CHITRADURGA NEWS | 20 NOVEMBER 2026
ಚಿತ್ರದುರ್ಗ: ವಿಬಿ ರಾಮ್ ಜಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ವೈಯಕ್ತಿಕ ಕಾಮಗಾರಿಗಳ ಸ್ಥಳಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಚನ್ನಗಿರಿ, ತೀರ್ಥಹಳ್ಳಿ, ಶಿವಮೊಗ್ಗ ಸೇರಿ ರಾಜ್ಯದ ಅಡಿಕೆ ಧಾರಣೆ
ಹೊಳಲ್ಕೆರೆ ತಾಲ್ಲೂಕಿನ ಆರ್. ನೂಲೇನೂರು, ಗುಂಡೇರಿ ಹಾಗೂ ಟಿ. ನುಲೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಅವರು ವೀಕ್ಷಿಸಿದರು.
ಆರ್. ನೂಲೇನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೃಷಿ ಹೊಂಡ, ಸೋಕ್ ಪಿಟ್ ಮತ್ತು ಕೊಳವೆಬಾವಿ ಜಲ ಮರುಪೂರಣ ಘಟಕ, ಗುಂಡೇರಿಯಲ್ಲಿ ಕೃಷಿ ಹೊಂಡ ಹಾಗೂ ಟಿ. ನುಲೇನೂರಿನಲ್ಲಿ ಸೋಕ್ ಪಿಟ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರು. ಈ ವೇಳೆ ಸ್ವಸಹಾಯ ಸಂಘದ ಮಹಿಳೆಯರೊಂದಿಗೆ ಮಾತನಾಡಿದ ಅವರು, ಮನೆ ಮುಂದೆ ಅಥವಾ ಹಿಂದೆ ಬಚ್ಚಲು ಗುಂಡಿಗಳನ್ನು ನಿರ್ಮಿಸಿಕೊಂಡು ಗ್ರಾಮದ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಾಮಗಾರಿ ಸ್ಥಳದಲ್ಲೇ ಮೊಬೈಲ್ ಆ್ಯಪ್ ಮೂಲಕ ಕೂಲಿಕಾರರ ಎನ್.ಎಂ.ಎಂ.ಎಸ್ ಆನ್ಲೈನ್ ಹಾಜರಾತಿಯನ್ನು ಸಿಇಒ ಖುದ್ದು ಪರಿಶೀಲಿಸಿದರು. ಬಳಿಕ ಕೂಲಿಕಾರರ ಜಾಬ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕಗಳನ್ನು ತಪಾಸಣೆ ನಡೆಸಿ, ಕೂಲಿ ಹಣ ನಿಯಮಿತವಾಗಿ ಜಮೆಯಾಗುತ್ತಿರುವ ಬಗ್ಗೆ ವಿಚಾರಿಸಿದರು. ಸಕಾಲದಲ್ಲಿ ಕೂಲಿ ಪಾವತಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದನ್ನೂ ಓದಿ: ಜಿಲ್ಲೆಯಲ್ಲಿ 6 ಹೊಸ ಮತಗಟ್ಟೆ ಆರಂಭಕ್ಕೆ ಪ್ರಸ್ತಾವನೆ | ಜಿಲ್ಲಾಧಿಕಾರಿ ಎಸ್.ರಮ್ಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆ
ಕೂಲಿಕಾರರೊಂದಿಗೆ ಸಂವಾದ ನಡೆಸಿದ ಡಾ. ಎಸ್. ಆಕಾಶ್, ‘ಯೋಜನೆಯಡಿ ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 125 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿದೆ. ಲಿಂಗ ತಾರತಮ್ಯವಿಲ್ಲದೆ ಪುರುಷ ಮತ್ತು ಮಹಿಳೆಯರಿಗೆ ದಿನಕ್ಕೆ ರೂ.382 ಸಮಾನ ಕೂಲಿ ನೀಡಲಾಗುತ್ತಿದೆ. ಹೀಗಾಗಿ ಯಾರೂ ಕೆಲಸ ಅರಸಿ ನಗರಗಳಿಗೆ ಗುಳೆ ಹೋಗಬಾರದು ಎಂದು ಕಿವಿಮಾತು ಹೇಳಿದರು.
