CHITRADURGA NEWS | 16 APRIL 2025
ಚಿತ್ರದುರ್ಗ: ನಗರದ ಶಕ್ತಿ ದೇವತೆಗಳಾದ ಶ್ರೀ ಬರಗೇರಮ್ಮ ಹಾಗೂ ತಿಪ್ಪಿನಘಟ್ಟಮ್ಮ ದೇವಿಯರ ಐತಿಹಾಸಿಕ ಭೇಟಿ ಉತ್ಸವ ನಗರದ ದೊಡ್ಡಪೇಟೆ ರಾಜಬೀದಿಯಲ್ಲಿ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.
Also Read: ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಪರಿಶೀಲನೆ | ಶಾಸಕ ಕೆ.ಸಿ.ವಿರೇಂದ್ರ (ಪಪ್ಪಿ)

ದೇವತೆಗಳಿಬ್ಬರ ನಡುವೆ ವೈಮನಸ್ಸು ಮೂಡಿ, ಹಿರಿಯ ಅಕ್ಕ ಶ್ರೀ ಏಕನಾಥೇಶ್ವರಿ ದೇವಿ ಸಮ್ಮುಖದಲ್ಲಿ ಕಿರಿಯ ತಂಗಿಯರನ್ನು ಪರಸ್ಪರ ಭೇಟಿ ಮಾಡಿಸುವ ಜಾನಪದ ಉತ್ಸವ ಚಿತ್ರದುರ್ಗದ ಇತಿಹಾಸದೊಂದಿಗೆ ಬೆರೆತು ಹೋಗಿದೆ.
ಈ ಕಾರ್ಯಕ್ರಮ ಇಂದಿಗೂ ಚಿತ್ರದುರ್ಗದ ಜನರ ನಂಬಿಕೆಯಾಗಿದ್ದು, ಯುಗಾದಿ ಹಬ್ಬವಾದ 15 ದಿನಗಳ ತರುವಾಯ, ಶ್ರೀ ಏಕನಾಥೇಶ್ವರಿ ದೇವಿ ಜಾತ್ರೆ ನಂತರ ಅಕ್ಕ ತಂಗಿಯರ ಭೇಟಿ ಉತ್ಸವ ನಡೆಯುವುದು ವಾಡಿಕೆ.
ಅಕ್ಕ-ತಂಗಿ ಭೇಟಿ ಉತ್ಸವ ನೋಡಿ:
ದೊಡ್ಡಪೇಟೆಯ ಬಳಿ ಕರುವಿನಕಟ್ಟೆ ವೃತ್ತದ ಬಳ ನೆಲೆಗೊಂಡಿರುವ ಶ್ರೀ ತಿಪ್ಪಿನಘಟ್ಟಮ್ಮ ಹಾಗೂ ಹೊಳಲ್ಕೆರೆ ರಸ್ತೆಯಲ್ಲಿ ನೆಲೆಸಿರುವ ಶ್ರೀ ಬರಗೇರಮ್ಮ ದೇವಿಯರು ಅಕ್ಕ ತಂಗಿಯರು. ಇಬ್ಬರ ನಡುವೆ ಭಾರೀ ಪ್ರೀತಿ ಇರುತ್ತದೆ. ಆದರೆ, ಬರಗೇರಮ್ಮನಿಗೆ ಮಕ್ಕಳಿಲ್ಲದ ಕಾರಣಕ್ಕೆ ಬಂಜೆ ಎಂಬ ಟೀಕೆ ಕೇಳುತ್ತಿರುತ್ತದೆ.
Also Read: ದಿನ ಭವಿಷ್ಯ | ಏಪ್ರಿಲ್ 16 | ಆಕಸ್ಮಿಕ ಧನ ಲಾಭ, ಹಠಾತ್ ಪ್ರಯಾಣದ ಸೂಚನೆ, ಆರೋಗ್ಯದಲ್ಲಿ ಎಚ್ಚರ
ಈ ಬೇಸರ ಕಳೆಯಲು ಸಹೋಧರಿ ತಿಪ್ಪಿನಘಟ್ಟಮ್ಮನ ಮಕ್ಕಳ ಜೊತೆ ಕಾಲ ಕಳೆಯುತ್ತಾಳೆ. ಆದರೆ, ಮೂರನೆಯವರ ಮಾತು ಕೇಳಿದ ತಿಪ್ಪಿನಘಟ್ಟಮ್ಮ ಅಕ್ಕ ಬರಗೇರಮ್ಮನಿಗೆ ಮಕ್ಕಳನ್ನು ತೋರಿಸದೆ ಬಚ್ಚಿಡುತ್ತಾರೆ.
