CHITRADURGA NEWS | 20 JANUARY 2026
ಚಿತ್ರದುರ್ಗ: ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೇ ಚಿತ್ರದುರ್ಗ ಅತ್ಯಂತ ಕಡಿಮೆ ತಲಾದಾಯ ಹೊಂದಿರುವ ಜಿಲ್ಲೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಎಸ್.ಆಕಾಶ್ ತಿಳಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 20 ಜನವರಿ | ಇಂದಿನ ಅಡಿಕೆ ಮಾರುಕಟ್ಟೆ ವಿವರ
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮಾನವ ಅಭಿವೃದ್ಧಿ ವರದಿ-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಠಿ ಯೋಜನೆ-2031 ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಸರಾಸರಿ ತಲಾ ಆದಾಯ ರೂ.03 ಲಕ್ಷವಿದ್ದರೆ, ಜಿಲ್ಲೆಯ ತಲಾ ಆದಾಯ ರೂ. 1.77 ಲಕ್ಷವಿದೆ. ಜಿಲ್ಲೆಯಲ್ಲಿ ಶೇ.56.67 ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಪ್ರಮಾಣ ಅತಿ ಹೆಚ್ಚಾಗಿದೆ ಎಂದರು.
ಭಾರತ 4ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶವಾಗಿದೆ. ಆದರೆ ವಿಶ್ವದಲ್ಲಿಯೇ ಅತಿ ಕಡಿಮೆ ತಲಾದಾಯ ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿರುವುದು ವೈರುಧ್ಯ. ಸ್ಥಳೀಯವಾಗಿ ಜನರಿಗೆ ಉದ್ಯೋಗ ದೊರೆತು ಆದಾಯ ಮಟ್ಟ ಹೆಚ್ಚಿದಾಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಸಂಗ್ರಹಿಸುವ ದತ್ತಾಂಶಗಳು ಅತಿ ಮುಖ್ಯವಾಗುತ್ತವೆ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 20 | ಹತ್ತಿ ರೇಟ್ ಎಷ್ಟಿದೆ?
ಶೈಕ್ಷಣಿಕವಾಗಿಯೂ ಹಿಂದುಳಿದ ಜಿಲ್ಲೆ:
ಜಿಲ್ಲೆಯು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದು, ಈ ವರ್ಷದ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ 28 ಸ್ಥಾನ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 23ನೇ ಸ್ಥಾನದಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಶೈಕ್ಷಣಿಕ ಸಾಧನೆ ತೀರಾ ಕಳಪೆ ಮಟ್ಟದಲ್ಲಿದ್ದು, ಇತ್ತೀಚಿನ ಶೈಕ್ಷಣಿಕ ವರದಿಯೊಂದರಲ್ಲಿ 6 ರಿಂದ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಶೇ.48 ರಷ್ಟು ವಿದ್ಯಾರ್ಥಿಗಳಿಗೆ 2 ತರಗತಿಯ ಪಠ್ಯ ಪುಸ್ತಕ ಓದಲು ಬರುವುದಿಲ್ಲ. ಶೇ.36ರಷ್ಟು ವಿದ್ಯಾರ್ಥಿಗಳಿಗೆ 2 ಅಂಕಿಯ ಕೂಡುವಿಕೆ, ಕಳೆಯುವಿಕೆ, ಗುಣಕಾರ ಹಾಗೂ ಭಾಗಕಾರ ಲೆಕ್ಕಗಳನ್ನು ಮಾಡಲು ಬರದಂತಹ ಸ್ಥಿತಿ ಇದೆ. ಇಂತಹ ವಿದ್ಯಾರ್ಥಿಗಳು ಮುಂದೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಉತ್ತಮ ಪಲಿತಾಂಶ ತರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಲ್ಪಿತ, ಸುಳ್ಳು ಅಂಕಿ ಅಂಶ ಬೇಡ:
ಇದೇ ಮಾದರಿಯಲ್ಲಿ ಜಿಲ್ಲೆ ಸಮುದಾಯ ಆರೋಗ್ಯ, ಪೌಷ್ಠಿಕಾಂಶ, ಅನಿಮೀಯತೆ, ವಾಣಿಜ್ಯ, ವ್ಯಾಪಾರ, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ಅತ್ಯಂತ ಹಿಂದಿಳಿದೆ. ಇವುಗಳನ್ನು ಹೋಗಲಾಡಿಸಿ, ಸಾಮಾಜಿಕ ಬದಲಾವಣೆ ತಂದು, ಜಿಲ್ಲೆಯ ಜನರ ಆದಾಯ ಹಾಗೂ ಜೀವನ ಮಟ್ಟ ಸುಧಾರಿಸಲು ಅಗತ್ಯ ಇರುವ ಅಂಕಿ ಅಂಶಗಳನ್ನು ಅಧಿಕಾರಿಗಳು ಕ್ರೋಢಿಕರಿಸಿದರೆ, ಮುಂಬರುವ ವರ್ಷಗಳಲ್ಲಿ ಇವುಗಳ ನಿವಾರಣೆಗೆ ಸರ್ಕಾರ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ ಎಂದರು.
