CHITRADURGA NEWS | 17 OCTOBER 2026
ಚಿತ್ರದುರ್ಗ: ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಷ್ಟೇ ನರ್ಸ್ಗಳ ಪಾತ್ರವೂ ಅತ್ಯಂತ ನಿರ್ಣಾಯಕ ಮತ್ತು ಸಮಾನವಾದದ್ದು ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ದಿನ ಭವಿಷ್ಯ | 17 ಅಕ್ಟೋಬರ್ 2026 | ನಿರುದ್ಯೋಗಿಗಳಿಗೆ ಶುಭಸುದ್ದಿ, ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಯಶಸ್ಸು
ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಸಿ.ಎಂ.ಸಿ.ಆರ್.ಐ) ನಸಿರ್ಂಗ್ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿ.ಎಸ್.ಸಿ. ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ದೀಪ ಬೆಳಗುವ ಮತ್ತು ಪ್ರಮಾಣ ವಚನ’ ಸ್ವೀಕರಿಸುವ ‘ಜ್ಯೋತಿರ್ಗಮಯ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ಸಂದರ್ಭಗಳಲ್ಲಿ ವೈದ್ಯರಿಗಿಂತಲೂ ಹೆಚ್ಚಿನ ಜವಾಬ್ದಾರಿ ನರ್ಸ್ಗಳ ಮೇಲಿರುತ್ತದೆ. ಎಷ್ಟೋ ಕ್ಲಿಷ್ಟಕರ ಹಾಗೂ ಗಂಡಾಂತರಕಾರಿ ಸಂದರ್ಭಗಳಲ್ಲಿ ರೋಗಿಗಳನ್ನು ತಮ್ಮ ಸ್ವಂತ ಒಡಹುಟ್ಟಿದವರಂತೆ ಕಾಳಜಿ ವಹಿಸಿ ನೋಡಿಕೊಳ್ಳುವವರು ನರ್ಸ್ಗಳು ಎಂದು ಬಣ್ಣಿಸಿದರು.
ಮನುಷ್ಯನ ಜೀವಕ್ಕಿಂತ ಅಮೂಲ್ಯವಾದುದು ಮತ್ತೊಂದಿಲ್ಲ ಎಂದ ಜಿಲ್ಲಾಧಿಕಾರಿಗಳು, ಹಣ ಸಂಪಾದನೆ ಮಾಡಬಹುದು ಆದರೆ ಕಳೆದುಕೊಂಡ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ ಎಂದರು. ಲೈಫ್ ಸೈನ್ಸ್ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಹ ರೋಗಿಗಳ ಜೀವವನ್ನು ಉಳಿಸುವಲ್ಲಿ ಡಾಕ್ಟರ್ ಹಾಗೂ ನರ್ಸ್ಗಳ ಪಾತ್ರ ದೊಡ್ಡದು ಎಂದು ತಿಳಿಸಿದರು. ಆದ್ದರಿಂದ ವಿದ್ಯಾರ್ಥಿಗಳು ನರ್ಸಿಂಗ್ ವೃತ್ತಿಯನ್ನು ಅತ್ಯಂತ ಗೌರವದಿಂದ ಹಾಗೂ ನಿಸ್ವಾರ್ಥ ಮನಸ್ಸಿನಿಂದ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಶರಣ ಸಂಸ್ಕೃತಿ ಉತ್ಸವದಲ್ಲಿ ಜಮುರಾ ಕಪ್ ಕ್ರೀಡಾಕೂಟ ಸಮಾರೋಪ
ಬೇರೆ ವೃತ್ತಿಗಳಲ್ಲಿ ಕೇವಲ ಹಣ ಸಂಪಾದನೆ ಅಥವಾ ಸ್ವಂತ ಉದ್ಯೋಗ ಇರುತ್ತದೆ, ಆದರೆ ನರ್ಸಿಂಗ್ ವೃತ್ತಿ ಎಂದರೆ ಅದು ನೇರವಾಗಿ ಸಮಾಜ ಸೇವೆಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಶ್ಲಾಘಿಸಿದರು.
