CHITRADURGA NEWS | 31 JULY 2026
ಚಿತ್ರದುರ್ಗ: ಮುಂಬರುವ ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುವ ನಾಯಕರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಎಐಸಿಸಿ ಚಿತ್ರದುರ್ಗ ಜಿಲ್ಲಾ ಸಂಘಟನ್ ಸೃಜನ್ ಅಭಿಯಾನ ಉಸ್ತುವಾರಿ, ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಂಸದ ರಿಪುನ್ ಬೋರಾ ಹೇಳಿದರು.
ಇದನ್ನೂ ಓದಿ: ಪ್ರತಿ ತಾಲ್ಲೂಕಿನಲ್ಲಿ ರೈತರ ಸಭೆ ನಡೆಸಿ ಬಿತ್ತನೆ ವೈಫಲ್ಯ ವಿಮೆಗೆ ಕ್ರಮ ಕೈಗೊಳ್ಳಿ | ಜಿಲ್ಲಾಧಿಕಾರಿ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಂಘಟನ್ ಸೃಜನ್ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ತ್ಯಾಗ ಮತ್ತು ಬಲಿದಾನದ ಇತಿಹಾಸ ಹೊಂದಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿ ಮೂಲಕ ಎಐಸಿಸಿಗೆ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಹೆಸರನ್ನು ಶಿಫಾರಸು ಮಾಡಲಾಗುವುದು ಎಂದರು.
ದೇಶದಲ್ಲಿ ಬಿಜೆಪಿ ಜಾತಿ–ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತ ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಕಾರ್ಯಕರ್ತರು ಪಕ್ಷದ ಸಿದ್ಧಾಂತ ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಮಾತನಾಡಿ, ಕಾಂಗ್ರೆಸ್ ಶಿಸ್ತಿಗೆ ಹೆಸರಾದ ಪಕ್ಷವಾಗಿದ್ದು, ಶಿಸ್ತು ಮತ್ತು ಪಕ್ಷನಿಷ್ಠೆ ಹೊಂದಿದವರೇ ಸಂಘಟನೆಯನ್ನು ಬಲಪಡಿಸಬಲ್ಲರು ಎಂದರು. ಗೊಂದಲಗಳಿಂದ ಅರ್ಹ ಅಭ್ಯರ್ಥಿಗಳಿಗೆ ಹಿನ್ನಡೆಯಾಗದಂತೆ ಕಾರ್ಯಕರ್ತರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಸಂಘಟನ್ ಸೃಜನ್ ಸಭೆ | ಮುಖಂಡರು–ಕಾರ್ಯಕರ್ತರ ನಡುವೆ ವಾಗ್ವಾದ
ಜಿಲ್ಲೆಯ ಅಭಿವೃದ್ಧಿ ವಿಷಯ ಪ್ರಸ್ತಾಪಿಸಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ಟೀಕಿಸಿದರು. ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ವರದಿ ಸಿದ್ಧಪಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನಕ್ಕೆ ತರಲಾಗುವುದು ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಅಹಮದ್ ಮಾತನಾಡಿ, ಕಾರ್ಯಕರ್ತರೇ ಪಕ್ಷದ ನಿಜವಾದ ಶಕ್ತಿ ಎಂದು ಹೇಳಿ, ರಾಹುಲ್ ಗಾಂಧಿಯವರ ಮಾರ್ಗಸೂಚಿಯಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಭಿಪ್ರಾಯ ಸಂಗ್ರಹ ಸಭೆಗಳನ್ನು ನಡೆಸಲಾಗಿದೆ ಎಂದರು. ಎಲ್ಲರ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್ ಮಾತನಾಡಿ, ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಸಭೆಗಳನ್ನು ನಡೆಸಿದ ಬಳಿಕ ಚಿತ್ರದುರ್ಗದಲ್ಲಿ ಅಂತಿಮ ಸಭೆ ಆಯೋಜಿಸಲಾಗಿದೆ. ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಅಭಿಪ್ರಾಯವನ್ನು ಪರಿಗಣಿಸಿ ವರಿಷ್ಠರಿಗೆ ಸಲ್ಲಿಸಲಾಗುವುದು ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 31 | ಮೆಕ್ಕೆಜೋಳ, ತೊಗರಿ ರೇಟ್ ಎಷ್ಟಿದೆ?
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ ಪೀರ್, ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ. ಸಂಪತ್ ಕುಮಾರ್, ಡಿ.ಎನ್. ಮೈಲಾರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು. ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಕಾಶ್, ಮಾಜಿ ಶಾಸಕ ಎ.ವಿ. ಉಮಾಪತಿ ಸೇರಿದಂತೆ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