‘ವೈಯಕ್ತಿಕ ಕಾಮಗಾರಿಗಳ ಅಭಿಯಾನ ಆರಂಭವಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗಂಗಾಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆಬಾವಿಗಳ ಪಟ್ಟಿಯನ್ನು ಪಂಚಾಯಿತಿಗಳಿಗೆ ಕಳುಹಿಸಲಾಗಿದ್ದು, ಆ ರೈತರ ಜಮೀನುಗಳಲ್ಲಿ ಜಲ ಮರುಪೂರಣ ಘಟಕಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದೆ’ ಎಂದು ತಿಳಿಸಿದರು.
ಇ-ಸ್ವತ್ತು ವಿತರಣೆಗೆ ಕಾಲಮಿತಿ:
ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ವೇಳೆ ‘ಭೂ ಗ್ಯಾರಂಟಿ’ ಯೋಜನೆಯ ಪ್ರಗತಿ ಪರಿಶೀಲಿಸಿದ ಸಿಇಒ, ಪ್ರತಿ ಮನೆಗೆ ಭೇಟಿ ನೀಡಿ ಇ-ಸ್ವತ್ತು ಹೊಂದಿರದ ಆಸ್ತಿಗಳ ಅರ್ಜಿ ಸಂಗ್ರಹಿಸಬೇಕು. ನವೆಂಬರ್ 30ರೊಳಗೆ ಪ್ರತಿ ಗ್ರಾಮ ಪಂಚಾಯಿತಿಯಿಂದ ದಿನಕ್ಕೆ ಕನಿಷ್ಟ 10 ಇ-ಸ್ವತ್ತು ಪ್ರಮಾಣ ಪತ್ರಗಳನ್ನು ವಿತರಿಸಬೇಕು.
ಇದನ್ನೂ ಓದಿ: ಬೋರ್ ವೆಲ್ ಕೊರೆಯುವ ದರ ಇಳಿಕೆಗೆ ರೈತರ ಒತ್ತಾಯ | ಏಕಾಏಕಿ ಅಡಿಗೆ 30 ರೂ. ಹೆಚ್ಚಳ
ಇದನ್ನು ವಿಶೇಷ ಆದ್ಯತೆಯ ಅಭಿಯಾನವೆಂದು ಪರಿಗಣಿಸಿ ಗುರಿ ಸಾಧಿಸುವಂತೆ ಪಿಡಿಒ ಮತ್ತು ಸಿಬ್ಬಂದಿಗೆ ಸೂಚಿಸಿದರು. ಅಲ್ಲದೆ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ ತಕ್ಷಣವೇ ಸ್ಪಂದಿಸಿ ಬಗೆಹರಿಸುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ಗಳಿಗೆ ನಿರ್ದೇಶನ ನೀಡಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ವಿ.ಬಿ.ಗ್ರಾ ಸಹಾಯಕ ನಿರ್ದೇಶಕ ನಟರಾಜ್, ಜಿ.ಪಂ ಎಡಿಪಿಸಿ ಮೋಹನ್ ಕುಮಾರ್, ಜಿಲ್ಲಾ ಐಇಸಿ ಸಂಯೋಜಕ ರವೀಂದ್ರನಾಥ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶಿವಮೂರ್ತಿ, ತಾಲ್ಲೂಕು ತಾಂತ್ರಿಕ ಸಂಯೋಜಕ ಪ್ರತಾಪ್, ಪಿಡಿಒಗಳು, ತಾಂತ್ರಿಕ ಸಹಾಯಕರು, ಬಿಎಫ್ಟಿ ಹಾಗೂ ಕಾಯಕಮಿತ್ರರು ಹಾಜರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

