ಲರೂ ಸಮಿತಿಯೊಂದಿಗೆ ಹೆಜ್ಜೆ ಹಾಕಬೇಕಿದೆ ಎಂದರು.
ಕೇಂದ್ರ ಸರ್ಕಾರ ನೀಡಿದ ಭರವಸೆಯಂತೆ ₹5,300 ಕೋಟಿ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನೇರ ರೈಲ್ವೆ ಮಾರ್ಗದ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಈ ಎರಡೂ ಯೋಜನೆಗಳು 2028ರೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ಈಗ ಜ್ಞಾನೋದಯ
ಹೋರಾಟದ ಆರಂಭದಲ್ಲಿ ಬೀದಿಗಿಳಿಯದವರು ಜಿಲ್ಲೆಗೆ ಭದ್ರೆ ನೀರು ಹರಿಯುತ್ತಿದ್ದಂತೆ, ‘ನಮ್ಮೂರಿನ ಕೆರೆಗೆ ನೀರು ಬರುತ್ತಿಲ್ಲ; ಚಳವಳಿ ನಡೆಸೋಣ’ ಎಂದು ಕರೆಯುತ್ತಿದ್ದಾರೆ. ಈ ಜ್ಞಾನೋದಯ ಆರಂಭದಲ್ಲೇ ಬಂದಿದ್ದರೆ ಸಮಗ್ರ ನೀರಾವರಿ ಕಲ್ಪನೆ ಇನ್ನಷ್ಟು ಪರಿಣಾಮಕಾರಿಯಾಗಿ ಸಾಕಾರಗೊಳ್ಳುತ್ತಿತ್ತು ಎಂದು ಸಮಿತಿಯ ಮುಖಂಡ ಈಚಘಟ್ಟ ಸಿದ್ದವೀರಪ್ಪ ಹೇಳಿದರು.
ಹೋರಾಟಗಾರರ ಹೆಸರಿಡಿ
ನೀರಾವರಿ ಹೋರಾಟಕ್ಕಾಗಿ ಬದುಕನ್ನೇ ಮೀಸಲಿಟ್ಟ ಪಿ.ಕೋದಂಡರಾಮಯ್ಯ, ಎಂ.ಜಯಣ್ಣ ಹಾಗೂ ಮುರುಘರಾಜೇಂದ್ರ ಒಡೆಯರ್ ಅವರ ಹೆಸರನ್ನು ಯೋಜನೆ ಹಾಗೂ ಕಾಲುವೆಗಳಿಗೆ ನಾಮಕರಣ ಮಾಡಲು ಸರ್ಕಾರ ಮುಂದಾಗಬೇಕು. ಈ ಮೂಲಕ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು ಎಂದು ಬಸವರೆಡ್ಡಿ, ಎಸ್.ಕೆ.ಬಸವರಾಜನ್, ಎಂ.ಡಿ.ರವಿ ಸೇರಿದಂತೆ ಹಲವರು ಒತ್ತಾಯಿಸಿದರು.
«“ನೀರು ಬರುತ್ತದೆ ಎಂಬುದು ಕನಸಾಗಿತ್ತು. ಆದರೆ ಈಗ ನಮ್ಮ ಕಣ್ಣೆದುರೇ ನೀರು ಧುಮ್ಮಿಕ್ಕುತ್ತಿರುವುದನ್ನು ಕಂಡಾಗ ರೋಮಾಂಚನವಾಗುತ್ತದೆ. ಈ ಸಂದರ್ಭ ಎಂ.ಜಯಣ್ಣ, ಒಡೆಯರ್ ಸೇರಿದಂತೆ ಅನೇಕರು ಇರಬೇಕಿತ್ತು. ನೀರು ಹರಿಯುವ ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮದಾಗಿದೆ.”
— ಶ್ರೀ ಶಿವಾಲಿಂಗಾನಂದ ಸ್ವಾಮೀಜಿ, ಕಬೀರಾನಂದ ಮಠ
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

