CHITRADURGA NEWS | 24 JUNE 2025
ಚಿತ್ರದುರ್ಗ: ದಾಖಲೆಗಳಲ್ಲಿ ನೆಲಸಮವಾಗಿರುವ ಕಟ್ಟಡವನ್ನು ಹರಾಜು ಮಾಡಿದ್ದೇಗೆ, ನೆಲಸಮ ಆಗಿದ್ದರೆ ಖಾಲಿ ಜಾಗ ತೋರಿಸಿ, ಇಲ್ಲದಿದ್ದರೆ ನೆಲಸಮ ಮಾಡಲು ಬಿಡುಗಡೆಯಾದ ಹಣ ಏನಾಯ್ತು..
Also Read: ಅಡಿಕೆ ಧಾರಣೆ | ಜೂನ್ 23 | ಯಾವ ಅಡಿಕೆಗೆ ಎಷ್ಟು ರೇಟ್
ಇಂಥದ್ದೊಂದು ಸ್ವಾರಸ್ಯಕರ ಚರ್ಚೆಗೆ ಸೋಮವಾರ ನಡೆದ ಚಿತ್ರದುರ್ಗ ನಗರಸಭೆಯ ಸಾಮಾನ್ಯ ಸಭೆ ಸಾಕ್ಷಿಯಾಯಿತು.
ನಗರದ ಗಾಂಧಿ ವೃತ್ತದ ಬಳಿಯಿರುವ ದೀಪಾ ಹೋಟೆಲ್ ಸೇರಿದಂತೆ 10 ಮಳಿಗೆಗಳನ್ನು 2022 ರಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ನೆಲಸಮ ಮಾಡಲಾಗಿದೆ ಎನ್ನುವ ದಾಖಲೆಗಳಿವೆ. ಆದರೆ, ಈಗ ನಡೆದಿರುವ ಹರಾಜು ಪ್ರಕ್ರಿಯೆಯಲ್ಲಿ ಅಲ್ಲಿನ ೮ ಮಳಿಗೆಗಳ ಹರಾಜು ನಡೆದಿದೆ. ಹಾಗಿದ್ದರೆ ನೆಲಸಮ ಮಾಡಿರುವ ಖಾಲಿ ಜಾಗ ತೋರಿಸಿ ಎಂದು ಸದಸ್ಯ ಗೊಪ್ಪೆ ಮಂಜುನಾಥ್ ಪಟ್ಟು ಹಿಡಿದರು.
75 ವರ್ಷ ಹಳೆಯದಾಗಿರುವ ಕಟ್ಟಡ ಎಂದು ಲೋಕೋಪಯೋಗಿ ಇಲಾಖೆಯಿಂದ ವರದಿ ಬಂದಿದ್ದು, ಅದರಂತೆ, ಅಂದಿನ ಕೌನ್ಸಿಲ್ ನೆಲಸಮ ಮಾಡಲು ಗುತ್ತಿಗೆದಾರರಿಗೆ 8 ಲಕ್ಷ ರೂ. ಜಮೆ ಮಾಡಿದೆ. ಅಲ್ಲಿದ್ದ ಡೆಬ್ರಿಸ್ ಖಾಲಿ ಮಾಡಲು ಮತ್ತೆ 2 ಲಕ್ಷ ರೂ. ಬಿಡುಗಡೆಯಾಗಿದೆ. ಖಾಲಿಯಿರುವ ಜಾಗದಲ್ಲಿ ಯಾವ ಕಟ್ಟಡ ನೆಲಸಮ ಮಾಡಿದಿರಿ ಎಂದಾಗ ಎಲ್ಲ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು.
ಪ್ರತಿಕ್ರಿಯಿಸಿದ ಪೌರಾಯುಕ್ತೆ ರೇಣುಕಾ, ನಾನು ಬಂದು ಎರಡು ವರ್ಷವಾಯ್ತು. ಅಲ್ಲಿ ಕಟ್ಟಡ ಇದ್ದ ಕಾರಣಕ್ಕೆ ಹರಾಜು ಮಾಡಲಾಗಿದೆ. ನೀವು ಹೇಳುವ ವಿಚಾರವನ್ನು ಪರಿಶೀಲಿಸುತ್ತೇವೆ ಎಂದರು.
Also Read: ಮಳೆಯ ವರದಿ | ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ | ಈ ಸುದ್ದಿ ಓದಿ….
ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ ಮಾತನಾಡಿ, ಇದು ನಗರಸಭೆ ಮತ್ತು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ಪ್ರಕರಣ. ಮೊದಲು ಹರಾಜು ರದ್ದು ಮಾಡಿ, ಮಳಿಗೆಗಳನ್ನು ನಗರಸಭೆ ವಶಕ್ಕೆ ತೆಗೆದುಕೊಳ್ಳಿ. ಜೊತೆಗೆ ನಷ್ಟ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ತಿಳಿಸಿದರು.
