ಮುಖ್ಯ ಸುದ್ದಿ
ಚಿತ್ರದುರ್ಗ-ತುಮಕೂರು ನಡುವೆ ಏರ್‌ಪೋರ್ಟ್ (AIRPORT) | ಬೆಂಗಳೂರು ಸಮೀಪ ಎರಡನೇ ವಿಮಾನ ನಿಲ್ದಾಣಕ್ಕೆ ಸರ್ಕಾರದ ಚಿಂತನೆ
ಚಿತ್ರದುರ್ಗ ನ್ಯೂಸ್.ಕಾಂ: ಹಂತ ಹಂತವಾಗಿ ಅಭಿವೃದ್ಧಿಯತ್ತ ಹೊರಳುತ್ತಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಆಸುಪಾಸಿನಲ್ಲೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆಯೇ..?
ಇಂಥದ್ದೊಂದು ಸುದ್ದಿ ಕಳೆದೊಂದು ವಾರದಿಂದ ಸದ್ದು ಮಾಡುತ್ತಿದೆ. ಸರ್ಕಾರಿ ಸಾರಿಗೆಗೂ ಪರದಾಡುವ ಸ್ಥಿತಿಯಿದ್ದ ಜಿಲ್ಲೆಯ ಮೇಲೆ ಲೋಹದ ಹಕ್ಕಿಗಳು ಹಾರಾಟ ಮಾಡುವ ದಿನಗಳು ಸನ್ನಿಹಿತವಾಗುತ್ತಿವೆಯೇ ಎನ್ನುವ ವಾತಾವರಣ ಕಂಡು ಬರುತ್ತಿದೆ.
ಈಗಾಗಲೇ ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವೆ ನೇರ ರೈಲು ಮಾರ್ಗ ಕಾಮಗಾರಿ ಚುರುಕು ಪಡೆದುಕೊಂಡಿದ್ದು, ಒಂದೆರಡು ವರ್ಷಗಳಲ್ಲಿ ಬೆಂಗಳೂರು ಪ್ರಯಾಣ ಚಿತ್ರದುರ್ಗದವರಿಗೆ ಸಲೀಸಾಗಲಿದೆ. ಕಡಿಮೆ ವೆಚ್ಚದಲ್ಲಿ, ಕಡಿಮೆ ಹಣದಲ್ಲಿ ಬೆಂಗಳೂರು, ತುಮಕೂರು ಪ್ರಯಾಣ ಮಾಡುವಂತಹ ದಿನಗಳು ಹತ್ತಿರವಾಗುತ್ತಿವೆ.
ಇದನ್ನೂ ಓದಿ: ಪೂರ್ಣಿಮಾ ಶ್ರೀನಿವಾಸ್‍ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಹೂ ಮಳೆಯ ಸ್ವಾಗತ
ಈ ಸಂತಸ ಒಂದು ಕಡೆಯಾದರೆ, ಮತ್ತೊಂದು ಕಡೆ ಬಯಸದೆ ಬರುತ್ತಿರುವ ಭಾಗ್ಯದಂತೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿ ಅಥವಾ ಗಡಿ ಭಾಗದಲ್ಲಿ ದೊಡ್ಡ ಪ್ರಮಾಣದ ವಿಮಾನ ನಿಲ್ದಾಣ ಆರಂಭಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆಗಳು ನಡೆಯುತ್ತಿವೆ ಎನ್ನಲಾಗಿದೆ.
ಏನಿದು ಚಿತ್ರದುರ್ಗ-ತುಮಕೂರು ನಡುವೆ ಏರ್‍ಪೋರ್ಟ್:
ಪ್ರತಿಷ್ಠಿತ ದಿನಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಈ ಬಗ್ಗೆ ವರದಿ ಮಾಡಿದ್ದು, ಚಿತ್ರದುರ್ಗ-ತುಮಕೂರು ನಡುವೆ ಸಂಭಾವ್ಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಬೆಂಗಳೂರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಅಸ್ತಿತ್ವದಲ್ಲಿದೆ. ಆದರೆ, ಇಲ್ಲಿ ಒತ್ತಡ ಹೆಚ್ಚಾಗುತ್ತಿರುವುದನ್ನು ಗಮನಿಸಿ, ಅಲ್ಲಿನ ಟ್ರಾಫಿಕ್ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದ ಬೆಂಗಳೂರಿಗೆ ಸಮೀಪದಲ್ಲಿ ಎರಡನೇ ವಿಮಾನ ನಿಲ್ದಾಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈಗಾಗಲೇ ಗೋವಾ, ಮುಂಬೈ ನಗರಗಳಲ್ಲಿ ಎರಡನೇ ವಿಮಾನ ನಿಲ್ದಾಣಗಳನ್ನು ಮಾಡಲಾಗಿದೆ. ಇದರಿಂದ ಉತ್ತೇಜನಗೊಂಡಿರುವ ಸರ್ಕಾರ ರಾಜ್ಯದಲ್ಲೂ ಅಂಥದ್ದೇ ಪ್ರಯತ್ನಕ್ಕೆ ಮುಂದಾಗುತ್ತಿದೆ.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಲಗ್ಗೆ ಹಾಕಲಿವೆ ಜಿಂದಾಲ್, ಕಿರ್ಲೋಸ್ಕರ್ | ಮೆಗಾ ಪ್ರಾಜೆಕ್ಟ್‍ಗಳಿಗೆ ಮಾಸ್ಟರ್ ಪ್ಲಾನ್
ಆದರೆ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ಯಾವುದೇ ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣ ಈಗಾಗಲೇ ಇರುವ ಮತ್ತೊಂದು ವಿಮಾನ ನಿಲ್ದಾಣದಿಂದ 150 ಕಿ.ಮೀ ಒಳಗೆ ಇರಬಾರದು ಎಂದು ಸ್ಪಷ್ಟವಾಗಿ ನಿರ್ದೇಶನವಿದೆ.
