
ಚಿತ್ರದುರ್ಗ ನ್ಯೂಸ್.ಕಾಂ: ನಾವು ಯಾವುದೇ ವಸ್ತುವನ್ನು ಖರೀಧಿ ಮಾಡಿದರೂ ಅದಕ್ಕೆ ಸರಿಯಾದ ಬಿಲ್ ತೆಗೆದುಕೊಳ್ಳುವುದನ್ನು ಮರೆಯಬಾರದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಹೆಚ್.ಎನ್.ಮೀನಾ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿದರು.
ನಾವು ಖರೀದಿ ಮಾಡಿದಾಗ ನಾವು ಗ್ರಾಹಕರು ಆಗುತ್ತೇವೆ. ಆ ವಸ್ತುವಿನ ಸರಿಯಾದ ಬಿಲ್ ತೆಗೆದುಕೊಂಡಾಗ ಶಾಶ್ವಾತವಾಗಿ ಗ್ರಾಹಕರಾಗುತ್ತೇವೆ. ಅಗತ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದರೆ ಮಾತ್ರ ಮೋಸ, ವಂಚನೆಯಾದಾಗ ಪರಿಹಾರ ಪಡೆಯಬಹುದು ಎಂದರು.
ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವಿದೆ. ಇಲ್ಲಿ ಕನಿಷ್ಟ 1 ರೂಪಾಯಿಂದ 50 ಲಕ್ಷದವರೆಗೆ ಪರಿಹಾರ ಪಡೆಯಬಹುದು. ರಾಜ್ಯ ಆಯೋಗದಿಂದ 50 ಲಕ್ಷದಿಂದ 2 ಕೋಟಿವರೆಗೂ ಪಡೆಯಬಹುದು. ರಾಷ್ಟ್ರೀಯ ಆಯೋಗದಲ್ಲಿ 2 ಕೋಟಿಯಿಂದ 10 ಕೋಟಿವರೆಗೂ ಮೌಲ್ಯದ ವ್ಯವಹಾರಗಳಿಗೆ ಪರಿಹಾರ ಪಡೆಯಲು ಅವಕಾಶವಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಹತ್ತು ಲಕ್ಷ ದರೋಡೆ ಪ್ರಕರಣ | ಒಂದೇ ತಿಂಗಳಲ್ಲಿ ಆರೋಪಿ ಅಂದರ್
ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಗ್ರಾಹಕರು ಜಾಗೃತರಾದರೆ ಮೋಸ, ವಂಚನಗಳಿಗೆ ಒಳಗಾಗುವುದು ತಪ್ಪಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಗ್ರಾಹಕರು ಜಾಗೃತರಾಗಬೇಕು ಎಂದರು.
ಅರಿವಿನ ಕೊರತೆ, ಆಸೆಗಳಿಗೆ ಬಲಿಯಾಗಿ ಗ್ರಾಹಕರು ತಮಗೆ ಗೊತ್ತೋ, ಗೊತ್ತಿಲ್ಲದೆಯೋ ಮೋಸಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಗ್ರಾಹಕರು ಜಾಗೃತರಾಗಬೇಕಿದೆ ಎಂದು ತಿಳಿಸಿದ ಅವರು, ಪ್ರಸ್ತುತ ದಿನಗಳಲ್ಲಿ ಆನ್ಲೈನ್ ವಂಚನೆಗೆ ಒಳಗಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಪ್ರತಿಯೊಂದು ವಸ್ತುವಿನ ಹಿಂದೆ ನಮ್ಮ ದುಡಿಮೆಯ ಶ್ರಮದ ಫಲವಿರುತ್ತದೆ. ಹಾಗಾಗಿ ಅನಾವಶ್ಯಕವಾಗಿ ಅದನ್ನು ವ್ಯರ್ಥ ಮಾಡಲು ಬಿಡಬಾರದು ಎಂದರು.