ಹಿರಿಯ ಸದಸ್ಯ ಸರ್ದಾರ್ ಅಹಮ್ಮದ್ ಪಾಷಾ ಮಾತನಾಡಿ, ಇದೇ ಪ್ರಕರಣದಲ್ಲಿ ಹಿಂದಿನ ಇಂಜಿನಿಯರ್ ಕಿರಣ್ ಅಮಾನತು ಆಗಿದ್ದಾರೆ. ಅಲ್ಲಿ ಬಾರ್ ತೆರೆಯಲು ಯಾರು ಅನುಮತಿ ನೀಡಿದರು. ಮೊದಲು ಬಂದ್ ಮಾಡಿಸಿ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಇದ್ದರು.
ನೌಕರರ ಬಗ್ಗೆ ಹಗುರವಾಗಿ ಮಾತನಾಡಬೇಡಿ:
೨೫ನೇ ವಾರ್ಡ್ನ ಚರಂಡಿ ಮತ್ತು ರಸ್ತೆ ಕಾಮಗಾರಿಗೆ ಸಂಬಂದಿಸಿದಂತೆ ಅಸಮಧಾನ ವ್ಯಕ್ತಪಡಿಸಿದ ಸದಸ್ಯ ಮೊಹಮ್ಮದ್ ಜೈಲುದ್ದೀನ್, ಇಂಜಿನಿಯರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
Also Read: ಚಿತ್ರದುರ್ಗದ ಮುಖ್ಯ ರಸ್ತೆಗೆ ನರೇಂದ್ರ ಮೋದಿ ಹೆಸರು ನಾಮಕರಣ
ಈ ವೇಳೆ ಮಾನ ಮರ್ಯಾದೆ ಇದೆಯೇ ಎಂಬ ಮಾತು ಬಂದಾಗ ನಗರಸಭೆ ವ್ಯವಸ್ಥಾಪಕಿ ರೇಣುಕಾ ಮಧ್ಯ ಪ್ರವೇಶಿಸಿ, ಸದಸ್ಯರು ನೌಕರರು, ಸಿಬ್ಬಂದಿ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನಮ್ಮನ್ನು ನೇರವಾಗಿ ಕೇಳುವಂತಿಲ್ಲ. ನೀವು ಅಧ್ಯಕ್ಷರ ಜೊತೆಗೆ ಮಾತನಾಡಿ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಇತರೆ ಸದಸ್ಯರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಅಭಿವೃದ್ಧಿ ಇಲ್ಲ, ಧಕ್ಷತೆ ಇಲ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ಅಸಮಧಾನ:
ಸಭೆಯ ಆರಂಭದಲ್ಲಿ ಕ್ಷುಲ್ಲಕ ವಿಚಾರಗಳೇ ಸಭೆಯಲ್ಲಿ ಜೋರಾಗಿ ಚರ್ಚೆಯಾಗುತ್ತಿದ್ದವು. ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ ಸದಸ್ಯರ ನಡುವೆಯೇ ಕುಳಿತು ಮಾತನಾಡಿದಾಗ ಶ್ರೀನಿವಾಸ್ ಆಕ್ಷೇಪ ವ್ಯಕ್ತಪಡಿಸಿ ನೀವು ಇಲ್ಲಿ ಯಾಕೆ ಕುಳಿತಿದ್ದೀರಿ, ಬೋರ್ಡ್ ಎಲ್ಲಿ ಎಂದು ಪ್ರಶ್ನಿಸಿದರು.
ಈ ವೇಳೆ ಗಂಭೀರವಾಗಿ ಪ್ರತಿಕ್ರಿಯಿಸಿದ ನಸ್ರುಲ್ಲಾ, ನಗರದ ಅಭಿವೃದ್ಧಿ ಆಗುತ್ತಿಲ್ಲ, ಧಕ್ಷತೆ ಇಲ್ಲ, ಜನರ ಸಮಸ್ಯೆ ಆಲಿಸುವವರೇ ಇಲ್ಲವಾಗಿದ್ದಾರೆ. ಪಕ್ಕದ ಚಳ್ಳಕೆರೆ, ಹಿರಿಯೂರು ನಗರಸಭೆಗಳಲ್ಲಿ ಎಷ್ಟು ಕೆಲಸ ಮಾಡುತ್ತಿದ್ದಾರೆ ನೋಡಿ. ನಮಗೆ ಏಳುವರೆ ವರ್ಷ ಸಮಯ ಸಿಕ್ಕಿದರೂ ಏನೂ ಮಾಡಲು ಆಗಲಿಲ್ಲ. ಹಿಂದೆ 400 ಕೋಟಿ ರೂ. ಅನುದಾನ ಬಂದಾಗ ರಸ್ತೆ ವಿಸ್ತರಣೆ ಬಗ್ಗೆ ಮಾತನಾಡಲಿಲ್ಲ. ಈಗ ಅನುದಾನ ಇಲ್ಲ ರಸ್ತೆ ವಿಸ್ತರಣೆ ಬಗ್ಗೆ ಮಾತನಾಡುತ್ತೇವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ:
ನಗರಸಭೆಯಲ್ಲಿ ನೌಕರಿಯಲ್ಲಿದ್ದ ವ್ಯಕ್ತಿಯೊಬ್ಬರು ನಿವೃತ್ತರಾದ ನಂತರ ನಕಲಿ ದಾಖಲೆ ಸೃಷ್ಟಿಸಿ ನಿವೇಶನವೊಂದನ್ನು ನಿವೃತ್ತ ಶಿಕ್ಷಕಿಗೆ 50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಆದರೆ, ಎಲ್ಲ ದಾಖಲೆಗಳು ಬೋಗಸ್. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಶ್ರೀನಿವಾಸ್ ತಿಳಿಸಿದರು.