ಆಗ, ಬರಗೇರಮ್ಮ ಶಾಪ ಹಾಕಿದಾಗ ಆ ಮಕ್ಕಳು ಇದ್ದಲ್ಲಿಯೇ ಕಲ್ಲಾಗುತ್ತಾರೆ ಎನ್ನುವುದು ನಂಬಿಕೆ. ಈ ಕಾರಣಕ್ಕೆ ಪರಸ್ಪರ ದೂರಾಗಿದ್ದ ಇಬ್ಬರು ಅಕ್ಕ ತಂಗಿಯರ ಭೇಟಿ ಕಾರ್ಯಕ್ರಮ ಒಂದು ಉತ್ಸವವಾಗಿ ಮಾರ್ಪಟ್ಟಿದೆ. ಇದಕ್ಕಾಗಿ ದೊಡ್ಡಪೇಟೆಯ ಮುಖ್ಯರಸ್ತೆಯೇ ವೇದಿಕೆಯಾಗುತ್ತದೆ.
ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ನಡು ರಸ್ತೆಯಲ್ಲಿ ದೇವತೆಯರ ಭೇಟಿಗೆ ರಂಗವಲ್ಲಿ ಹಾಕಿ ಅಲಂಕಾರ ಮಾಡಲಾಗಿರುತ್ತದೆ. ಆ ಜಾಗಕ್ಕೆ ಇಬ್ಬರು ದೇವತೆಯರು ಬಂದು ಸೇರುವುದೇ ರೋಚಕ.
Also Read: ವರ್ಷದ ಸಾಧಕ ಪ್ರಶಸ್ತಿಗೆ ಸಂಗೀತ ಕಲಾವಿದ ತೋಟಪ್ಪ ಉತ್ತಂಗಿ ಆಯ್ಕೆ
ಬರ ಬರನೇ ನಡೆದು ಬಂದವರು ಥಟ್ಟನೇ ಏನೋ ನೆನಪಾದಂತೆ ಹಿಂತಿರುಗಿ ಓಡುತ್ತಾರೆ. ಮತ್ತೆ ಮುನಿಸು ಮರೆತವರಂತೆ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಬಂದು ಹತ್ತಿರ ಬರುವಷ್ಟರಲ್ಲಿ ಮತ್ತೆ ದೂರ ಸರಿಯುತ್ತಾರೆ. ಹೀಗೆ ಸತತ ಅರ್ಧ ತಾಸು ಎಳೆದಾಡಿದ ನಂತರ ಇಬ್ಬರೂ ದೇವತೆಯರು ಅಪ್ಪಿ ಆಲಿಂಘನ ಮಾಡಿಕೊಳ್ಳುವಾಗ ನೆರೆದಿದ್ದ ಭಕ್ತ ಸಮೂಹ ಹರ್ಷೋದ್ಘಾರ ಮಾಡುತ್ತದೆ.
ಕೆಲ ಹೊತ್ತು ಇಬ್ಬರೂ ಅಪ್ಪಿಕೊಂಡು ಮುದ್ದಾಡಿ, ಭೇಟಿ ಮುಗಿದ ನಂತರ ತಮ್ಮ ದೇವಸ್ಥಾನಗಳ ಕಡೆಗೆ ಓಡೋಡಿ ಹೋಗುವ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ದುರ್ಗದ ಸಾವಿರಾರು ಜನ ಸೇರುತ್ತಾರೆ.
ಈ ಭೇಟಿ ಉತ್ಸವಕ್ಕಾಗಿ ಚಿತ್ರದುರ್ಗದಿಂದ ಹೊರಗೆ ಮದುವೆಯಾಗಿ ಹೋಗಿದ್ದ ಅಕ್ಕ ತಂಗಿಯರು ಕೂಡಾ ಬಂದು ಸೇರುವುದು ಬಹಳ ವಿಶೇಷವಾಗಿರುತ್ತದೆ.
ಮಂಗಳವಾರ ರಾತ್ರಿ ಕೂಡಾ 9 ಗಂಟೆ ವೇಳೆಗೆ ರಾಜಬೀದಿಗೆ ಆಗಮಿಸಿದ ದೇವತೆಯರ ಭೇಟಿ ಉತ್ಸವಕ್ಕೆ ಸಾವಿರಾರು ಜನ ಕೈ ಮುಗಿದು ಕಾಯುತ್ತಾ ನಿಂತಿದ್ದರು.
Also Read: ಅಡಿಕೆ ಧಾರಣೆ | 57 ಸಾವಿರದ ಗಡಿಯತ್ತ ರಾಶಿ ಅಡಿಕೆ ದಾಪುಗಾಲು
ಮಳೆಯ ಆತಂಕದ ನಡುವೆಯೂ ಶ್ರೀ ಬರಗೇರಮ್ಮ ಹಾಗೂ ತಿಪ್ಪಿನಘಟ್ಟಮ್ಮ ದೇವಿಯರ ಭೇಟಿ ಉತ್ಸವ ಅದ್ದೂರಿ, ವಿಜೃಂಭಣೆಯಿಂದ ಜರುಗಿತು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
