ಮುಖ್ಯ ಸುದ್ದಿ
ಬಸ್ಸಲ್ಲಿ ಬಂದಿಳಿದು, ಆಟೋ ಹತ್ತಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ
ಚಿತ್ರದುರ್ಗ ನ್ಯೂಸ್.ಕಾಂ:
ಬಸ್ಸಲ್ಲಿ ಬಂದಿಳಿದು, ಆಟೋ ಹತ್ತಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಎನ್ನುವ ಹೆಡ್ಡಿಂಗೇ ವಿಚಿತ್ರವಾಗಿದೆ ಅಲ್ವಾ.
ಯಾರಾದರೂ ಶಾಸಕರು ಬಸ್ಸಲ್ಲಿ ಓಡಾಡ್ತರಾ, ಬಸ್ಸು ಪರವಾಗಿಲ್ಲ, ಆಟೋದಲ್ಲಿ ಓಡಾಡ್ತಾರಾ, ಹಂಗೇನಾದರೂ ಮಾಡಿದ್ರೆ ಅದು ಪ್ರಚಾರದ ಗಿಮಿಕ್ ಅಷ್ಟೇ ಎನ್ನಬಹುದು.
ಆದರೆ, ನಾವು ಹೇಳುತ್ತಿರುವ ಈ ಶಾಸಕ ಯಾವ ಪ್ರಚಾರದ ಗಿಮಕ್ಕಿಗೂ ಹೀಗೆ ಮಾಡಿಲ್ಲ. ಬದಲಾಗಿ ಅವರ ಜೀವನವೇ ಹಾಗಿದೆ. ಈ ಬಗ್ಗೆ ಹಲವು ಸಲ ಸುದ್ದಿಯಾಗಿದ್ದೂ ಇದೆ.
ಇದನ್ನೂ ಓದಿ: ಮದುವೆ ಬಸ್ ಪಲ್ಟಿ ಪ್ರಕರಣ | ಸಂಕಟದ ನಡುವೆಯೇ ಮುಗಿದ ಮದುವೆ
ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ, ಮೇಲುಕೋಟೆ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ದರ್ಶನ್ ಪುಟ್ಟಣ್ಣಯ್ಯ ನಾವು ಹೇಳುತ್ತಿರುವ ಸರಳ ಸಜ್ಜನಿಕೆಯ ಶಾಸಕ.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಟಿ.ನುಲೇನೂರು ಎಂ.ಶಂಕ್ರಪ್ಪ ಅವರು ಅಗಲಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶನಿವಾರ ರೈತ ಸಂಘ ಹಾಗೂ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಶಾಸಕ ಹಾಗೂ ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಲಾಗಿತ್ತು.
ಬೆಳಗಾವಿ ಅಧಿವೇಶನದಲ್ಲಿದ್ದ ದರ್ಶನ್ ಪುಟ್ಟಣ್ಣಯ್ಯ, ರೈತ ನಾಯಕ ನುಲೇನೂರು ಶಂಕ್ರಪ್ಪ ಅವರ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ತಪ್ಪಿಸಲಿಲ್ಲ.
ಬೆಳಗಾವಿಯಿಂದಲೇ ಚಿತ್ರದುರ್ಗಕ್ಕೆ ಬರುತ್ತೇನೆ ಎಂದು ಆಯೋಜಕರಿಗೆ ತಿಳಿಸಿದ್ದರು. ಅದರಂತೆ ಬೆಳಗಾವಿಯಿಂದ ಬಸ್ ಹತ್ತಿ ಚಿತ್ರದುರ್ಗಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಬಸ್ಸಿನಲ್ಲಿ ಬರುತ್ತಿರುವ ವಿಷಯ ತಿಳಿದು ಪೋನ್ ಮೂಲಕ ಅವರನ್ನು ಸಂಪರ್ಕಿಸಿದ ಕೆಲ ರೈತ ಮುಖಂಡರು ಅಲ್ಲಿಗೆ ಕಾರು ಕಳಿಸುತ್ತೇವೆ ಎಂದಿದ್ದಾರೆ. ಆದರೆ, ಇದಕ್ಕೆ ಒಪ್ಪದ ದರ್ಶನ್ ಪುಟ್ಟಣ್ಣಯ್ಯ ಬಸ್ ಇಳಿದು ಆಟೋ ಹತ್ತಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ವಿಮಾನ ನಿಲ್ದಾಣಕ್ಕೆ(AIRPORT)ಚಿಂತೆನ
ಇತ್ತ ಪ್ರವಾಸಿ ಮಂದಿರದ ಬಳಿ ಮತ್ತೊಂದು ಗುಂಪು, ಶಾಸಕರು ಬರುವುದನ್ನು ಕಾಯುತ್ತಿತ್ತು. ಕಾರಿನಲ್ಲಿ ಬರಬಹುದು ಎಂದು ಬಂದು ಹೋಗುವ ಕಾರುಗಳನ್ನು ಗಮನಿಸುತ್ತಿದ್ದರೆ ಇವರು ಆಟೋದಲ್ಲಿ ಬಂದಿಳಿದಿದ್ದರು.
