CHITRADURGA NEWS | 03 MAY 2026
ಚಿತ್ರದುರ್ಗ: ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಹಾಗೂ ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಆಗಸ್ಟ್ 21, 22 ಮತ್ತು 23 ರಂದು ‘ಸಮಾಧಾನ್ ಸಮರೋಹ್’ ಎಂಬ ವಿಶೇಷ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶರು ಹಾಗೂ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿ ವಿ.ಶ್ರೀಶಾನಂದ ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರು | ಆಡಳಿತಾತ್ಮಕ ನ್ಯಾಯಮೂರ್ತಿ ವಿ.ಶ್ರೀಶಾನಂದ
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ 58 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಅರ್ಹವೆಂದು ಗುರುತಿಸಿ ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯ 58 ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿವೆ. ಇದಕ್ಕೆ ಜಿಲ್ಲಾಡಳಿತ, ವಕೀಲರು ಹಾಗೂ ಪಕ್ಷಗಾರರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ತೀರ್ಪು ವಿಳಂಬವಾಗುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಹಾಗೂ ಲೋಕ್ ಅದಾಲತ್ಗಳ ಮೂಲಕ ಸಂಧಾನದ ಹಾದಿಯಲ್ಲಿ ಪ್ರಕರಣಗಳನ್ನು ಮುಗಿಸುವುದು ಉಭಯ ಪಕ್ಷಗಾರರಿಗೂ ಲಾಭದಾಯಕ ಎಂದು ತಿಳಿಸಿದರು.
ಪಕ್ಷಕಾರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ತಮ್ಮ ಜೀವಿತಾವಧಿಯಲ್ಲಿ ಪ್ರಕರಣಗಳನ್ನು ಸುಖಾಂತ್ಯಗೊಳಿಸಿಕೊಳ್ಳಲು ಇದನ್ನು ಬಳಸಿಕೊಳ್ಳಬೇಕು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಕೀಲರ ಸಂಘದ ಸದಸ್ಯರು ಒಗ್ಗೂಡಿ ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು. ಗುರುತಿಸಲಾದ ಪ್ರಕರಣಗಳ ಪಕ್ಷಗಾರರಿಗೆ ನೋಟಿಸ್ ನೀಡಿ, ಅವರನ್ನು ಕರೆಸಿ ಚರ್ಚಿಸಿ, ರಾಜಿ ಮೂಲಕ ಸಮಸ್ಯೆ ಬಗೆಹರಿಸಲು ಮನ ಒಲಿಸಲಾಗುವುದು.
ಇದನ್ನೂ ಓದಿ: ಸಿದ್ದಾಪುರ | ಉಚಿತ ಆರೋಗ್ಯ ತಪಾಸಣಾ ಶಿಬಿರ
ಜಿಲ್ಲೆಯ ಪ್ರಧಾನ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಿಗೆ ಬೇರೆಡೆ ವರ್ಗಾವಣೆಯಾಗಿದೆ. ಆದರೂ ತುಂಬಾ ಆಸಕ್ತಿ ವಹಿಸಿ ಪ್ರಕರಣಗಳ ಗುರುತಿಸಿ ಪಕ್ಷಗಾರರನ್ನು ಸಂಪರ್ಕಿಸಲು ಕೆಲಸ ಮಾಡುತ್ತಿದ್ದಾರೆ ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ತಿಳಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯಾದ್ಯಂತ ಒಟ್ಟು 4,328 ಪ್ರಕರಣಗಳನ್ನು ಈ ಪ್ರಕ್ರಿಯೆಗಾಗಿ ಗುರುತಿಸಲಾಗಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 1,245 ಪ್ರಕರಣಗಳಿದ್ದರೆ, ಬೆಂಗಳೂರು ಗ್ರಾಮಾಂತರದಲ್ಲಿ 18 ಪ್ರಕರಣಗಳಿವೆ.
ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸುಪ್ರೀಂ ಕೋರ್ಟ್ ಹಂತಕ್ಕೆ ಹೋಗಿರುವ ಪ್ರಕರಣಗಳಲ್ಲಿನ ಉಭಯ ಪಕ್ಷಕಾರರನ್ನು ಕರೆಸಿ, ಅವರಿಗೆ ನ್ಯಾಯಾಲಯದ ದೃಷ್ಟಿಯಿಂದ ಯಾವ ರೀತಿ ಸಮಾಧಾನ ಮತ್ತು ರಾಜಿಸೂತ್ರಗಳನ್ನು ಏರ್ಪಡಿಸಿಕೊಳ್ಳಬಹುದು ಎಂಬ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಇದನ್ನೂ ಓದಿ: ಬಿಎಸ್ವೈ ಅಭಿಮಾನೋತ್ಸವ ಯಾವುದೇ ರಾಜಕಾರಣದ ಉದ್ದೇಶ ಅಲ್ಲ | ಪ್ರಹ್ಲಾದ್ ಜೋಶಿ
ಕಾನೂನು ಸೇವಾ ಪ್ರಾಧಿಕಾರವು ಸಾರ್ವಜನಿಕರ ಸೇವೆಗಾಗಿ ದಿನದ 24 ಗಂಟೆ ತೆರೆದಿರುತ್ತದೆ. ರಜಾ ದಿನಗಳಲ್ಲಿಯೂ ಸಹ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ವಿಶೇಷ ಲೋಕ ಅದಾಲತ್ ಹೊರತಾಗಿಯೂ ಕಾನೂನು ಸೇವಾ ಪ್ರಾಧಿಕಾರ ಪಕ್ಷಗಾರರು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಬಯಸಿದರೆ ವೇದಿಕೆ ಒದಗಿಸುತ್ತದೆ.
ಪ್ರತಿಯೊಬ್ಬರಿಗೂ ಉಚಿತವಾಗಿ ಕಾನೂನಿನ ಅರಿವು ನೀಡುತ್ತದೆ. ವಿಶೇಷವಾಗಿ ದೀನದಲಿತರು, ಕೋಮು ಹಿಂಸಾಚಾರಕ್ಕೆ ಒಳಗಾದವರು ಮತ್ತು ಪ್ರವಾಹ ಅಥವಾ ಬರಗಾಲದಂತಹ ನೈಸರ್ಗಿಕ ವಿಕೋಪಕ್ಕೆ ತುತ್ತಾದವರು ವಾರ್ಷಿಕ ವರಮಾನದ ಆಧಾರದ ಮೇಲೆ ಉಚಿತ ಕಾನೂನು ನೆರವು ಪಡೆಯಬಹುದು. ನ್ಯಾಯಾಲಯದ ಶುಲ್ಕ ಸಹ ಪಾವತಿಸಲಾಗುತದೆ. ಕಾನೂನು ಸೇವಾ ಪ್ರಾಧಿಕಾರದ ವ್ಯವಸ್ಥೆ ತಾಲ್ಲೂಕು ಮುನಿಸಿಪ್ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಛ ನ್ಯಾಯಾಲಯ ವರೆಗೆ ಕಾರ್ಯನಿರ್ವಹಿಸುತ್ತದೆ ಎಂದರು.
ಈ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪತ್ರಕರ್ತರ ಪಾತ್ರ ಬಹಳ ದೊಡ್ಡದಿದೆ. ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಪತ್ರಿಕೆ ಮತ್ತು ಸ್ಥಳೀಯ ಚಾನೆಲ್ಗಳ ಮೂಲಕ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ಕೋರಿದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲು ಸಕಾಲ | ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಚ್.ಕೆ.ಬಸವರಾಜ್
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜು, ವಕೀಲರ ಸಂಘದ ಅಧ್ಯಕ್ಷ ಮಹೇಶ್ವರಪ್ಪ ಸೇರಿದಂತೆ ಇತರೆ ನ್ಯಾಯಾಧೀಶರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