Also Read: ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಿದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ಆಯುಕ್ತೆ ಎಂ.ರೇಣುಕಾ ಮಾತನಾಡಿ, ಸಾರ್ವಜನಿಕರು ನಿವೇಶನ ಖರೀಧಿಸುವಾಗ ಇ-ಸ್ವತ್ತಿನ ಜೊತೆಗೆ ಅದರ ಹಿಂದಿನ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ಎಂದು ಮನವಿ ಮಾಡಿದರು.
ವೃತ್ತ, ರಸ್ತೆಗಳಿಗೆ ನಾಮಕರಣ:
ನಗರದ ಬಿ.ಡಿ.ರಸ್ತೆಗೆ ‘ಪ್ರಧಾನಿ ನರೇಂದ್ರ ಮೋದಿ’ ಹೆಸರು ನಾಮಕರಣ ಮಾಡಲು ಸಭೆ ಅನುಮೋದನೆ ನೀಡಿತು. ಜಿಲ್ಲಾಧಿಕಾರಿ ನಿವಾಸದ ಮುಂದಿನ ವೃತ್ತಕ್ಕೆ ‘ಸರ್.ಎಂ.ವಿಶ್ವೇಶ್ವರಯ್ಯ’, ಬಸವ ಮಂಟಪ ಸಮೀಪದ ಸೋಮಣ್ಣನ ಮನೆಯ ವೃತ್ತಕ್ಕೆ ‘ಶ್ರೀ ಮಹರ್ಷಿ ಸವಿತ ವೃತ್ತ’, ಅಪ್ಪಾಜಿ ಪರಿಸರ ಬಿಲ್ಡಿಂಗ್ ಪಕ್ಕದಲ್ಲಿ ಡಿಎಸ್ಎಸ್ ಸಂಸ್ಥಾಪಕ ‘ಪ್ರೊ.ಬಿ.ಕೃಷ್ಣಪ್ಪ ಮಹಾದ್ವಾರ’, ದೊರೆಸ್ವಾಮಿ ಲೇಔಟ್ನಲ್ಲಿ ಹೋರಾಟಗಾರ ‘ಎಂ.ಜಯ್ಯಣ್ಣ ವೃತ್ತ,’ 11ನೇ ವಾರ್ಡ್ನ ಕೋಹಿನೂರು ಆಟೋ ಸ್ಟಾಂಡ್ ಪಕ್ಕದ 9 ರಸ್ತೆಗಳಿಗೆ ‘ಕೋಹಿನೂರು ಮೊಹಲ್ಲಾ’, 1 ರಿಂದ 3ನೇ ಅಡ್ಡ ರಸ್ತೆಗಳಿಎ ಅಬ್ದುಲ್ಲಾ ನಗರ, ಹಿಮ್ಮತ್ ನಗರದ ಮಸೀದಿ ರಸ್ತೆಗೆ ‘ಅಂಜುಂ ಮಸೀದಿ ರಸ್ತೆ’, 24ನೇ ವಾರ್ಡ್ನ ಆಜಾದ್ ನಗರಕ್ಕೆ ‘ಸ್ವಾಗತ ಕಮಾನು’, ಏಕನಾಥೇಶ್ವರಿ ಪಾದಗುಡಿ ಮುಂಭಾಗದ ವೃತ್ತಕ್ಕೆ ʼಹಗಲು ಕಗ್ಗೊಲೆ ಮಾನ್ಯ ರಾಜಾ ಮತ್ತಿ ತಿಮ್ಮಣ್ಣ ನಾಯಕರ ವೃತ್ತʼ, ರಾಷ್ಟ್ರೀಯ ಹೆದ್ದಾರಿ 4 ರ ಟ್ರಕ್ ಟರ್ಮಿನಲ್ ಬಳಿಯ ವೃತ್ತಕ್ಕೆ ʼಶ್ರೀ ಮಡಿವಾಳ ಮಾಚಿದೇವ ವೃತ್ತʼ, 31ನೇ ವಾರ್ಡ್ನ ಮುಖ್ಯ ರಸ್ತೆಗೆ ʼಬಿಚ್ಚುಗತ್ತಿ ಭರಮಣ್ಣ ನಾಯಕ ವೃತ್ತʼ ಎಂದು ನಾಕರಣ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