ಮಾರುಕಟ್ಟೆಗಳಲ್ಲಿ ರೈತರು ತಮ್ಮ ಉತ್ಪನ್ನಗಳಲ್ಲಿ ತೂಕ ಮತ್ತು ಅಳತೆಯಲ್ಲಿ ಮೋಸಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಗಿಂದಾಗ್ಗೆ ಕಾನೂನು ಮಾಪನಾ ಶಾಸ್ತ್ರ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪದೇ ಪದೇ ದಾಳಿ ನಡೆಸಿ ಪರಿಶೀಲನೆ ನಡೆಸುವುದು, ಅರಿವು ಮೂಡಿಸುವ ಕೆಲಸ ಮಾಡಬೇಕು. ತೂಕ ಮತ್ತು ಅಳತೆಯಲ್ಲಿ ಮೋಸ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ರೈತರು ಕೂಡ ತಮ್ಮ ಬೆಳೆಗಳ ತೂಕ ಸರಿಯಾಗಿ ಮಾಡಲಾಗುತ್ತಿದೆಯೇ ಎಂಬುದನ್ನು ಗಮನಿಸಬೇಕು, ಮೋಸ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಗ್ರಾಹಕರು ತಾವು ಖರೀದಿ ಮಾಡುವ ವಸ್ತುವಿನ ಮೌಲ್ಯ ಮತ್ತು ಅದರ ಮಹತ್ವ ತಿಳಿದುಕೊಳ್ಳಬೇಕು. ಆನ್ಲೈನ್ ವಹಿವಾಟುಗಳಲ್ಲಿ ಸಾಕಷ್ಟು ವಂಚಿಸುವ ಪ್ರಸಂಗಳು ಕಂಡುಬರುತ್ತಿವೆ. ಇವುಗಳಿಗೆ ಯಾರೂ ಒಳಗಾಗಬಾರದು ಎಂದು ಕಿವಿಮಾತು ಹೇಳಿದ ಅವರು, ಮೋಸಕ್ಕೆ ಒಳಗಾದ ಗ್ರಾಹಕರ ಹಿತರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇದ್ದು, ಮನವಿ ಸಲ್ಲಿಸುವ ಮೂಲಕ ನ್ಯಾಯೋಚಿತ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್ ಮಾತನಾಡಿ, ಗ್ರಾಹಕರು ವಂಚನೆಗೆ ಒಳಗಾದ ಸಂದರ್ಭದಲ್ಲಿ ಅವರಿಗೆ ನ್ಯಾಯ ದೊರಕಿಸಿಕೊಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರಚನೆ ಮಾಡಿ, ಗ್ರಾಹಕರ ಹಿತರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಆದರೆ ಮಾಹಿತಿ ಹಾಗೂ ಜಾಗೃತಿಯ ಕೊರತೆಯಿಂದ ಬಹಳಷ್ಟು ಜನರು ಈ ಆಯೋಗದ ಸದ್ಭಳಕೆ ಮಾಡಿಕೊಳ್ಳುತ್ತಿಲ್ಲ ಎಂದರು.
ಗ್ರಾಹಕರು ಜಾಗೃತರಾದಷ್ಟು ವ್ಯಾಪಾರಸ್ಥರು ಮಾಡುವ ಮೋಸ, ವಂಚನೆ ಕಡಿಮೆಯಾಗಲಿದೆ. ಪ್ರತಿಯೊಬ್ಬರಿಗೂ ಈ ಕುರಿತು ಜಾಗೃತಿ ಮೂಡಿಸಿದರೆ ವಂಚನೆ ರಹಿತ ಸಮಾಜ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಕೀಲ ಬಿ.ಕೆ.ರಹಮತ್ವುಲ್ಲಾ ಅವರು ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಕುರಿತು ಉಪನ್ಯಾಸ ನೀಡಿ, ಪ್ರತಿಯೊಬ್ಬರಿಗೂ ಅನ್ನ, ಬಟ್ಟೆ, ವಸತಿ ಕಡ್ಡಾಯವಾಗಿ ಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆಯುವ ಪಡಿತರದಲ್ಲಿ ತೂಕ ಮತ್ತು ಅಳತೆಯಲ್ಲಿ ಮೋಸವಾದರೆ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದು ನ್ಯಾಯ ಪಡೆದುಕೊಳ್ಳಬಹುದು. ವಸ್ತುವನ್ನು ಖರೀದಿಸುವ ಮೊದಲು ಗ್ರಾಹಕರು ಅದರ ಗುಣಮಟ್ಟ ಪರಿಶೀಲಿಸಬೇಕು. ಗ್ರಾಹಕರಿಗೆ ಮೋಸ ಆದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಪಡೆಯಬಹುದು. ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಕೇವಲ ಮೂರು ತಿಂಗಳಲ್ಲಿಯೇ ಪರಿಹಾರ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಬಿ.ಹೆಚ್.ಯಶೋಧ, ಆಹಾರ ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂಧನ್, ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಕಾನೂನು ಮಾಪನಾ ಶಾಸ್ತ್ರ ಇಲಾಖೆಯ ಹಿರಿಯ ಪರಿವೀಕ್ಷಕ ರಾಘುನಾಯ್ಕ್, ನವೀನ್, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಜಿಲ್ಲಾ ಸಂಯೋಜಕ ತಮಟಕಲ್ಲು ಬಿ.ಹನುಮಂತಪ್ಪ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

