CHITRADURGA NEWS | 28 NOVEMBER 2026
ಚಿತ್ರದುರ್ಗ: ಅನ್ನದಾನ, ವಿದ್ಯಾದಾನ ಸೇರಿದಂತೆ ಹಲವು ದಾನಗಳಿಗೆ ತನ್ನದೇ ಆದ ಮಹತ್ವವಿದೆ. ಆದರೆ, ರಕ್ತದಾನಕ್ಕೆ ವಿಶೇಷ ಸ್ಥಾನವಿದ್ದು, ಇದರಿಂದ ಆತ್ಮಸಂತೋಷ ಹೆಚ್ಚುತ್ತದೆ ಎಂದು ಜಿಲ್ಲಾ ರಕ್ತ ಸುರಕ್ಷತಾ ಅಧಿಕಾರಿ ಡಾ. ತುಳಸಿ ರಂಗನಾಥ್ ಹೇಳಿದರು.
ಇದನ್ನೂ ಓದಿ: ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ | ಗೋವಿಂದ ಕಾರಜೋಳ ವಾಗ್ದಾಳಿ
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿತ್ರದುರ್ಗ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ (ಸಿಎಂಸಿಆರ್‍ಐ), ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ, ತಾಲ್ಲೂಕು ಆಡಳಿತ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ರಕ್ತಹೀನತೆಯಿಂದ ಬಳಲುವ ಗರ್ಭಿಣಿಯರು, ಹೆರಿಗೆ ಹಾಗೂ ಅಪಘಾತದ ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯ ಹೆಚ್ಚಿರುತ್ತದೆ. ನಾವು ನೀಡುವ ರಕ್ತ ಇನ್ನೊಬ್ಬರ ಜೀವ ಉಳಿಸುತ್ತದೆ ಎಂದರು.
ಜಿಲ್ಲೆಯ ಆರು ತಾಲ್ಲೂಕುಗಳು ಸೇರಿದಂತೆ ಏಳು ಕಡೆಗಳಲ್ಲಿ ಒಂದೇ ದಿನ ಒಟ್ಟು 676 ಯುನಿಟ್ ರಕ್ತ ಸಂಗ್ರಹಿಸಿರುವುದು ಜಿಲ್ಲೆಯ ಮಟ್ಟಿಗೆ ಇದೇ ಮೊದಲು ಎಂದು ತಿಳಿಸಿದ ಅವರು, ಶಿಬಿರದ ಯಶಸ್ಸಿಗೆ ಶ್ರಮಿಸಿದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ರಕ್ತದಾನಿಗಳನ್ನು ಅಭಿನಂದಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್…
ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಜಿ.ಎಚ್. ರೂಪ ಮಾತನಾಡಿ, ‘ಲಿಂಗ ಭೇದವಿಲ್ಲದೆ 18 ರಿಂದ 60 ವರ್ಷದೊಳಗಿನ, 45 ಕೆ.ಜಿ.ಗಿಂತ ಅಧಿಕ ತೂಕವಿರುವ ಆರೋಗ್ಯವಂತರು ರಕ್ತದಾನ ಮಾಡಬಹುದು. ಶಿಬಿರದಲ್ಲಿ ಉಚಿತ ರಕ್ತ ಪರೀಕ್ಷೆ ಸೌಲಭ್ಯವೂ ಇದ್ದು, ಅರ್ಹರು ಇದರ ಸದುಪಯೋಗ ಪಡೆಯಬೇಕು ಎಂದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಜಿ.ಒ. ನಾಗರಾಜ್ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುವುದಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಆರೋಗ್ಯವಂತರು ಅವಕಾಶ ಸಿಕ್ಕಾಗಲೆಲ್ಲ ರಕ್ತದಾನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಬಿ.ವಿ. ಗಿರೀಶ್ ಮಾತನಾಡಿ, ರಕ್ತದಾನ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪುರುಷರು ಪ್ರತಿ ಮೂರು ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ನಿರಂತರವಾಗಿ ರಕ್ತದಾನ ಮಾಡುವ ಮೂಲಕ ಜೀವದಾನಿಗಳಾಗಬೇಕು ಎಂದರು.
ಇದನ್ನೂ ಓದಿ: ಮಠಗಳ ಆಸ್ತಿ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ | ಡಾ. ಬಸವಕುಮಾರ ಸ್ವಾಮೀಜಿ
ಚಿತ್ರದುರ್ಗ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಪೆಥಾಲಜಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ಬಿ.ಜೆ. ಬಿಂದು ರಕ್ತದಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ. ಮಲ್ಲಿಕಾರ್ಜುನ, ನಸಿರ್ಂಗ್ ಅಧೀಕ್ಷಕಿ ಶಾಂತಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ. ಕೃಷ್ಣನಾಯಕ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜೆ.ಆರ್. ಗೌರಮ್ಮ, ಗೋವಿಂದ ರೆಡ್ಡಿ ಕೊಣ್ಣೂರ, ಶುಶ್ರೂಷಾಧಿಕಾರಿ ವಿನಯ್, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಎಸ್. ಗುರುಮೂರ್ತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ. ಶ್ರೀನಿವಾಸಮೂರ್ತಿ, ಸಿಪಿಒ ಕರಕಪ್ಪ ಮೇಟಿ, ಗಂಗಾಧರ ರೆಡ್ಡಿ, ಏಡ್ಸ್ ನಿಯಂತ್ರಣ ಘಟಕದ ಅಶೋಕ, ಆರೋಗ್ಯ ಸಿಬ್ಬಂದಿ, ರಕ್ತದಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
