CHITRADURGA NEWS | 17 October 2026
ಸಾಣೇಹಳ್ಳಿ: ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಪ್ರತಿವರ್ಷ ನೀಡುವ ಪ್ರತಿಷ್ಠಿತ 2026ನೇ ಸಾಲಿನ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ ರಬಕವಿ ಬನಹಟ್ಟಿಯ ಬಹುಮುಖ ಪ್ರತಿಭೆ ಪ್ರೊ. ಬಿ.ಆರ್. ಪೋಲೀಸ್ ಪಾಟೀಲ ಅವರು ಆಯ್ಕೆಯಾಗಿದ್ದಾರೆ ಎಂದು ಶ್ರೀ ಶಿವಕುಮಾರ ಕಲಾಸಂಘದ ಅಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರಿಂದ ಅರ್ಜಿ ಆಹ್ವಾನ
ರಂಗಭೂಮಿ ಮತ್ತು ರಂಗಚಟುವಟಿಕೆಗಳಲ್ಲಿ ಮಹತ್ವದ ಸಾಧನೆ ಮಾಡಿದವರನ್ನು ಲಿಂಗಭೇದವಿಲ್ಲದೆ ಗೌರವಿಸುವ ಉದ್ದೇಶದಿಂದ 2004ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಹಿಂದೆ ಪ್ರಸನ್ನ, ಸಿಜಿಕೆ, ಪಿ.ಜಿ. ಗಂಗಾಧರಸ್ವಾಮಿ, ಅಶೋಕ ಬಾದರದಿನ್ನಿ, ಮಾಲತಿಶ್ರೀ, ಸಿ. ಬಸವಲಿಂಗಯ್ಯ, ಬಿ. ಜಯಶ್ರೀ, ಡಾ. ಕೆ. ಮರುಳಸಿದ್ಧಪ್ಪ, ಚಿದಂಬರರಾವ್ ಜಂಬೆ, ಕೋಟಗಾನಹಳ್ಳಿ ರಾಮಯ್ಯ, ಡಾ. ಸುಭದ್ರಮ್ಮ ಮನ್ಸೂರು, ಲಕ್ಷ್ಮೀ ಚಂದ್ರಶೇಖರ್, ಶ್ರೀನಿವಾಸ ಜಿ. ಕಪ್ಪಣ್ಣ, ಬಸವರಾಜ ಬೆಂಗೇರಿ, ಟಿ.ಎಸ್. ನಾಗಾಭರಣ, ಕೆ.ವಿ. ನಾಗರಾಜಮೂರ್ತಿ, ಡಾ. ಎಂ.ಜಿ. ಈಶ್ವರಪ್ಪ, ಶಶಿಧರ ಅಡಪ, ಮಹಾಂತೇಶ್ ಗಜೇಂದ್ರಗಡ ಹಾಗೂ ಉಮಾಶ್ರೀ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರೊ. ಬಿ.ಆರ್. ಪೋಲೀಸ್ ಪಾಟೀಲ ಅವರು ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ವಚನಕಾರ, ನಟ, ನಿರ್ದೇಶಕ, ಗಾಯಕ, ಸಂಶೋಧಕ, ವಿಮರ್ಶಕ ಹಾಗೂ ಸಂಘಟಕರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಓರೂರಿನಲ್ಲಿ 1950ರ ಜೂನ್ 1ರಂದು ಜನಿಸಿದ ಅವರು, ಇಂಗ್ಲಿಷ್ ವಿಷಯದಲ್ಲಿ ಎಂ.ಎ. ಪದವಿ ಪಡೆದು ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ನೂರಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ ನಿರ್ದೇಶಿಸಿರುವ ಅವರು, 65 ನಾಟಕಗಳನ್ನು ಆಕಾಶವಾಣಿಯಲ್ಲಿ ಪ್ರಸಾರವಾಗುವಂತೆ ಮಾಡಿದ್ದಾರೆ. ಎಂಟು ಕವನ ಸಂಕಲನಗಳು, ಏಳು ಕಥಾಸಂಕಲನಗಳು, ನಾಲ್ಕು ಕಾದಂಬರಿಗಳು, ಏಳು ಜೀವನಚರಿತ್ರೆಗಳು, 18 ಸಂಪಾದನಾ ಕೃತಿಗಳು, ಒಂದು ವಚನ ಸಂಕಲನ ಹಾಗೂ ಏಳು ಅನುವಾದ ಕೃತಿಗಳು ಸೇರಿದಂತೆ 120ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಮತ್ತು ವಿವಿಧ ಕ್ಷೇತ್ರಗಳ ಸಾಧನೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ 50ಕ್ಕೂ ಹೆಚ್ಚು ಪ್ರಶಸ್ತಿಗಳು ಸಂದಿವೆ.
ಇದನ್ನೂ ಓದಿ: ನರ್ಸಿಂಗ್ ವೃತ್ತಿ ಸಮಾಜ ಸೇವೆಯ ಪ್ರತೀಕ | ಜಿಲ್ಲಾಧಿಕಾರಿ ಎಸ್.ರಮ್ಯಾ
ಪ್ರಶಸ್ತಿ ಆಯ್ಕೆ ಸಮಿತಿಯ ಮುಂದೆ ಹಲವು ಪ್ರತಿಭಾವಂತ ರಂಗಕರ್ಮಿಗಳ ಹೆಸರುಗಳಿದ್ದವು. ಅಂತಿಮವಾಗಿ ರಂಗಭೂಮಿ, ಶಿಕ್ಷಣ, ಜನಪದ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಇಂದಿಗೂ ಕ್ರಿಯಾಶೀಲರಾಗಿರುವ ಬಿ.ಆರ್. ಪೋಲೀಸ್ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ. ಬಹುಮುಖ ಪ್ರತಿಭೆಯುಳ್ಳ ಅವರು ಈ ಪ್ರಶಸ್ತಿಗೆ ಭಾಜನರಾಗಿರುವುದು ಸಂತಸ ತಂದಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿನಂದಿಸಿದ್ದಾರೆ.
ಪ್ರಶಸ್ತಿಯು ₹50,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸಾಣೇಹಳ್ಳಿಯಲ್ಲಿ ನವೆಂಬರ್ 1ರಿಂದ 6ರವರೆಗೆ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

