CHITRADURGA NEWS | 26 AUGUST 2026
ಚಿತ್ರದುರ್ಗ: ಬಡ ಕುಟುಂಬಗಳಿಗೆ ನಿವೇಶನಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಅರುಂಧತಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಚಿತ್ರದುರ್ಗ ಶಾಖಾ ಕಾಲುವೆಗೆ 3 ಟಿಎಂಸಿ ನೀರು | ನೀರಾವರಿ ಹೋರಾಟ ಸಮಿತಿ ಸ್ವಾಗತ
ಭ್ರಷ್ಟಾಚಾರ ವಿರೋಧಿ ಆಂದೋಲನದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, 30–40 ವರ್ಷಗಳಿಂದ ಚಿತ್ರದುರ್ಗದಲ್ಲಿಯೇ ವಾಸಿಸುತ್ತಿರುವ ಅನೇಕ ಕುಟುಂಬಗಳು ಕಡು ಬಡತನದಲ್ಲಿದ್ದು, ಸ್ವಂತ ನಿವೇಶನ ಅಥವಾ ಮನೆ ಹೊಂದಿಲ್ಲ. ಬಹುತೇಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರದ ಯಾವುದೇ ವಸತಿ ಯೋಜನೆಯಡಿ ಇವರಿಗೆ ನಿವೇಶನ ಕಲ್ಪಿಸದಿರುವುದರಿಂದ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗಿದೆ ಎಂದು ಹೇಳಿದರು.
ಚಿತ್ರದುರ್ಗ ತಾಲ್ಲೂಕು ಕಸಬಾ ಹೋಬಳಿಯ ಎಂ.ಕೆ.ಹಟ್ಟಿಯ ರಿ.ಸ.ನಂ.45/2ರಲ್ಲಿ 6 ಎಕರೆ 30 ಗುಂಟೆ ಸರ್ಕಾರಿ ಜಮೀನಿದ್ದು, ಅದರಲ್ಲಿ ನಾಲ್ಕು ಎಕರೆ ಜಮೀನನ್ನು ಬಡ ಕುಟುಂಬಗಳಿಗೆ ಮಂಜೂರು ಮಾಡಿದರೆ ಸುಮಾರು 150 ಕುಟುಂಬಗಳಿಗೆ ಸ್ವಂತ ನಿವೇಶನ ದೊರೆಯಲಿದೆ. ಈ ಮೂಲಕ ಅವರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ನಗರದ ಸ್ವಚ್ಛತೆ ಹಾಗೂ ಒಳಚರಂಡಿ ಸಮಸ್ಯೆಗಳ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆಯ ನಿರ್ಲಕ್ಷ್ಯದಿಂದ ನಗರದ ಹಲವು ಪ್ರದೇಶಗಳಲ್ಲಿ ಯುಜಿಡಿ ತುಂಬಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಹೊಳಲ್ಕೆರೆ ರಸ್ತೆಯ ಯಾದವ ಮಠದ ಮುಂಭಾಗದಲ್ಲಿ ನೂರಾರು ಲೋಡುಗಳಷ್ಟು ತ್ಯಾಜ್ಯ ಹಾಗೂ ಹಳೆಯ ಮನೆಗಳನ್ನು ಕೆಡವಿದಾಗ ದೊರೆಯುವ ಕಲ್ಲು, ಮಣ್ಣಿನ ರಾಶಿಗಳನ್ನು ಸುರಿಯಲಾಗಿದೆ ಎಂದು ದೂರಿದರು.
ಇದನ್ನೂ ಓದಿ: ಅಲೆಮಾರಿ ಸಮುದಾಯಕ್ಕೆ ನಿವೇಶನ, ಮನೆ ಹಾಗೂ ಮೂಲಸೌಕರ್ಯ ಕಲ್ಪಿಸಿ
ನಗರದ ಪ್ರಸಾದಂ ಹೋಟೆಲ್ ಪಕ್ಕದ ರಾಜಕಾಲುವೆಯನ್ನು ಮುಚ್ಚಿ ಗೋಡೆ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಈ ಕುರಿತು ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳದೆ, ಮತದಾರರ ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ ಎಂಬ ಹಾರಿಕೆಯ ಉತ್ತರ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ನಗರಸಭೆ ಪೌರಾಯುಕ್ತರ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ನಗರದ ಸ್ವಚ್ಛತೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹನುಮಂತಪ್ಪ ದುರ್ಗ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಇದನ್ನೂ ಓದಿ: ಕೂದಲು ಉದುರುವಿಕೆಗೆ ನೋನಿ ಹಣ್ಣು ಪ್ರಯೋಜನಕಾರಿಯೇ? ತಿಳಿಯಿರಿ
ಪ್ರತಿಭಟನೆಯಲ್ಲಿ ಏಕಾಂತಪ್ಪ, ನ್ಯಾಯವಾದಿಗಳಾದ ಸುರೇಶ್, ತಿಪ್ಪೇಸ್ವಾಮಿ, ದಯಾನಂದ, ವಿಶ್ವನಾಥ, ವಿವಿಧ ಬಡಾವಣೆಗಳ ನಿವಾಸಿಗಳಾದ ಸುನಿತ, ಹಂಸ, ರಾಧಮ್ಮ, ನಾಗೇಂದ್ರಪ್ಪ, ಅಕ್ಕಿತಿಮ್ಮಯ್ಯನಹಟ್ಟಿಯ ಬಸವರಾಜ್, ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