ಇದನ್ನೂ ಓದಿ: ನಾಲ್ವರು ಕೆಎಎಸ್ ಅಧಿಕಾರಿಗಳ ವರ್ಗಾವಣೆ | ಚಿತ್ರದುರ್ಗಕ್ಕೆ ಹೊಸ AC
ಯಾವುದೇ ಕಾರಣಕ್ಕೂ ಕಲ್ಪಿತ ಹಾಗೂ ಸುಳ್ಳು ಅಂಕಿ ಅಂಶಗಳನ್ನು ಅಧಿಕಾರಿಗಳು ನೀಡಬಾರದು. ಈ ಹಿನ್ನಲೆಯಲ್ಲಿಯೇ ಕಾರ್ಯಾಗಾರ ಏರ್ಪಡಿಸಲಾಗಿದೆ. ಪ್ರತಿ ತಿಂಗಳು ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಪರಿಶೀಲನೆಗಾಗಿ ಸಭೆ ನಡೆಸುವುದಾಗಿ ಸಿಇಓ ಡಾ.ಆಕಾಶ್ ತಿಳಿಸಿದರು.
ಯೋಜನೆ ಮತ್ತು ಅಂಕಿ ಸಂಖ್ಯೆ ಸಂಗ್ರಹಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಾಗೂ ಸರ್ಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಬಸವರಾಜ್.ಎಸ್ ಮಾತನಾಡಿ, ಕಾರ್ಯಾಗಾರದ ಪ್ರಮುಖ ಉದ್ದೇಶವೆಂದರೆ, ಮಾನವ ಅಭಿವೃದ್ಧಿ ಸೂಚ್ಯಂಕ-2025 ರಲ್ಲಿ ಜಿಲ್ಲೆಯ ಜನರ ಜೀವನ ಶೈಲಿ, ಜೀವನ ಮಟ್ಟ ಹಾಗೂ ವಸ್ತುಸ್ಥಿತಿ ಹೇಗಿದೆ ಎಂಬುದನ್ನು ತಿಳಿಯುವುದಾಗಿದೆ. ಇದಕ್ಕಾಗಿ ಹಲವಾರು ಇಲಾಖೆ ಅಧಿಕಾರಿಗಳು ವಿವಿಧ ರೀತಿಯ ಅಂಕಿ ಅಂಶಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ ನೀಡಬೇಕು.
ಇದನ್ನು ಆಧಾರಿಸಿ ಮಾನವ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳು ಅನುಷ್ಟಾನಗೊಳಿಸುತ್ತಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಜಿಲ್ಲೆಗೆ ಅಗತ್ಯ ಇರುವ ಹೊಸ ಯೋಜನೆಗಳನ್ನು ರೂಪಿಸಲು ಸಹಾಯಕವಾಗುತ್ತಿದೆ. ಇದರೊಂದಿಗೆ ಸುಸ್ಥರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬಹುದು ಎಂದರು.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಅನುದಾನ ಕೊಡಿ | ಕೆ.ಎಸ್.ನವೀನ್, ಎಂ.ಚಂದ್ರಪ್ಪ
ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯಿತ್ರಿ, ದಾವಣಗೆರೆ ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಪಕ ಡಾ.ಹುಚ್ಚೇಗೌಡ, ತುಮಕೂರು ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಮುನಿರಾಜು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
