CHITRADURGA NEWS | 15 AUGUST 2026
ಚಿತ್ರದುರ್ಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಈವರೆಗೆ ಶೇ.90.15 ರಷ್ಟು ಗಣಕೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಇದನ್ನೂ ಓದಿ: ದಿನ ಭವಿಷ್ಯ | ಆಗಸ್ಟ್ 15 | ಕೈಗೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣ, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಎಸ್‍ಐಆರ್ ಸಂಬಂಧ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಒಟ್ಟು 14,40,534 ಮತದಾರರ ಪೈಕಿ ಇದುವರೆಗೆ 12,98,617 ಮತದಾರರ ಪರಿಶೀಲನೆ ಪೂರ್ಣಗೊಂಡಿದೆ. ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ತದನಂತರ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು, ಹೊಸ ಸೇರ್ಪಡೆಗಳನ್ನು ಮಾಡಲು ಒಂದು ತಿಂಗಳ ಕಾಲಾವಕಾಶ ಸಿಗಲಿದೆ ಎಂದು ಹೇಳಿದರು.
ಸಿಟಿ ವ್ಯಾಪ್ತಿಯಲ್ಲಿ ಇನ್ನು ಸುಧಾರಣೆ ಅಗತ್ಯ: ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಎಸ್‍ಐಆರ್ ಪ್ರಕ್ರಿಯೆ ಕೊಂಚ ಕಡಿಮೆಯಿದ್ದು, ಚಳ್ಳಕೆರೆ, ಚಿತ್ರದುರ್ಗ ಹಾಗೂ ಹಿರಿಯೂರು ನಗರ ವ್ಯಾಪ್ತಿಯಲ್ಲಿ ಶೇ. 86 ರಿಂದ 88 ರಷ್ಟು ಸಾಧನೆಯಾಗಿದೆ ಎಂದು ತಿಳಿಸಿದ ಅವರು, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಪ್ರಮಾಣ ಶೇ. 10ಕ್ಕಿಂತಲೂ ಕಡಿಮೆಯಿದ್ದು, ಉತ್ತಮ ಸಾಧನೆಯಾಗಿದೆ. ರಾಜ್ಯದಲ್ಲೇ ಅತ್ಯಂತ ಕಡಿಮೆ ಡಿಲೀಷನ್ ಆಗಿರುವ ಜಿಲ್ಲೆಗಳ ಪೈಕಿ ಚಿತ್ರದುರ್ಗ 5ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ: ಹಿಂದೂ ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿಗೆ
ಬಿಎಲ್‍ಒಗಳಿಗೆ ಬೆಂಬಲ ನೀಡಲು ಮನವಿ: ಎಸ್‍ಐಆರ್ ಸಂಬಂಧ ಬಿಎಲ್‍ಒಗಳು ಮನೆ ಮನೆ ಭೇಟಿ ನೀಡಲಾಗುತ್ತಿದ್ದು, ಪರಿಶೀಲನೆ ವೇಳೆ ಪತ್ತೆಯಾಗದ ಖಾಯಂ ಆಗಿ ಸ್ಥಳಾಂತರಗೊಂಡಿರುವ ಮತದಾರರ ಬಗ್ಗೆ ಮತ್ತೊಮ್ಮೆ ಕ್ರಾಸ್ ಚೆಕ್ ಮಾಡಲಾಗುತ್ತಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಬಿಎಲ್‍ಎಗಳು ಬಿಎಲ್‍ಒ ಅವರೊಂದಿಗೆ ಕೈಜೋಡಿಸಿ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಕರೆ ನೀಡಿದರು.
ಎಸ್‍ಐಆರ್ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ತೀವ್ರ ಜಾಗರೂಕತೆ ವಹಿಸಬೇಕು. ಮೂಲ ಪಟ್ಟಿಯಲ್ಲಿ ಹೆಸರುಗಳು ಸೇರಿದರೆ ಮುಂದೆ ತಿದ್ದುಪಡಿ, ವರ್ಗಾವಣೆ ಸೇರಿದಂತೆ ಯಾವುದೇ ಮಾರ್ಪಾಡುಗಳನ್ನು ಸುಲಭವಾಗಿ ಮಾಡಲು ಅವಕಾಶವಿರುತ್ತದೆ ಎಂದು ಹೇಳಿದರು.
ಮತದಾರರ ಮೂಲ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದರೆ, ಬೇರೆಡೆಗೆ ಸ್ಥಳಾಂತರಗೊಂಡಾಗ ಅಥವಾ ತಿದ್ದುಪಡಿಗಳಿದ್ದಲ್ಲಿ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
30790 ಮರಣ, 70199 ಶಾಶ್ವತ ವಲಸೆ, 21354 ಡಬಲ್ ಎಂಟ್ರಿ, 18574 ಗೈರು ಹಾಜರು ಹಾಗೂ 1000 ಇತರೆ ಸೇರಿದಂತೆ ಎಎಸ್‍ಡಿಡಿಒ ಮತದಾರರ ಪಟ್ಟಿಯನ್ನು ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ನೀರ್ ಲ್ಯಾಬ್
ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ಬೀಬೀ ಫಾತೀಮಾ, ಗ್ರೇಡ್-2 ತಹಶೀಲ್ದಾರ್ ಮಲ್ಲಿಕಾರ್ಜುನ ನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಮೋಹನ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಿಪಿಐ ಡಿಒಸಿ ಗೌಸ್‍ಪೀರ್ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