ಅತಿ ಹೆಚ್ಚು ಮಾನವೀಯತೆ ಹಾಗೂ ತಾಳ್ಮೆ ಅಗತ್ಯವಿರುವ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಇದರ ಬಗ್ಗೆ ಹೆಮ್ಮೆ ಪಡಬೇಕು ಎಂದು ತಿಳಿಸಿದರು. ಆಸ್ಪತ್ರೆಗಳಲ್ಲಿ ರೋಗಿಗಳೊಂದಿಗೆ ವ್ಯವಹರಿಸುವಾಗ ಅವರ ಮಾನಸಿಕ ಸ್ಥಿತಿ ಯಾವಾಗಲೂ ಒಂದೇ ರೀತಿ ಇರುವುದಿಲ್ಲವಾದ್ದರಿಂದ, ನರ್ಸ್ಗಳು ಅತೀವ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ ಎಂದರು.
ಪ್ಲಾಸ್ಟಿಕ್ ರೇಪಿಂಗ್ ರಹಿತ ಉಡುಗೊರೆಗೆ ಕರೆ:
ಕಾರ್ಯಕ್ರಮದಲ್ಲಿ ನೀಡಿದ ಉಡುಗೊರೆಗಳ ಉದಾಹರಣೆ ನೀಡಿದ ಜಿಲ್ಲಾಧಿಕಾರಿ ಎಸ್.ರಮ್ಯಾ ಅವರು, ಸಣ್ಣ ವಸ್ತುಗಳು, ಪುಸ್ತಕಗಳಿಗೆ ಅನಗತ್ಯವಾಗಿ ಪ್ಲಾಸ್ಟಿಕ್ ಹಾಗೂ ಕಾಗದದ ರೇಪಿಂಗ್ಗಳನ್ನು ಬಳಸಿ ತ್ಯಾಜ್ಯ ಹೆಚ್ಚಿಸಲಾಗುತ್ತಿದೆ. ಸರಾಸರಿ ಭಾರತೀಯರ ತ್ಯಾಜ್ಯ ಉತ್ಪಾದನೆ ಪ್ರಮಾಣ ಆತಂಕಕಾರಿಯಾಗಿ ಏರುತ್ತಿದೆ. ಈ ಪರಿಸರ ಮಾಲಿನ್ಯವನ್ನು ತಡೆಯಲು ಚಿತ್ರದುರ್ಗ ಜಿಲ್ಲೆಯ ಅಧಿಕಾರಿಗಳು ಹಾಗೂ ಆಯೋಜಕರು ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಲ್ಲಿ ರೇಪಿಂಗ್ ಇಲ್ಲದೆ ಸರಳವಾಗಿ ಉಡುಗೊರೆಗಳನ್ನು ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ :
ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದ ಪಠ್ಯಕ್ರಮವನ್ನು ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಬೋಧಿಸಲಾಗುತ್ತಿದೆ. ರಾಜ್ಯದ ನರ್ಸಿಂಗ್ ಪದವೀಧರ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ರಿಜಿಸ್ಟಾರ್ ಶ್ರೀಕಾಂತ್ ಪುಲಾರಿ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಹೋಂಸ್ಟೇಗಳ ನೋಂದಣಿ ಕಡ್ಡಾಯ | ಪ್ರವಾಸೋದ್ಯಮ ಇಲಾಖೆ ಎಚ್ಚರಿಕೆ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವರ್ಷದ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ಗಳಿಗೆ ರಾಜ್ಯದಾದ್ಯಂತ ವಿದ್ಯಾರ್ಥಿಗಳಿಂದ ಅತ್ಯುತ್ತಮ ಬೇಡಿಕೆ ವ್ಯಕ್ತವಾಗಿದ್ದು, ಕೆಇಎ ಮೂಲಕ ನಡೆದ ಮೊದಲ ರೌಂಡ್ ಕೌನ್ಸಿಲಿಂಗ್ನಲ್ಲೇ ಶೇ. 99ರಷ್ಟು ಸೀಟ್ಗಳು ಭರ್ತಿಯಾಗಿವೆ. ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿನ ನರ್ಸಿಂಗ್ ಕಾಲೇಜು ಸೀಟುಗಳನ್ನು ಗರಿಷ್ಠ 250ಕ್ಕೆ ಹೆಚ್ಚಿಸಲಾಗಿದೆ.
ರಾಜ್ಯದಲ್ಲಿ ಪ್ರತಿವರ್ಷ 70,000 ನರ್ಸಿಂಗ್ ಪದವೀಧರರು ಹೊರಬರುತ್ತಿದ್ದರೂ ಕೂಡ, ಜಾಗತಿಕ ಮಟ್ಟದಲ್ಲಿ ನರ್ಸ್ಗಳಿಗೆ ಭಾರಿ ಬೇಡಿಕೆ ಇರುವುದರಿಂದ ಉದ್ಯೋಗ ಕೊರತೆ ಕಾಡುವುದಿಲ್ಲ. ಜರ್ಮನಿ, ಜಪಾನ್ ಮತ್ತು ಇಟಲಿಯ ಮೆಡಿಕಲ್ ಪ್ರತಿನಿಧಿಗಳು ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನರ್ಸ್ಗಳನ್ನು ಅವರ ದೇಶಕ್ಕೆ ಆಹ್ವಾನಿಸುತ್ತಿದ್ದಾರೆ.
ನರ್ಸ್ಗಳಿಗೆ ಕೌಶಲ್ಯ ತರಬೇತಿ ಹಾಗೂ ವಿದೇಶಿ ಉದ್ಯೋಗಾವಕಾಶಗಳಿಗಾಗಿ ಫ್ರೆಂಚ್, ಜಪಾನೀಸ್, ಜರ್ಮನ್ ಸೇರಿದಂತೆ ವಿವಿಧ ಭಾಷೆಗಳ ಉಚಿತ ತರಬೇತಿಯನ್ನು ಸರ್ಕಾರದ ವತಿಯಿಂದ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ವಿದೇಶದಲ್ಲಿ ನಸಿರ್ಂಗ್ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಸುರಕ್ಷಿತ ವಿದೇಶಿ ವಲಸೆ ಕುರಿತು ವಿಶೇಷ ಸಮ್ಮೇಳನಗಳು ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಕೇಂದ್ರದ ನೆರವು ಅಗತ್ಯ | ಸಚಿವ ಟಿ.ರಘುಮೂರ್ತಿ
ಉನ್ನತ ಕೌನ್ಸಿಲ್ ಸಭೆಯಲ್ಲಿ ಚಿತ್ರದುರ್ಗದ ಮೆಡಿಕಲ್ ಕಾಲೇಜನ್ನು ಹೊಸ ಡಿ.ಸಿ. ಕಚೇರಿಗೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆದಿದ್ದು, ಕಾಲೇಜಿಗೆ ಹೊಸ ಮತ್ತು ಭವ್ಯವಾದ ಕಟ್ಟಡದ ಜೊತೆಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಡಿ.ಸಿ.ಕಚೇರಿ ಹಸ್ತಾಂತರ ಪೂರ್ಣಗೊಂಡ ತಕ್ಷಣವೇ, ನರ್ಸಿಂಗ್ ಹಾಗೂ ಅಲೈಡ್ ಕೋರ್ಸ್ ಹೊಸ ಕಟ್ಟಡದಲ್ಲಿಯೇ ನಡೆಸಲಾಗುವುದು ಎಂದರು.
ಕರ್ನಾಟಕ ನರ್ಸಿಂಗ್ ಕೌನ್ಸಿಲ್ನ ಸಂಪೂರ್ಣ ಕಾರ್ಯವಿಧಾನವನ್ನು ಡಿಜಿಟಲೀಕರಣಗೊಳಿಸಲಾಗಿದೆ. ನೋಂದಣಿ, ನವೀಕರಣ, ಎನ್ಒಸಿ ಹಾಗೂ ಪ್ರಮಾಣಪತ್ರ ಪಡೆಯುವುದು ಸೇರಿದಂತೆ ಎಲ್ಲಾ ಸೇವೆಗಳು ಆನ್ಲೈನ್ ಮೂಲಕ ಲಭ್ಯವಿವೆ. ವಿದ್ಯಾರ್ಥಿಗಳು ಕೆಎಸ್ಎನ್ಸಿ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಅಲ್ಲೇ ಅರ್ಜಿ ಸಲ್ಲಿಸಿ, ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಿಂದ ಕೌನ್ಸಿಲ್ಗೆ ನೇರವಾಗಿ ಬರುವ ಶ್ರಮ ತಪ್ಪಲಿದೆ. ಇತ್ತೀಚಿನ ಸವಾಲುಗಳನ್ನು ಎದುರಿಸಲು ಐಸಿಯು ಹಂತ-2 ಮತ್ತು ಹಂತ-3 ರಲ್ಲಿ ಕಾರ್ಯನಿರ್ವಹಿಸಲು ವಿಶೇಷ ಕ್ರಿಟಿಕಲ್ ಕೇರ್ ಕೋರ್ಸ್ ಅನ್ನು ಪರಿಚಯಿಸಲಾಗುತ್ತಿದೆ ಎಂದು ಶ್ರೀಕಾಂತ್ ಪುಲಾರಿ ಮಾಹಿತಿ ನೀಡಿದರು.
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ಬಿ.ವೈ.ಯುವರಾಜ್ ಮಾತನಾಡಿ ನರ್ಸಿಂಗ್ ವಿದ್ಯಾರ್ಥಿಗಳು ಸಂಪೂರ್ಣ ಸಮರ್ಪಣಾ ಭಾವ ಮತ್ತು ಕೌಶಲ್ಯದಿಂದ ಕಲಿಯಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಸಹಾನುಭೂತಿ, ಬದ್ಧತೆ ಮತ್ತು ಕೌಶಲ್ಯ ಎಂಬ ಮೂರು ಗುಣಗಳನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಅಳವಡಿಸಿಕೊಂಡು ಕಲಿಯಬೇಕು. ಕೇವಲ ಓದುವುದು ಮಾತ್ರವಲ್ಲದೆ, ನವೆಂಬರ್ ತಿಂಗಳಲ್ಲಿ ಕಾಲೇಜಿನಲ್ಲಿ ವೈದ್ಯಕೀಯ ಮತ್ತು ನಸಿರ್ಂಗ್ ವಿದ್ಯಾರ್ಥಿಗಳಿಗಾಗಿ ಸಾಂಸ್ಕøತಿಕ ಹಾಗೂ ಕ್ರೀಡಾಕೂಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಿದ್ಯಾರ್ಥಿಗಳು ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಹೇಳಿದರು.
ಇದನ್ನೂ ಓದಿ: ಲಿಡ್ಕರ್ ಚರ್ಮ ಉತ್ಪನ್ನಗಳ ಖರೀದಿಗೆ ಶೇ.20ರಷ್ಟು ಹಬ್ಬದ ರಿಯಾಯಿತಿ
ಕಾರ್ಯಕ್ರಮದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪನವನ ಸಲ್ಲಿಸಲಾಯಿತು. ಪ್ರಥಮ ವರ್ಷ ವಿದ್ಯಾರ್ಥಿಗಳು ಕ್ಯಾಂಡಲ್ ಹಿಡಿದು, ನರ್ಸಿಂಗ್ ವೃತ್ತಿಯ ಪ್ರಮಾಣ ವಚನವನ್ನು ಸ್ವೀಕರಿಸಿದರು. ಪ್ರಾಂಶುಪಾಲ ಕಿರಣ್ ಕುಮಾರ್ ಪ್ರಮಾಣ ವಚನ ಬೋಧಿಸಿದರು. ನರ್ಸಿಂಗ್ ಕಾಲೇಜು ನೋಡಲ್ ಅಧಿಕಾರಿ ಡಾ.ಶಬ್ನಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ ನಿರ್ಗಮಿತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವೈದ್ಯಕೀಯ ಕಾಲೇಜು ಅಧೀಕ್ಷಕಿ ಡಾ.ಮೇಘಾ.ಜಿ.ಹೆಚ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ.ಎಸ್.ಪಿ, ಅಕಾಡೆಮಿಕ್ ರಿಜಿಸ್ಟಾರ್ ಡಾ.ಚಂದ್ರಿಕಾ, ನರ್ಸಿಂಗ್ ಕೌನ್ಸಿಲ್ ಆಡಳಿತಾಧಿಕಾರಿ ವಿಶ್ವಾಸ್.ಎಸ್.ವಿ, ಶ್ರೂಷಕ ಕಾಲೇಜು ಅಧೀಕ್ಷಕಿ ಶಾಂತಮ್ಮ ನರ್ಸಿಂಗ್ ಕಾಲೇಜು ಸಿಬ್ಬಂದಿಗಳಾದ ಕರಿಬಸ್ಯಾನಾಯ್ಕ್, ಹನುಮಂತರೆಡ್ಡಿ.ಎಂ.ಟಿ, ಆರ್.ತಿಪ್ಪೇಸ್ವಾಮಿ, ಲಲಿತಾ.ಎನ್., ಸುಶ್ಮಿತಾ.ಸಿ.ಬಿ, ದೀಪಾ, ಟಿ.ಪುಷ್ಪಲತಾ ಸೇರಿದಂತೆ ಮತ್ತಿರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

