CHITRADURGA NEWS | 01 MARCH 2026
ಚಿತ್ರದುರ್ಗ: ರೇಣುಕಾಚಾರ್ಯರು ಧರ್ಮಾಚರಣೆಗಾಗಿ ಸಾರಿದ ದಶಸೂತ್ರಗಳು ಇಡೀ ವಿಶ್ವದ ಶಾಂತಿ ಮತ್ತು ನೆಮ್ಮದಿಗೆ ದಾರಿದೀಪವಾಗಿವೆ ಎಂದು ಉಪವಿಭಾಗಾಧಿಕಾರಿ ಕಾಂತರಾಜ್ ಹೇಳಿದರು.
ಇದನ್ನೂ ಓದಿ: ಇಂದಿನ ವೇಗದ ಬದುಕಿನಲ್ಲಿ ವ್ಯಾಯಾಮ, ಓಟ, ನಡಿಗೆ ಮತ್ತು ಯೋಗ ಚಟುವಟಿಕೆಗಳು ಅತ್ಯಗತ್ಯ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯ ಜಯಂತಿಯಲ್ಲಿ ಮಾತನಾಡಿದರು.
ರೇಣುಕಾಚಾರ್ಯರು ಧರ್ಮಾಚರಣೆಗಾಗಿ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯೆ, ದಯೆ, ಕ್ಷಮೆ, ದಾನ, ಶಿವಪೂಜೆ, ಪಂಚಾಕ್ಷರಿ ಮಂತ್ರ ಜಪದಂತಹ ಹತ್ತು ಸೂತ್ರಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುತ್ತವೆ. ಇವುಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಮನುಷ್ಯರಲ್ಲಿ ನಮಗೆ ಒಳ್ಳೆಯದು ಮಾಡಿದವರಿಗೆ ಒಳ್ಳೆಯದನ್ನು ಮಾಡುವುದು ಸಹಜ ಗುಣ. ಇದು ಮಾನವನ ಲಕ್ಷಣ. ಆದರೆ, ಯಾರೂ ಏನೂ ಮಾಡದಿದ್ದರೂ ಲೋಕಕ್ಕೆ ಹಿತವನ್ನೇ ಬಯಸುವವನು ಮಹಾಮಾನವ ಎನಿಸಿಕೊಳ್ಳುತ್ತಾನೆ. ಇವೆಲ್ಲಕ್ಕಿಂತ ಮಿಗಿಲಾಗಿ ತನಗೆ ಕೆಟ್ಟದನ್ನು ಮಾಡಿದವರಿಗೂ ಮರಳಿ ಒಳಿತನ್ನೇ ಮಾಡುವವನು ದೇವ ಮಾನವ ಎಂದು ಬೋಧಿಸಿದ್ದಾರೆ.
ಇದನ್ನೂ ಓದಿ: ಇರಾನ್ – ಇಸ್ರೇಲ್ ಯುದ್ಧ | ಸಿಲುಕಿರುವ ಚಿತ್ರದುರ್ಗ ಜಿಲ್ಲೆಯವರ ನೆರವಿಗೆ ಸಹಾಯವಾಣಿ
ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಂದೇಶ ನೀಡಿದ ಅವರು, ಧರ್ಮದಿಂದ ವಿಶ್ವಕ್ಕೆ ಶಾಂತಿ. ಧರ್ಮವು ಜನರ ಕಲ್ಯಾಣಕ್ಕಾಗಿ ಇರಬೇಕು. ಪ್ರಪಂಚದಲ್ಲಿ ಶಾಂತಿ ನೆಲೆಸಲು ಧರ್ಮದಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ ಎಂದರು.
