ಮುಖ್ಯ ಸುದ್ದಿ
ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿಲ್ಲ | ಲೋಕಸಭೆಯಲ್ಲಿ ಜಲಶಕ್ತಿ ಸಚಿವರ ಸ್ಪಷ್ಟನೆ

CHITRADURGA NEWS | 11 FEBRUARY 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಕಾರ್ಯಾನುಷ್ಠಾನ ಮತ್ತು ಅನುದಾನ ಬಿಡುಗಡೆಗೆ ಆಗ್ರಹಿಸಿ ಬಯಲುಸೀಮೆ ನೆಲದಲ್ಲಿ ಹೋರಾಟದ ಕಿಚ್ಚು ಹೊತ್ತಿದೆ. ನೀರಾವರಿ ಅನುಷ್ಠಾನ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪ್ರಗತಿಪರ, ಕನ್ನಡ ಪರ, ದಲಿತಪರ ಸಂಘಟನೆಗಳು ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಪ್ರತಿಭಟನೆ ದಾಖಲಿಸುತ್ತಿವೆ.
ಈಗಾಗಲೇ ಜನವರಿಯಲ್ಲಿ ಚಿತ್ರದುರ್ಗ ಜಿಲ್ಲಾ ಕೇಂದ್ರ ಬಂದ್ ಹಾಗೂ ಫೆ.9 ರಂದು ಚಳ್ಳಕೆರೆ ಬಂದ್ ಯಶಸ್ವಿಗೊಂಡ ಬೆನ್ನಲ್ಲೇ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಫೆ. 13 ರಂದು ನಾಯಕನಹಟ್ಟಿ ಬಂದ್‌ಗೆ ನಿರ್ಧರಿಸಿದೆ. ಈ ನಡುವೆ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಾರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಭಾನುವಾರಕ್ಕೆ ಏಳನೇ ದಿನಕ್ಕೆ ಕಾಲಿರಿಸಿದೆ.
ಇಂತಹ ಸಮಯದಲ್ಲಿ ಹನಿ ನೀರಾವರಿ ಮೂಲಕ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ನೀರಾವರಿ ಯೋಜನೆ’ಯನ್ನಾಗಿ ಘೋಷಿಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವುದು ಆಘಾತ ತಂದಿದೆ.
ಇದನ್ನೂ ಓದಿ: ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದ ಚಿತ್ರದುರ್ಗ | ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೋಡುಗೆ
ಲೋಕಸಭೆಯಲ್ಲಿ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಕೇಳಿರುವ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ಬಿಶ್ವೇಶ್ವರ ತುಡು ಈ ಉತ್ತರ ನೀಡಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಈ ಯೋಜನೆಯು ರಾಷ್ಟ್ರೀಯ ಯೋಜನೆಯಾಗಲು ಅರ್ಹತೆ ಪಡೆದಿದೆ. ಈ ಸಂಬಂಧ ಜಲಶಕ್ತಿ ಸಚಿವಾಲಯದ ಉನ್ನತಾಧಿಕಾರ ಸಮಿತಿ ಸಹ ಶಿಫಾರಸು ಮಾಡಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಕೇಂದ್ರ ಹಣಕಾಸು ಸಚಿವಾಲಯದ ಸಾರ್ವಜನಿಕ ಹೂಡಿಕೆ ಮಂಡಳಿಯು 2022ರ ಅಕ್ಟೋಬರ್ 12ರಂದು ಒಪ್ಪಿಗೆ ನೀಡಿದೆ. ಇದಾಗಿ ಎಂಟು ತಿಂಗಳು ಕಳೆದರೂ ಮತ್ತೆ ಯಾವ ಪ್ರಕ್ರಿಯೆಯೂ ನಡೆದಿಲ್ಲ.
ಇದನ್ನೂ ಓದಿ: ಇನ್ನು ಮುಂದೆ ಚಿತ್ರದುರ್ಗ ನನ್ನ ತವರು ಮನೆ | ದುರ್ಗದ ಜನರ ಪ್ರೀತಿಗೆ ಭಾವುಕರಾದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.
ಈ ಯೋಜನೆಯಲ್ಲಿ 29.90 ಟಿಎಂಸಿ ಅಡಿ ನೀರು (ತುಂಗಾ ನದಿಯಿಂದ 17.40 ಟಿಎಂಸಿ ಅಡಿ ಹಾಗೂ ಭದ್ರಾ ಜಲಾಶಯದಿಂದ 12.50 ಟಿಎಂಸಿ ಅಡಿ) ಬಳಕೆ ಮಾಡಲಾಗುತ್ತದೆ. ಈ ಯೋಜನೆ ಮೂಲಕ 367 ಕೆರೆಗಳನ್ನು ತುಂಬಿಸಲಾಗುತ್ತದೆ. 2.25 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ವ್ಯವಸ್ಥೆ ಆಗಲಿದೆ.
ಇದನ್ನೂ ಓದಿ: ‘ಭದ್ರೆ’ ಗೆ ಸ್ತಬ್ಧವಾಯ್ತು ಚಳ್ಳಕೆರೆ | ಮುಂಜಾನೆಯಿಂದಲೇ ಸಂಪೂರ್ಣ ಬಂದ್ | ಜನರ ಸ್ವಯಂಪ್ರೇರಿತ ಬೆಂಬಲ
ಈ ಯೋಜನೆಗೆ ತಗಲುವ ಒಟ್ಟು ವೆಚ್ಚ ₹16,125 ಕೋಟಿ. ಯೋಜನೆಗೆ ₹5,300 ಕೋಟಿ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು 2023ರ ಕೇಂದ್ರದ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಅನುದಾನ ಇಲ್ಲಿಯವರೆಗೆ ಬಿಡುಗಡೆ ಆಗಿಲ್ಲ.
ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಕೇಂದ್ರ ಸರ್ಕಾರಕ್ಕೆ ಸುಮಾರು 10 ಸಲ ಮನವಿ ಸಲ್ಲಿಸಿದ್ದಾರೆ.
