CHITRADURGA NEWS | 15 AUGUST 2026
ಚಿತ್ರದುರ್ಗ: ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಾರಂಭಿಸಿರುವ ‘ಪ್ರಜಾಸೇವಾ’ ಯೋಜನೆಯು ಅತ್ಯಂತ ಮಹತ್ವಾಕಾಂಕ್ಷೆಯದ್ದಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ತಿಳಿಸಿದರು.
ಇದನ್ನೂ ಓದಿ: ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಪಂಚಾಯತ್ ವತಿಯಿಂದ ಪ್ರಾರಂಭಿಸಿರುವ ‘ಪ್ರಜಾ ಸೇವಾ ಶಾಖೆ’ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಅತ್ಯಂತ ಪರಿಣಾಮಕಾರಿ ಹಾಗೂ ವೇಗವಾಗಿ ತಲುಪಿಸಲು ಈ ವ್ಯವಸ್ಥೆ ರೂಪಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಜನರಿಗೆ ಶೀಘ್ರ ಪರಿಹಾರ ಸಿಗುವಂತಾಗಬೇಕು ಎಂದು ಹೇಳಿದರು.
ಈ ಹಿಂದೆ ಇದ್ದ ‘ಗ್ರಾಮಫೋನ್’ ಮಾದರಿಯ ವ್ಯವಸ್ಥೆಯನ್ನು ಈಗ ಇನ್ನಷ್ಟು ಪರಿಣಾಮಕಾರಿಯಾಗಿ ಮಾರ್ಪಡಿಸಿ ‘ಪ್ರಜಾ ಸೇವಾ’ ಹೆಸರಿನಲ್ಲಿ ಜಾರಿಗೆ ತರಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ, ತಾಲೂಕು ಮಟ್ಟದ ಕಚೇರಿಗಳು ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ಸಾರ್ವಜನಿಕ ಸೇವೆಯ ಪ್ರತಿಯೊಂದು ಇಲಾಖೆಯಲ್ಲೂ ಈ ಪ್ರಜಾ ಸೇವಾ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: ಎಸ್.ಜೆ.ಎಂ. ಕ್ಯಾಂಪಸ್ನಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯ ದಿನಾಚರಣೆ
ಪ್ರಜಾಸೇವಾ ಶಾಖೆಯು ಕೇವಲ ಅರ್ಜಿಗಳನ್ನು ಪಡೆದುಕೊಂಡು ಫೈಲ್ ಮಾಡಲು ಅಥವಾ ಆನ್ಲೈನ್ನಲ್ಲಿ ನಮೂದಿಸಿ ಸುಮ್ಮನಿರಲು ಸೀಮಿತವಾಗಿಲ್ಲ. ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಕುಂದುಕೊರತೆ ಮತ್ತು ಸಮಸ್ಯೆಗೂ ಪೂರ್ಣ ಪ್ರಮಾಣದ ಪರಿಹಾರ ಸಿಗಲೇಬೇಕು. ಸಾರ್ವಜನಿಕರ ಅರ್ಜಿಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ನಿಗದಿತ ಕಾಲಮಿತಿಯಲ್ಲಿ ಪರಿಹರಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ನೇರವಾಗಿ ಜನರಿಗೆ ಸೇವೆಗಳನ್ನು ತಲುಪಿಸುವ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳು ಪಂಚಾಯತ್ ರಾಜ್ ವ್ಯವಸ್ಥೆಯ ತಳಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಜಾ ಸೇವಾ ಶಾಖೆಯ ಮೂಲಕ ಸೇವೆಗಳನ್ನು ಸುಗಮವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಫೋನ್ ಗ್ರಾಮೀಣ ಉಚಿತ ಸಹಾಯವಾಣಿಯನ್ನು ಬಳಸಿಕೊಳ್ಳಲಾಗುವುದು.
ಈ ಉಚಿತ ಸಹಾಯವಾಣಿ ಸಂಖ್ಯೆ 1800-425-1978 ಆಗಿದೆ. ಕಳೆದ ಸಾಲಿನ ನವೆಂಬರ್ನಿಂದ ಕಾರ್ಯಾರಂಭಿಸಿದ್ದು, ಕೆಲವೇ ತಿಂಗಳುಗಳಲ್ಲಿ ಜಿಲ್ಲೆಯ ಗ್ರಾಮೀಣ ಜನತೆ ಈ ಉಚಿತ ಸಹಾಯವಾಣಿ ಮೂಲಕ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಒಟ್ಟು 2747 ಕರೆಗಳ ಮೂಲಕ ದಾಖಲಿಸಿರುತ್ತಾರೆ ಎಂದು ಮಾಹಿತಿ ನೀಡಿದರು.
ಪ್ರಜಾಸೇವಾ ಶಾಖೆಯ ಉಚಿತ ಸಹಾಯವಾಣಿ ಗ್ರಾಮಫೋನ್ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಕೆಲವು ಆಡಳಿತಾತ್ಮಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಒಬ್ಬ ನೋಡಲ್ ಅಧಿಕಾರಿ ಈ ಕರೆಗಳ ಮೂಲಕ ದಾಖಲಿಸಲಾದ ವಿಷಯಗಳ ಕುರಿತು ಅನುಪಾಲನೆ ಕ್ರಮಕೈಗೊಳ್ಳಲಿದ್ದಾರೆ. ಈ ದೂರುಗಳನ್ನು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಾಗಿನ್ಗೆ ನೋಡಲ್ ಅಧಿಕಾರಿ ರವಾನಿಸಲಿದ್ದಾರೆ ಎಂದರು.
ಇದನ್ನೂ ಓದಿ: ತುರವನೂರಿನಲ್ಲಿ ಸ್ವಾತಂತ್ರ್ಯ ಇತಿಹಾಸ ಬಿಂಬಿಸುವ ಉದ್ಯಾನವ ನಿರ್ಮಾಣ | ಟಿ.ರಘುಮೂರ್ತಿ
ಗ್ರಾಮೀಣ ಭಾಗದಲ್ಲಿ ಉದ್ಭವವಾಗುವ ಕುಂದು ಕೊರತೆಗಳನ್ನು ಒಳಗೊಂಡಂತೆ ಇನ್ನ್ಯಾವುದೇ ಅಹವಾಲುಗಳನ್ನು ಈ ಪ್ರಜಾ ಸೇವಾ ಶಾಖೆಯ ಉಚಿತ ಸಹಾಯವಾಣಿಯ ಸೇವೆಯನ್ನು ಸದ್ಭಳಕೆ ಮಾಡಿಕೊಂಡು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

