
CHITRADURGA NEWS | 09 FEBRUARY 2024
ಚಿತ್ರದುರ್ಗ: ಮದುವೆ ಅಂದರೆ ಸಂಭ್ರಮ. ಅದರಲ್ಲೂ ಮದುವೆಯಲ್ಲಿ ಚಂದದ ಡ್ರೆಸ್ ಹಾಕಿಕೊಂಡು, ಮೇಕಪ್ ಮಾಡಿಸಿಕೊಂಡು ಪೋಟೋ, ವೀಡಿಯೋ ತೆಗೆಸುವ ಮಜವೇ ಬೇರೆ. ಇದು ಹಿಂದಿನ ಕಾಲದ ಮಜಾ.
ಆದರೆ, ಈಗ ಕಾಲ ಬದಲಾಗಿದೆ. ಮದುವೆಗೆ ಮೊದಲೇ ಪೋಟೋ ಶೂಟ್ ಈಗಿನ ಟ್ರೆಂಡ್. ಪ್ರಿ-ವೆಡ್ಡಿಂಗ್ ಶೂಟ್ ಎನ್ನುವ ಹೊಸ ಪರಿಕಲ್ಪನೆ ಈ ಕಾಲಘಟ್ಟದ ಹುಡುಗ-ಹುಡುಗಿಯರ ಕನಸೇ ಆಗಿರುತ್ತದೆ.
ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ಹಾಡು, ಕುಣಿತ, ದೋಣಿಯಲ್ಲಿ ಸಾಗುವುದು ಹೀಗೆ ನಾನಾ ರೀತಿಯ ವೀಡಿಯೋ ಶೂಟ್ ಮಾಡಿ ಎಡಿಟ್ ಮಾಡಿ ಮದುವೆಗೆ ಮೊದಲೇ ಸೋಷಿಯಲ್ ಮೀಡಿಯಾಗಳಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ.
ಇದನ್ನೂ ಓದಿ: ಕನ್ನಡಿಗರಾಗಿ ನಿಮಗೆಲ್ಲಾ ಕೋಪ ಬರುವುದಿಲ್ಲವೇ | ಸಿದ್ದರಾಮಯ್ಯ
ಪ್ರಿ-ವೆಡ್ಡಿಂಗ್ ಶೂಟ್ ಮಾಡುವ ಕಾರಣಕ್ಕಾಗಿಯೇ ಈಗ ಶೂಟಿಂಗ್ ತಾಣಗಳು ಸೃಷ್ಟಿಯಾಗುತ್ತಿವೆ. ಅಲ್ಲಿಗೆ ಇಂತಿಷ್ಟು ಶುಲ್ಕ ಪಾವತಿಸಿದರೆ ನಿಮಗೆ ಬೇಕಾದ ಹಾಗೇ ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸಬಹುದು.
ಆದರೆ, ಚಿತ್ರದುರ್ಗ ಜಿಲ್ಲೆಯ ವೈದ್ಯರೊಬ್ಬರು ಹೀಗೆ ಪ್ರಿವೆಡ್ಡಿಂಗ್ ಶೂಟ್ ಮಾಡಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.
ಇವರು ಪ್ರಿ-ವೆಡ್ಡಿಂಗ್ ಶೂಟ್ ಮಾಡಿದ ಜಾಗದ ಕಾರಣಕ್ಕೆ ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಹೌದು, ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎನ್‍ಎಚ್‍ಎಂ ಯೋಜನೆ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯ ವೃತ್ತಿಗೆ ಸೇರಿದ್ದ ಭರಮಸಾಗರದ ಡಾ.ಅಭಿಷೇಕ್ ಪ್ರಿ-ವೆಡ್ಡಿಂಗ್ ಶೂಟ್ ಕಾರಣಕ್ಕೆ ಕೆಲಸ ಕಳೆದುಕೊಂಡವರು.
ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಶಸ್ತ್ರ ಚಿಕಿತ್ಸಾ ಕೊಠಡಿ(ಒಟಿ)ಯಲ್ಲಿ ತಮ್ಮ ಭಾವಿ ಪತ್ನಿ ಜೊತೆ ಸೇರಿ ವ್ಯಕ್ತಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆ ನಡೆಸುತ್ತಿರುವಂತೆ ವೀಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗಿ, ಸುದ್ದಿಯೂ ಆಗಿದೆ.
ಇದನ್ನೂ ಓದಿ: ರೈತರ ಖಾತೆಗೆ ಬೆಳೆವಿಮೆ | 21 ದಿನ ಗಡುವು
ಈ ಸುದ್ದಿ ಸದ್ದು ಮಾಡುತ್ತಲೇ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಾ.ಅಭಿಷೇಕ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಆದೇಶ ಮಾಡಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‍ಎಚ್‍ಎಂ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಡಿ.ಆರ್.ಅಭಿಷೇಕ್ 2024 ಫೆಬ್ರವರಿ 7 ರಂದು ಭರಮಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಮದುವೆಯ ಪ್ರಿವೆಡ್ಡಿಂಗ್ ಶೂಟ್ ಮಾಡಿಸಿದ್ದರು.
ಯಾವುದೇ ಅನುಮತಿಯನ್ನೂ ಪಡೆಯದೇ ಸರ್ಕಾರಿ ಆಸ್ಪತ್ರೆಯನ್ನು ದುರುಪಯೋಗ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಪ್ರಿವೆಡ್ಡಿಂಗ್ ಶೂಟ್ ವೀಡಿಯೋ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ದೂರನ್ನಾಧರಿಸಿ ಜಿಲ್ಲಾಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಫೆ.9 ರಂದು ಸಂಜೆ ಕರ್ತವ್ಯದಿಂದ ವಜಾಗೊಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
