CHITRADURGA NEWS | 18 SEPTEMBER 2026
ಚಿತ್ರದುರ್ಗ: ಜಿಲ್ಲೆಯಲ್ಲಿ ‘ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026’ರ (ಎಸ್ಐಆರ್) ಅಂಗವಾಗಿ ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಮತ್ತು ಶುದ್ಧಗೊಳಿಸುವ ನಿಟ್ಟಿನಲ್ಲಿ ಒಟ್ಟು 64,611 ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ರಮ್ಯಾ ತಿಳಿಸಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿವು | ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸಲು ಡಿಸಿ ರಮ್ಯಾ ಸೂಚನೆ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್ಐಆರ್ ಸಂಬಂಧ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮನೆ ಮನೆ ಸಮೀಕ್ಷೆ ನಡೆಸಲಾಗಿದ್ದು, ಮ್ಯಾಪಿಂಗ್ ಆಗದೆ ಇರುವ ಹಾಗೂ ವಿವರಗಳು ತಪ್ಪಾಗಿರುವ ಮತದಾರರನ್ನು ಗುರುತಿಸಿ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 68,752 ನೋಟಿಸ್ಗಳನ್ನು ಸೃಜನೆ ಮಾಡಲಾಗಿದೆ.
ಇದರಲ್ಲಿ 64,611 ಮತದಾರರಿಗೆ ನೋಟಿಸ್ ಜಾರಿಯಾಗಿದ್ದು, 4,139 ಮತದಾರರಿಗೆ ನೋಟಿಸ್ ಜಾರಿ ಮಾಡುವುದು ಬಾಕಿ ಇದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಎಂದರೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 30,021 ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ನರೇಂದ್ರ ಮೋದಿ ಸರ್ಕಾರದ ಸಾಧನೆ ಮುಂದಿಟ್ಟು ಜನರ ಬಳಿಗೆ | ಸಂಸದ ಗೋವಿಂದ ಕಾರಜೋಳ
ನೋಟಿಸ್ ಪಡೆದ ಸಂಬಂಧಪಟ್ಟ ಮತದಾರರು ತಮ್ಮ ವ್ಯಾಪ್ತಿಯ ಮತದಾರರ ನೋಂದಣಾಧಿಕಾರಿಗಳು ಅಥವಾ ಸಹಾಯಕ ನೋಂದಣಾಧಿಕಾರಿಗಳ ಮುಂದೆ ಖುದ್ದಾಗಿ ಹಾಜರಾಗಿ, ಚುನಾವಣಾ ಆಯೋಗ ನಿಗದಿಪಡಿಸಿರುವ ಸೂಕ್ತ ದಾಖಲಾತಿಗಳನ್ನು ಒದಗಿಸಿ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಆಗಸ್ಟ್ 24ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 6,46,568 ಪುರುಷರು, 6,51,154 ಮಹಿಳೆಯರು ಹಾಗೂ 67 ಇತರೆ ಸೇರಿ ಒಟ್ಟು 12,97,789 ಮತದಾರರಿದ್ದಾರೆ. ಚುನಾವಣಾ ಆಯೋಗದ ಅನುಮೋದನೆಯಂತೆ ಮತಗಟ್ಟೆಗಳ ಮರುಹೊಂದಾಣಿಕೆ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 1,764 ಮತಗಟ್ಟೆಗಳನ್ನು ಅಂತಿಮಗೊಳಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸುವುದು ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದ್ದು, ಈ ಸದಾವಕಾಶವನ್ನು ತಪ್ಪದೆ ಉಪಯೋಗಿಸಿಕೊಳ್ಳಬೇಕು. ಮತದಾರರ ಪಟ್ಟಿಯ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ | ಸೆ.21ರಂದು ವಾಕ್ಇನ್ ಇಂಟರ್ವ್ಯೂ
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಗ್ರೇಡ್-2 ತಹಶೀಲ್ದಾರ್ ಮಲ್ಲಿಕಾರ್ಜುನ ನಾಯಕ, ಎಎಪಿ ಜಿಲ್ಲಾ ಕಾರ್ಯದರ್ಶಿ ಎಂ.ರಾಮಪ್ಪ, ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಸಿಪಿಐ (ಎಂ) ಡಿಒಸಿ ಸಿ.ಕೆ.ಗೌಸ್ಪೀರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

