CHITRDURGA NEWS | 16 OCTOBER 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಎಲ್ಲರೂ ಪಕ್ಷಾತೀತವಾಗಿ ಶ್ರಮಿಸಿದಾಗ ಮಾತ್ರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಹೇಳಿದರು.
ಇದನ್ನೂ ಓದಿ: ಶರಣ ಸಂಸ್ಕೃತಿ ಉತ್ಸವದಲ್ಲಿ ಜಮುರಾ ಕಪ್ ಕ್ರೀಡಾಕೂಟ ಸಮಾರೋಪ
ಶರಣ ಸಂಸ್ಕೃತಿ ಉತ್ಸವ–2026ರ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕೃಷಿಮೇಳದ ಅಂಗವಾಗಿ ನಡೆದ ‘ಭದ್ರಾ ಮೇಲ್ದಂಡೆ ಸಮಗ್ರ ನೀರಾವರಿ ಪರಿಕಲ್ಪನೆ–ತ್ವರಿತ ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಹೊಣೆಗಾರಿಕೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಳ್ಳಲು ಸ್ವಾಮೀಜಿಗಳು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ನಡೆಸಿದ ಹೋರಾಟ ಮತ್ತು ನೀಡಿದ ಸಹಕಾರ ಮಹತ್ವದ್ದಾಗಿದೆ. ಈ ಯೋಜನೆಯಿಂದ ನಾಲ್ಕು ಜಿಲ್ಲೆಗಳ 13 ತಾಲ್ಲೂಕುಗಳಿಗೆ ಅನುಕೂಲವಾಗಲಿದ್ದು, 29.9 ಟಿಎಂಸಿ ನೀರು ಒದಗಿಸುವ ಗುರಿ ಹೊಂದಲಾಗಿದೆ. ಯೋಜನೆ ಪೂರ್ಣಗೊಳಿಸಲು ಸುಮಾರು ₹21 ಸಾವಿರ ಕೋಟಿ ಅಗತ್ಯವಿದೆ. ಕೇಂದ್ರ ಸರ್ಕಾರದಿಂದ ₹5 ಸಾವಿರ ಕೋಟಿ ನೆರವು ದೊರೆತರೆ, ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಿ ಯೋಜನೆ ಪೂರ್ಣಗೊಳಿಸಲು ಪ್ರಯತ್ನಿಸಲಿದೆ ಎಂದರು.
ಯೋಜನೆಯಿಂದ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೆರವು ಅತ್ಯಗತ್ಯ. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು. ತುಂಗಾ ನದಿಯಿಂದಲೂ ನೀರು ತಂದು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಹೋಂಸ್ಟೇಗಳ ನೋಂದಣಿ ಕಡ್ಡಾಯ | ಪ್ರವಾಸೋದ್ಯಮ ಇಲಾಖೆ ಎಚ್ಚರಿಕೆ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ, ಕೃಷಿಯೇ ನಿಜವಾದ ಆಸ್ತಿ. ಕೃಷಿ ಅಭಿವೃದ್ಧಿಯಾದರೆ ದುರ್ಭಿಕ್ಷದ ಸಮಸ್ಯೆ ಎದುರಾಗುವುದಿಲ್ಲ. ಬರಗಾಲದಿಂದ ದೀರ್ಘಕಾಲ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನದಿಯ ನೀರು ಹರಿದುಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಸಚಿವ ಟಿ. ರಘುಮೂರ್ತಿ ಅವರ ಪ್ರಯತ್ನ ಹಾಗೂ ರೈತರ ಸಹಕಾರದಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ವೇಗ ದೊರೆತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಭದ್ರಾ ಮೇಲ್ದಂಡೆ ಯೋಜನೆಗಾಗಿ ನಡೆದ ದೀರ್ಘಕಾಲದ ಹೋರಾಟವನ್ನು ಸ್ಮರಿಸಿದರು. ಆರಂಭದಲ್ಲಿ ಅಸಾಧ್ಯವೆಂದು ಭಾವಿಸಲಾಗಿದ್ದ ಯೋಜನೆಯಿಂದ ಇಂದು ಗೋನೂರು ಕೆರೆಗೆ ನೀರು ಹರಿದುಬಂದಿದೆ. ಈ ಹೋರಾಟಕ್ಕೆ ಎಸ್ಜೆಎಂ ವಿದ್ಯಾಪೀಠ ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ. ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳ ಕೊಡುಗೆ ಯೋಜನೆಯ ಪ್ರಗತಿಯಲ್ಲಿ ಮಹತ್ವದ್ದಾಗಿದೆ ಎಂದು ಹೇಳಿದರು.
ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಚಿಕ್ಕಗೊಂಡನಹಳ್ಳಿಯಲ್ಲಿ ವಸತಿ ನಿಲಯ ನಿರ್ಮಿಸಲು ಹಾಗೂ ದಾಸೋಹ ಕೇಂದ್ರವನ್ನು ನಿರಂತರವಾಗಿ ನಡೆಸಲು ಅಗತ್ಯ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಲಿಡ್ಕರ್ ಚರ್ಮ ಉತ್ಪನ್ನಗಳ ಖರೀದಿಗೆ ಶೇ.20ರಷ್ಟು ಹಬ್ಬದ ರಿಯಾಯಿತಿ
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಶ್ರೀಮಠದ ಸ್ವಾಮೀಜಿಗಳು ಅಗತ್ಯ ಸಹಕಾರ ನೀಡಿದ್ದಾರೆ. ಸಚಿವರು ಮೂರು ತಾಲ್ಲೂಕುಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಮೂಲಕ ಬದ್ಧತೆ ತೋರಿಸಿದ್ದಾರೆ. ಇದೇ ರೀತಿಯ ಬದ್ಧತೆಯನ್ನು ಎಲ್ಲ ಜನಪ್ರತಿನಿಧಿಗಳು ತೋರಿದರೆ ಅಭಿವೃದ್ಧಿ ಯೋಜನೆಗಳನ್ನು ಸುಗಮವಾಗಿ ಪೂರ್ಣಗೊಳಿಸಬಹುದು ಎಂದರು.
ಯೋಜನೆಯ ನಿವೃತ್ತ ಮುಖ್ಯ ಎಂಜಿನಿಯರ್ ಚೆಲುವರಾಜ್, ರೈತ ಪ್ರತಿನಿಧಿ ಬಿ. ಲಿಂಗಾರೆಡ್ಡಿ ಹಾಗೂ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಣ್ಣ ಮಾತನಾಡಿ, ಯೋಜನೆಯ ಅನುಷ್ಠಾನದಲ್ಲಿ ಎಂಜಿನಿಯರಿಂಗ್ ಇಲಾಖೆ, ರೈತರು, ಸ್ವಾಮೀಜಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯ ಎಸ್.ಎಸ್. ಚಂದ್ರಶೇಖರ್, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ರವಿಶಂಕರ್, ಕರ್ನಾಟಕ ರೈತ ಸಂಘದ ಅಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಿಮ್ಮ ಮುಖದ ಈ ಭಾಗಗಳನ್ನು ಒತ್ತುವುದರಿಂದ ಹೊಳೆಯುವ ಚರ್ಮವನ್ನು ಪಡೆಯಬಹುದಂತೆ
ಕೃಷಿ ಮೇಳದಲ್ಲಿ ವಿವಿಧ ಮಳಿಗೆಗಳು, ಜಾನುವಾರು ಪ್ರದರ್ಶನ
ಕೃಷಿಮೇಳದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಆಯುಷ್, ಮೀನುಗಾರಿಕೆ, ಖಾದಿ, ಜೈವಿಕ ಇಂಧನ ಹಾಗೂ ಸಾವಯವ ಕೃಷಿಗೆ ಸಂಬಂಧಿಸಿದ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ಕೃಷಿ ಮೇಳದಲ್ಲಿ ಭಾಗವಹಿಸಿದ್ದ ಇಲಾಖೆಗಳ ಪೈಕಿ ಕೃಷಿ ಇಲಾಖೆ ಪ್ರಥಮ, ತೋಟಗಾರಿಕೆ ಇಲಾಖೆ ದ್ವಿತೀಯ, ರೇಷ್ಮೆ ಇಲಾಖೆ ತೃತೀಯ ಹಾಗೂ ಜಿಲ್ಲಾ ಪಂಚಾಯತ್ ಸಮಾಧಾನಕರ ಬಹುಮಾನ ಪಡೆದವು.
ಜಿಲ್ಲಾ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಜೋಡೆತ್ತು ಹಾಗೂ ಸಾಕುಪ್ರಾಣಿಗಳ ಪ್ರದರ್ಶನ ನಡೆಯಿತು. 70 ಜೋಡೆತ್ತುಗಳು, 15 ನಾಟಿ ಹಸುಗಳು, ಮಿಶ್ರತಳಿ ಜಾನುವಾರುಗಳು, ಟಗರುಗಳು, ಕೋಳಿ, ಹುಂಜ ಮತ್ತು ಪಾರಿವಾಳಗಳನ್ನು ಪ್ರದರ್ಶಿಸಲಾಯಿತು. ಜೋಡೆತ್ತು ಪ್ರದರ್ಶನದಲ್ಲಿ ಕೌಶಿಕ್ ನಾಯ್ಡು, ಪವನ್, ವಿನಯ್ ಕುಮಾರ್, ಕಲ್ಲೇಶ್, ಪಾಲಯ್ಯ ಹಾಗೂ ಮಹೇಶ್ ಜಿ.ಟಿ. ಪ್ರಶಸ್ತಿಗೆ ಪಾತ್ರರಾದರು.
ಕೃಷಿ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರು, ಉಣ್ಣೆ ನೇಕಾರರು, ಪಶುಸಂಗೋಪಕರು ಹಾಗೂ ರೇಷ್ಮೆ ಬೆಳೆಗಾರರನ್ನು ಸನ್ಮಾನಿಸಲಾಯಿತು. ಅಂಜನಾ ನೃತ್ಯ ಕಲಾಕೇಂದ್ರ ಮತ್ತು ನಾಟ್ಯರಂಜಿನಿ ನೃತ್ಯ ಕಲಾಕೇಂದ್ರದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಇದನ್ನೂ ಓದಿ: ಮನೆಗಳಲ್ಲಿ ಮೆಟ್ಟಿಲುಗಳ ಸಂಖ್ಯೆ ಎಷ್ಟಿರಬೇಕು ಗೊತ್ತಾ? ವಾಸ್ತು ನಿಯಮ ತಿಳಿಯಿರಿ
ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರೇಂದ್ರಕುಮಾರ್ ಸ್ವಾಗತಿಸಿದರು. ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಹಾಗೂ ನವೀನ್ ಮಸ್ಕಲ್ ನಿರೂಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