ಇದನ್ನು ಸ್ವತಃ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ನುಡಿನಮನ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಇಂತಹ ಸರಳ ಶಾಸಕರು ನೂರಾಗಲಿ ಎಂದು ಆಶಿಸಿದರು.
ಇನ್ನೂ ನುಡಿನಮನ ಕಾರ್ಯಕ್ರಮ ಮುಗಿಯುತ್ತಲೇ ರಂಗಮಂದಿರದ ಪಕ್ಕದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಲಾಡು, ಪಾಯಸ, ಅನ್ನ ಸಾಂಬಾರ್ ಇತ್ತು. ನೇರವಾಗಿ ಅಲ್ಲಿಗೇ ಊಟಕ್ಕೆ ಆಗಮಿಸಿದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಮುಖಂಡರು ಊಟ ತಂದು ಕೊಡಲು ಮುಂದಾದರೂ ಅದನ್ನು ಸ್ವೀಕರಿಸಲಿಲ್ಲ.
ಅವರೇ ಅಡಿಕೆ ತಟ್ಟೆ ಹಿಡಿದು, ತೊಳೆದುಕೊಂಡು ಸರತಿ ಸಾಲಿನಲ್ಲಿ ನಿಂತು ಲಾಡು ಪಾಯಸ ಹಾಕಿಸಿಕೊಂಡರು. ನಂತರ ಅನ್ನ ಸಾರು ಹಾಕಿಸಿಕೊಳ್ಳುವಾಗಲೂ ದೊಡ್ಡ ಸಾಲಿತ್ತು. ಆಗಲೂ ಹಿಂದಿನಿಂದ ಸಾಲಲ್ಲಿ ಬಂದು ಅನ್ನ ಸಾರು ಹಾಕಿಸಿಕೊಂಡರು. ಅಕ್ಕಪಕ್ಕ ಇದ್ದ ಯಾರಿಗೂ ಇವರೊಬ್ಬ ಶಾಸಕರು ಎನ್ನುವ ಭಾವನೆಯೇ ಬರಲಿಲ್ಲ.
ಊಟದ ನಂತರ ಮಂಡ್ಯದಿಂದ ಆಗಮಿಸಿದ್ದ ಅವರ ಕಾರಿನಲ್ಲಿ ಪ್ರಯಾಣ ಬೆಳೆಸಿದರು.
ಈಗೀಗ, ರಾಜಕೀಯ ಪಕ್ಷಗಳಲ್ಲಿ ಸಣ್ಣ ಪುಟ್ಟ ಹುದ್ದೆ ದೊರೆತರೂ ದೊಡ್ಡ ದೊಡ್ಡ ಕಾರುಗಳಲ್ಲಿ ಮೆರೆಯುವ ಅಥವಾ ಸಣ್ಣ ಅಧಿಕಾರ ಸಿಕ್ಕಿದರೂ ಜನಸಾಮಾನ್ಯರು ಕಣ್ಣಿಗೆ ಕಾಣದಂತೆ ಓಡಾಡುವವರ ನಡುವೆ, ಸರಳತೆಯನ್ನೇ ಮೈಗೂಡಿಸಿಕೊಂಡಿರುವ ದರ್ಶನ್ ಪುಟ್ಟಣ್ಣಯ್ಯ ಅವರಂತಹ ಶಾಸಕರು ಮಾದರಿಯಾಗುತ್ತಾರೆ. ರಾಜ್ಯ, ರಾಷ್ಟ್ರಕ್ಕೆ ಇಂತಹ ಜನಪ್ರತಿನಿಧಿಗಳ ಅಗತ್ಯವಿದೆ.