CHITRADURGA NEWS | 24 November 2026
ಚಿತ್ರದುರ್ಗ: ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಲಾರಿ ಚಾಲಕರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಚಿತ್ರದುರ್ಗದ ಮಾನ್ಯ ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಂ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಇದನ್ನೂ ಓದಿ: ಬಿ.ಎಸ್ಸಿ, ಜಿಎನ್ಎಂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಘಟನೆಯ ವಿವರ:
ದಿನಾಂಕ 01.12.2022ರ ರಾತ್ರಿ ಸುಮಾರು 11:45ರ ವೇಳೆಗೆ ಚಿತ್ರದುರ್ಗ ಹೊರವಲಯದ ಮದಕರಿಪುರ ಗ್ರಾಮದ ಬಳಿಯ ಮಾರುತಿ ಪೆಟ್ರೋಲ್ ಬಂಕ್ ಎದುರು ಈ ಅಪಘಾತ ಸಂಭವಿಸಿತ್ತು.
2ನೇ ಆರೋಪಿ ಎನ್ನಲಾದ ತಮಿಳುನಾಡಿನ ಪೂಸಾಯಿ ಎನ್. ವೆಡಿಯಪ್ಪನ್ ಎಂಬಾತ ತನ್ನ KA-51-MK-5070 ಸಂಖ್ಯೆಯ ಬೋರ್ ಲಾರಿಯನ್ನು ಯಾವುದೇ ಇಂಡಿಕೇಟರ್ ಹಾಕದೆ ರಸ್ತೆಯಲ್ಲಿ ಅಪಾಯಕಾರಿಯಾಗಿ ನಿಲ್ಲಿಸಿದ್ದನು. ಈ ವೇಳೆ ಶಿವಮೊಗ್ಗ ಜಿಲ್ಲೆಯ ನಿಡಿಗೆ ಗ್ರಾಮದ 1ನೇ ಆರೋಪಿ ರಂಗನಾಥ ಬಿನ್ ಮಂಜುನಾಥ ಎಂಬಾತ ತನ್ನ KA-14-C-1529 ಸಂಖ್ಯೆಯ ಈಚರ್ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ನಿಂತಿದ್ದ ಬೋರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದನು.
ಅಪಘಾತದ ತೀವ್ರತೆಗೆ ಬೋರ್ ಲಾರಿಯ ಕ್ಯಾಬಿನ್ನಲ್ಲಿದ್ದ ಹೆಲ್ಪರ್ ಅಲ್ಲಾಭಕ್ಷ್ ಅವರು ಮೃತಪಟ್ಟಿದ್ದು, ಈಚರ್ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮೊ.ಸಂ: 134/2026 (ಪ್ರಕಟಣೆಯಲ್ಲಿ ನಮೂದಾಗಿರುವಂತೆ) ಕಲಂ 279, 283, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದ ತೀರ್ಪು:
ಬಡಾವಣೆ ವೃತ್ತ ಕಚೇರಿಯ ಅಂದಿನ ಸಿಪಿಐ ಬಿ.ಆರ್. ನಯೀಂ ಅಹಮದ್ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಸಿ. ಮಂಜುನಾಥ್ ವಾದ ಮಂಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಮತಿ ಮಮತಾ ಡಿ. ಅವರು, ದಿನಾಂಕ 23.11.2026ರಂದು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಸಿಹಿಸುದ್ದಿ | ಚಿತ್ರದುರ್ಗದಲ್ಲಿ ಮಿನಿ ಉದ್ಯೋಗ ಮೇಳ
1ನೇ ಆರೋಪಿ (ಈಚರ್ ಲಾರಿ ಚಾಲಕ ರಂಗನಾಥ): ಕಲಂ 279ರ ಅಡಿಯಲ್ಲಿ 2 ತಿಂಗಳ ಸಾದಾ ಶಿಕ್ಷೆ ಮತ್ತು ₹900 ದಂಡ (ದಂಡ ಕಟ್ಟಲು ತಪ್ಪಿದರೆ 10 ದಿನ ಸಾದಾ ಶಿಕ್ಷೆ) ಹಾಗೂ ಕಲಂ 304(ಎ) ಅಡಿಯಲ್ಲಿ 3 ತಿಂಗಳ ಸಾದಾ ಶಿಕ್ಷೆ ಮತ್ತು ₹1,000 ದಂಡ (ದಂಡ ಕಟ್ಟಲು ತಪ್ಪಿದರೆ 20 ದಿನ ಸಾದಾ ಶಿಕ್ಷೆ) ವಿಧಿಸಲಾಗಿದೆ.
2ನೇ ಆರೋಪಿ (ಬೋರ್ ಲಾರಿ ಚಾಲಕ ಪೂಸಾಯಿ ಎನ್. ವೆಡಿಯಪ್ಪನ್): ಕಲಂ 283ರ ಅಡಿಯಲ್ಲಿ ₹100 ದಂಡ (ತಪ್ಪಿದರೆ 2 ದಿನ ಸಾದಾ ಶಿಕ್ಷೆ) ಹಾಗೂ ಕಲಂ 304(ಎ) ಅಡಿಯಲ್ಲಿ 3 ತಿಂಗಳ ಸಾದಾ ಶಿಕ್ಷೆ ಮತ್ತು ₹1,000 ದಂಡ (ತಪ್ಪಿದರೆ 20 ದಿನ ಸಾದಾ ಶಿಕ್ಷೆ) ವಿಧಿಸಲಾಗಿದೆ.
ಪ್ರಶಂಸೆ:
ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಲ್ ಚೌಕ್ಸೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಆರ್. ಅವರು ಶ್ಲಾಘಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

