CHITRADURGA NEWS | 20 November 2026
ಚಿತ್ರದುರ್ಗ: ಜಿಲ್ಲೆಯಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬೆಳೆ ಹಾಗೂ ತೋಟಗಳನ್ನು ಉಳಿಸಿಕೊಳ್ಳಲು ರೈತರು ಸಂಕಷ್ಟ ಎದುರಿಸುತ್ತಿದ್ದು, ಈ ನಡುವೆ ಕೊಳವೆಬಾವಿ ಕೊರೆಯುವ ದರವನ್ನು ಏಕಾಏಕಿ ಪ್ರತಿ ಅಡಿಗೆ 30 ರೂ. ಹೆಚ್ಚಿಸಿರುವುದನ್ನು ಖಂಡಿಸಿ, ಕೂಡಲೇ ದರ ಇಳಿಕೆ ಮಾಡಬೇಕು ಹಾಗೂ ಬಾಕಿ ಇರುವ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೆ.ಎಸ್. ಪುಟ್ಟಣ್ಣಯ್ಯ ಬಣ) ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಆರ್ಟಿಇ ಆದಾಯ ಮಿತಿ ಹೆಚ್ಚಳದಿಂದ ಬಡ ಮಕ್ಕಳಿಗೆ ಪ್ರಯೋಜನವಿಲ್ಲ | ಬಿ.ಪಿ.ತಿಪ್ಪೇಸ್ವಾಮಿ
ಡೀಸೆಲ್ ಅಥವಾ ಕೊಳವೆಬಾವಿ ಕೊರೆಯಲು ಬಳಸುವ ಉಪಕರಣಗಳ ಬೆಲೆಯಲ್ಲಿ ಯಾವುದೇ ಗಣನೀಯ ಏರಿಕೆಯಾಗದಿದ್ದರೂ ಬೋರ್ವೆಲ್ ಮಾಲೀಕರು ಏಕಾಏಕಿ ದರ ಹೆಚ್ಚಿಸಿರುವುದು ರೈತರಿಗೆ ಆರ್ಥಿಕ ಹೊರೆಯಾಗಿದೆ. ಈಗಾಗಲೇ ಬರಗಾಲದಿಂದ ತತ್ತರಿಸಿರುವ ರೈತರಿಗೆ ಹೆಚ್ಚುವರಿ ಹೊರೆ ಹೊರಿಸುವುದು ಸರಿಯಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಬೋರ್ವೆಲ್ ಮಾಲೀಕರ ಸಭೆ ಕರೆದು, ಹಿಂದಿನ ದರದಲ್ಲಿಯೇ ಕೊಳವೆಬಾವಿ ಕೊರೆಯುವಂತೆ ಸೂಚನೆ ನೀಡಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
2026ರ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಗಾಲದಿಂದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಇದುವರೆಗೂ ಸರ್ಕಾರದಿಂದ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಹಣ ಬಿಡುಗಡೆಯಾಗಿಲ್ಲ. ರೈತರ ಸಂಕಷ್ಟವನ್ನು ಪರಿಗಣಿಸಿ ತಕ್ಷಣವೇ ಅರ್ಹ ರೈತರಿಗೆ ಬೆಳೆ ಪರಿಹಾರ ಮತ್ತು ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ನವೆಂಬರ್ 19ರಂದು ಬೀದರ್ ಜಿಲ್ಲೆಯಲ್ಲಿ ಕಬ್ಬಿನ ದರ ಹೆಚ್ಚಳಕ್ಕೆ ಒತ್ತಾಯಿಸಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಸಾವಿರಾರು ರೈತರನ್ನು ಬಂಧಿಸಿರುವ ಸರ್ಕಾರದ ಕ್ರಮವನ್ನು ಸಂಘವು ಖಂಡಿಸಿತು. ಪ್ರತಿ ಟನ್ ಕಬ್ಬಿಗೆ 4,000 ರೂ. ದರ ನಿಗದಿಪಡಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಆದ್ದರಿಂದ ಕೂಡಲೇ ಕಬ್ಬಿಗೆ ಪ್ರತಿ ಟನ್ಗೆ 4,000 ರೂ. ದರ ಘೋಷಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಇದನ್ನೂ ಓದಿ: ಕುಡಿಯುವ ನೀರಿನ ಕಾಮಗಾರಿಗಳ ನಿರ್ವಹಣೆ ಇನ್ಮುಂದೆ ಗ್ರಾಮ ಸಮಿತಿಗಳ ಕೈಗೆ!
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಧನಂಜಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ತಿಪ್ಪೇಸ್ವಾಮಿ, ಮುಖಂಡರಾದ ಆರ್. ತಿಪ್ಪೇಸ್ವಾಮಿ ಬಾಲೇನಹಳ್ಳಿ, ಕರಿಯಣ್ಣ, ಎಚ್. ಗೌಸ್ಪೀರ್, ಎನ್.ಎಸ್. ರಂಗೇಗೌಡ, ಕೆ.ಎಂ. ಕಾಂತರಾಜು, ಡಿ. ಓಂಕಾರಪ್ಪ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