ಜಿಲ್ಲಾ ಗ್ಯಾರೆಂಟ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಮಹಾಪುರುಷರು ತೋರಿದ ಸಮಾನತೆಯ ಹಾದಿ ಇಂದಿನ ಸಮಾಜಕ್ಕೆ ಅವಶ್ಯಕವಾಗಿದ್ದು, ದಾರ್ಶನಿಕರ ತತ್ವಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ರೇಣುಕಾಚಾರ್ಯ ಸೇರಿದಂತೆ ಅನೇಕ ದಾರ್ಶನಿಕರು ಅಂದಿನ ಕಾಲದ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ವಿಶೇಷ ಚೇತನರಿಗೆ ತ್ರಿ-ಚಕ್ರ ವಾಹನಗಳ ವಿತರಣೆ
ಶ್ರೀ ರೇಣುಕಾಚಾರ್ಯರ ಕುರಿತು ಉಪನ್ಯಾಸ ನೀಡಿದ ಸಾಹಿತಿ ನಿರಂಜನ ದೇವರ ಮನೆ, ಶ್ರೀ ರೇಣುಕಾಚಾರ್ಯರು ಶಿವಾದ್ವೈತ ಸಿದ್ದಾಂತ ಪ್ರತಿಪಾದಿಸುವ ಮುಖೇನ ಈ ಜಗತ್ತಿಗೆ ಮಾನವ ಧರ್ಮ ಮತ್ತು ವಿಶ್ವಶಾಂತಿಯ ಸಂದೇಶ ಸಾರಿದ ಶ್ರೇಷ್ಠ ಆಚಾರ್ಯರು. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹಿಷ್ಣುತೆ, ಸಾಮರಸ್ಯ ಹಾಗೂ ಸಹಬಾಳ್ವೆಯಂತಹ ಉದಾತ್ತ ಮೌಲ್ಯ, ಚಿಂತನೆಗಳನ್ನು ಬೋಧಿಸಿದ ಯುಗಪುರುಷರು ಎಂದು ಹೇಳಿದರು.
ಚಿಂತನೆ-ಅರಿವು-ಅನುಭಾವದ ಮೂಲಕ ವ್ಯಕ್ತಿಯ ವಿಕಾಸ ಮತ್ತು ಸಮಾಜಾಭಿವೃದ್ಧಿಯನ್ನು ಬಯಸಿದವರು. ಧರ್ಮ ಮತ್ತು ಸಂಸ್ಕøತಿಯನ್ನು ಕೇವಲ ಲೌಕಿಕ ಬದುಕಿನ ಸಮೃದ್ಧಿಯ ಮನೋಭಾವಗಳಿಗೆ ಬಳಸಿಕೊಳ್ಳದೇ ಮನುಷ್ಯನ ಆಧ್ಯಾತ್ಮಿಕ ವಿಕಾಸಕ್ಕೆ ಮಹತ್ವದ ಶಕ್ತಿಯನ್ನಾಗಿ ರೂಪಿಸಿದರು. ಮನುಷ್ಯನ ಪ್ರಜ್ಞೆಯನ್ನು ಬೆಳೆಸಿಕೊಂಡು ಮಾನವೀಯ ನೆಲೆಯಲ್ಲಿ ಸಂಘಟನೆಯಾಗಿ ಎಲ್ಲರೂ ಪರಿಪೂರ್ಣತೆ ಸಾಧಿಸಿ ಜೀವನ್ಮುಕ್ತಿ ಪಡೆಯುವಂತೆ ತಿಳಿಸಿದವರು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಜಯಂತಿಯು ಕೇವಲ ವೇದಿಕೆಯ ಭಾಷಣಗಳಿಗೆ ಸೀಮಿತವಾಗಬಾರದು. ಅವರ ವಿಶ್ವ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಉದಾತ್ತ ಸಂದೇಶ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಉತ್ತರಾಖಂಡ್ ಡಯಟ್ ತಂಡದಿಂದ ಕಾವಾಡಿಗರಹಟ್ಟಿ ಪಿ.ಎಂ.ಶ್ರೀ ಶಾಲೆಗೆ ಭೇಟಿ
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಎಂ.ಪಿ.ಮಲ್ಲಿಕಾರ್ಜುನಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಕಾರ್ಯದರ್ಶಿ ಶಶಿಧರ್ ಬಾಬು, ಖಚಾಂಚಿ ರುದ್ರಪ್ಪ ಜಾಲಿಕಟ್ಟೆ, ಯುವಘಟಕದ ಅಧ್ಯಕ್ಷ ದಿನೇಶ್ ಮೈಲಹಳ್ಳಿ, ಪಂಚಚಾರ್ಯ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಷಡಾಕ್ಷರಯ್ಯ, ಪ್ರವೀಣ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಚಿತ್ರದುರ್ಗ ತಾಲ್ಲೂಕು ಆಯಿತೋಳು ವಿರೂಪಾಕ್ಷಪ್ಪ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