ಈ ಹಿನ್ನೆಲೆಯಲ್ಲಿ ಈ ಅಂತರವನ್ನು ಗಮನದಲ್ಲಿಟ್ಟುಕೊಂಡರೆ ತುಮಕೂರು ನಗರದಿಂದಲೂ ದೂರ ಬರಬೇಕಾದ ಸಂದರ್ಭ ಬರಲಿದೆ. ಆಗ ಸಹಜವಾಗಿ ಚಿತ್ರದುರ್ಗಕ್ಕೆ ಸಮೀಪದಲ್ಲಿ ಅಥವಾ ತುಮಕೂರು-ಚಿತ್ರದುರ್ಗ ನಡುವೆ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎನ್ನುವ ಆಶಾಭಾವನೆ ಮೂಡುತ್ತಿದೆ.
ಇದರೊಟ್ಟಿಗೆ ಹಲವು ತಜ್ಞರು ಕೂಡಾ ಚಿತ್ರದುರ್ಗ-ತುಮಕೂರು ನಡುವೆಯೇ ಏರ್‍ಪೋರ್ಟ್ ನಿರ್ಮಾಣ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಎಚ್‍ಎಎಲ್ ವಿಮಾನ ನಿಲ್ದಾಣವಿದ್ದರೂ, ಬೆಂಗಳೂರು ನಗರದ ದಟ್ಟಣೆ, ಬೆಳವಣಿಗೆಗೆ ಸ್ಥಳಾವಕಾಶದ ಕೊರತೆಯನ್ನು ಗಮನಿಸಲಾಗಿದೆ. ಈ ನಿಟ್ಟಿನಲ್ಲಿ ಎರಡನೇ ವಿಮಾನ ನಿಲ್ದಾಣ ತುಮಕೂರು ದಾಟಿ, ಚಿತ್ರದುರ್ಗ ಸಮೀಪದಲ್ಲಿ ಆಗುವಂತೆ ಆಲೋಚನೆ ಮಾಡಲಾಗಿದೆ ಎನ್ನುವ ಬಗ್ಗೆ ರಾಜ್ಯ ಸರ್ಕಾರದ ವಾಣಿಜ್ಯ, ಕೈಗಾರಿಕಾ ಮತ್ತು ಮೂಲ ಸೌಲಭ್ಯ ಇಲಾಖೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ 100 ಕಿ.ಮೀ ಅಂತರದಲ್ಲೇ ಒಂದು ವಿಮಾನ ನಿಲ್ದಾಣವಾಗಿರುವುದು ಜಿಲ್ಲೆಯ ಜನರಿಗೆ ಒಂದಷ್ಟು ಸಂತಸ ಮೂಡಿಸಿದೆ. ಈಗ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಚಿತ್ರದುರ್ಗ-ತುಮಕೂರು ನಡುವೆ ಆದರೆ, ಜಿಲ್ಲೆಯ ಬೆಳವಣಿಗೆಗೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರಗಳಿವೆ.
ಈಗಾಗಲೇ ಮೇಟಿಕುರ್ಕೆ ಬಳಿ ಕೈಗಾರಿಕೆಗಳ ಸ್ಥಾಪನೆಗಾಗಿ 1150 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಹಂತದಲ್ಲಿದ್ದು, ಈಗ ಇದೇ ಮಾರ್ಗದಲ್ಲಿ ವಿಮಾನ ನಿಲ್ದಾಣವೂ ಆದರೆ, ಬರದ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಗೆ ಹೆಚ್ಚು ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ.