CHITRADURGA NEWS | 06 FEBRUARY 2026
ಚಿತ್ರದುರ್ಗ: ಜಮೀನಿನ ಮೂಲ ದಾಖಲೆಗಳು ನಾಶ ಹಾಗೂ ದುರಪಯೋಗವಾಗುವುದನ್ನು ತಡೆಯಲು ‘ಭೂ ಸುರಕ್ಷಾ’ ಯೋಜನೆಗೆ ಚಾಲನೆ ನೀಡಲಾಗಿದೆ. ಯೋಜನೆಯಡಿ 63.58 ಕೋಟಿ ಹಳೆಯ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಗೆ ಕೇಂದ್ರ ಕೈಗೊಂಡ ಕ್ರಮಗಳ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಜೆ.ಪಿ.ನಡ್ಡಾ ಮಾಹಿತಿ
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಕೆಲವೇ ತಿಂಗಳಲ್ಲಿ ರೈತರು ಆನ್‌ಲೈನ್ ಮೂಲಕವೇ ಹಳೆಯ ಕಂದಾಯ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಪಡೆಯಬಹುದಾಗಿದೆ. ಇದರಿಂದ ಅನಗತ್ಯವಾಗಿ ತಾಲ್ಲೂಕು ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದಿಂದ ದೇಶದಲ್ಲಿ ಜನಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಹೊಸ ಜಿಲ್ಲೆ ಅಥವಾ ತಾಲೂಕುಗಳ ರಚನೆಯ ಪ್ರಸ್ತಾಪವನ್ನು ಸದ್ಯಕ್ಕೆ ಕೈಬಿಡಲಾಗಿದೆ. ಜನಗಣತಿ ಮುಗಿಯುವವರೆಗೆ ಯಾವುದೇ ಆಡಳಿತಾತ್ಮಕ ಗಡಿ ಬದಲಾವಣೆ ಮಾಡಲು ಅವಕಾಶವಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
ರಾಜ್ಯದಲ್ಲಿ ಹೊಸದಾಗಿ ಘೋಷಣೆಯಾದ 63 ಹೊಸ ತಾಲೂಕುಗಳ ಪೈಕಿ 49 ತಾಲೂಕುಗಳಲ್ಲಿ ‘ಪ್ರಜಾಸೌಧ’ ಹೆಸರಿನಡಿ ಸುಸಜ್ಜಿತ ಕಚೇರಿ ಕಟ್ಟಡಗಳನ್ನು ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 14 ತಾಲ್ಲೂಕುಗಳಿಗೆ ಕಚೇರಿಗಳು ಮಂಜೂರಾತಿ ನೀಡಲಾಗಿತ್ತು. ಪ್ರಸ್ತುತ ಸರ್ಕಾರ ಉಳಿದ ಈಗಾಗಲೇ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮುಂದಿನ ಒಂದೂವರೆ ವರ್ಷದೊಳಗೆ ಈ ಪ್ರಜಾಸೌಧಗಳು ಸಾರ್ವಜನಿಕ ಸೇವೆಗೆ ಸಿದ್ಧವಾಗಲಿವೆ ಎಂದರು.
11 ಲಕ್ಷ ಪೌತಿ ಖಾತೆಗಳ ಬದಲಾವಣೆ :
ಜಮೀನುಗಳ ನಕಲಿ ವ್ಯವಹಾರ ಮತ್ತು ವಂಚನೆಗಳನ್ನು ತಡೆಯಲು ಆರ್‌ಟಿಸಿ (ಖಖಿಅ) ದಾಖಲೆಗಳಿಗೆ ಮಾಲೀಕರ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಪ್ರಕ್ರಿಯೆ ಚಾಲನೆ ನೀಡಲಾಗಿದೆ. ಈ ವೇಳೆ ರಾಜ್ಯದಾದ್ಯಂತ 49 ಲಕ್ಷ ಜಮೀನು ಖಾತೆಗಳು ಮೃತ ಹೆಸರಿನಲ್ಲಿರುವುದು ಬೆಳಕಿಗೆ ಬಂದಿತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 06 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಅಭಿಯಾನದ ಮಾದರಿಯಲ್ಲಿ ಪೌತಿ ಖಾತೆಗಳ ಬದಲಾವಣೆ ಸರ್ಕಾರ ಮುಂದಾಗಿದ್ದು, ಮೃತಪಟ್ಟ ಮಾಲೀಕರ ಹೆಸರಿನಲ್ಲಿರುವ ಜಮೀನುಗಳನ್ನು ಅವರ ವಾರಸುದಾರರಿಗೆ ವರ್ಗಾಯಿಸಲು ‘ಇ-ಪೌತಿ’ ಆಂದೋಲನ ನಡೆಸಲಾಗುತ್ತಿದೆ.
ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲೆಯ ಪ್ರತಿಯೊಂದು ಹಳ್ಳಿಗಳ ಮನೆಬಾಗಿಲಿಗೆ ತೆರಳಿ ಇ-ಕೆವೈಸಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದುವರೆಗೆ ರಾಜ್ಯಾದ್ಯಂತ 11 ಲಕ್ಷಕ್ಕೂ ಅಧಿಕ ಖಾತೆ ಬದಲಾವಣೆ ಮಾಡಲಾಗಿದೆ. ಇದರಿಂದ ಜಮೀನಿನ ನೈಜ ಮಾಲೀಕರಿಗೆ ಸುರಕ್ಷತೆ ಸಿಗಲಿದ್ದು, ಬೇನಾಮಿ ವ್ಯವಹಾರಗಳಿಗೆ ಕಡಿವಾಣ ಬೀಳಲಿದೆ.
ಪೌತಿ ಖಾತೆ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲು ಹಾಗೂ ಕೆಲಸದ ದಕ್ಷತೆ ಹೆಚ್ಚಿಸಲು ಕಂದಾಯ ನಿರೀಕ್ಷಕರಿಗೆ ಲ್ಯಾಪ್‌ಟಾಪ್ ವಿತರಿಸಲು ಸರ್ಕಾರದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ ಮುಂಬರುವ ಬಜೆಟ್‌ನಲ್ಲಿ ರೂ.5 ಕೋಟಿ ಮೀಸಲಿಡಲಾಗುವುದು ಎಂದು ಸಚಿವರು ತಿಳಿಸಿದರು.
ಬಾಕಿ ಪ್ರಕರಣಗಳ ವಿಲೇವಾರಿ:
ಕಂದಾಯ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಹಂತದಲ್ಲಿ 10,774 ಹಾಗೂ ಉಪವಿಭಾಗಾಧಿಕಾರಿಗಳ ಹಂತದಲ್ಲಿ 73,624 ಅವಧಿ ಮೀರಿದ ಪ್ರಕರಣಗಳು ಬಾಕಿ ಇದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 25 ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಸರ್ಕಾರಿ ಹಾಸ್ಟೆಲ್ ಗೆ ಬಾಡಿಗೆ ಕಟ್ಟಡದ ಅಗತ್ಯ | ಆಸಕ್ತ ಕಟ್ಟಡ ಮಾಲೀಕರು ಅರ್ಜಿ ಸಲ್ಲಿಸಿ
ಬಹುತೇಕ ಅವಧಿ ಮೀರಿದ ಪ್ರಕರಣಗಳು ವಿಲೇವಾರಿಯಾಗಿದ್ದು, ತಹಶೀಲ್ದಾರ್ ನ್ಯಾಯಾಲಯದಲ್ಲಿ 488 ಪ್ರಕರಣ ಹಾಗೂ ಉಪವಿಭಾಗಧಿಕಾರಿಗಳ ನ್ಯಾಯಾಲಯದಲ್ಲಿ 11,800 ಪ್ರಕರಣಗಳು ಬಾಕಿ ಉಳಿದಿವೆ. ಹಿಂದೆ ಪ್ರಕರಣವೊಂದರ ವಿಲೇವಾರಿಗೆ ಸರಾಸರಿ 250 ದಿನಗಳು ಬೇಕಾಗುತ್ತಿದ್ದವು. ಈಗ ಆ ಅವಧಿಯನ್ನು 84 ದಿನಗಳಿಗೆ ತಗ್ಗಿಸಲಾಗಿದೆ ಎಂದು ಹೇಳಿದರು.
ಗ್ರಾಮದ ನಕ್ಷೆಯಲ್ಲಿ ದಾರಿ ಇದ್ದು, ಅದನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅಂತಹ ದಾರಿಯನ್ನು ತಕ್ಷಣವೇ ತೆರವುಗೊಳಿಸುವುದು ಕಂದಾಯ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ ಖಾಸಗಿ ಜಮೀನುಗಳ ಮೂಲಕ ಹಾದು ಹೋಗುವ ವಾಡಿಕೆ ರಸ್ತೆಗಳ ಪ್ರಕರಣಗಳು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಆದಾಗ್ಯೂ, ರೈತರಿಗೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಬಿತ್ತನೆ ಬೀಜ, ಗೊಬ್ಬರ ಸಾಗಿಸಲು ಮತ್ತು ಬೆಳೆಗಳನ್ನು ಸಾಗಿಸಲು ದಾರಿ ಕಲ್ಪಿಸಿಕೊಡಲು ತಹಶೀಲ್ದಾರ್‌ಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹೊಸ ಡಿಸಿ ಕಚೇರಿ, ಜಿಲ್ಲಾ ಮಂತ್ರಿಗಳ ತೀರ್ಮಾನ ಅಂತಿಮ:
ಚಿತ್ರದುರ್ಗದ ಹೊಸ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಅಗತ್ಯ ಇರುವ ಅನುದಾನವನ್ನು ಬಿಡುಗಡೆ ಮಾಡಿ, ರಸ್ತೆ ಮತ್ತು ನೀರಿನ ಸೌಲಭ್ಯ ಒದಗಿಸಲಾಗಿದೆ. ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆದರೆ, ಹೊಸ ಕಚೇರಿಯು ನಗರದಿಂದ ದೂರವಿರುವ ಕಾರಣ ಸ್ಥಳಾಂತರದ ಬಗ್ಗೆ ಸಾರ್ವಜನಿಕರಲ್ಲಿಕೇಳಿಬರುತ್ತಿರುವ ಅಸಮಾಧಾನ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹೊಸ ಕಟ್ಟಡ ಹಾಗೂ ಸ್ಥಳವನ್ನು ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ನೀಡಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುವರು ಎಂದು ಎಂದು ಸಚಿವ ಕೃಷ್ಣ ಭೈರೇಗೌಡ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.
ಇದನ್ನೂ ಓದಿ: ಬನಶಂಕರಿ, ಮಲ್ಲಯ್ಯ, ನಾರಾಯಣಪ್ಪ ಬಡಾವಣೆ ನಿವಾಸಿಗಳಿಂದ ಡಿಸಿಗೆ ಮನವಿ
ಸುದ್ದಿಗೋಷ್ಠಿಯಲ್ಲಿ ವೈನ್‌ಬೋರ್ಡ್ ಅಧ್ಯಕ್ಷ ಡಾ.ಯೋಗಿಶ್‌ಬಾಬು, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಭೂ ದಾಖಲೆಗಳ ಉಪನಿರ್ದೇಶಕಿ ಭಾಗ್ಯಮ್ಮ ಇತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
