ಮುಖ್ಯ ಸುದ್ದಿ
ಚಿತ್ರದುರ್ಗ ನಗರಸಭೆ ಸದ್ಯಕ್ಕೆ ಮಹಾನಗರ ಪಾಲಿಕೆ ಆಗದು | ಪೌರಾಯುಕ್ತೆ ಎಂ.ರೇಣುಕಾ
CHITRADURGA NEWS | 25 APRIL 2025
ಚಿತ್ರದುರ್ಗ: ಚಿತ್ರದುರ್ಗ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡುವಷ್ಟು ಜನಸಂಖ್ಯೆ ಇಲ್ಲ. ಹೀಗಾಗಿ ಸದ್ಯಕ್ಕೆ ಮಹಾನಗರ ಪಾಲಿಕೆ ಆಗದು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದರು.
Also Read: ಡಾ.ರಾಜ್ @97 | ಅಣ್ಣಾವ್ರ ಜನ್ಮದಿನಾಚರಣೆ | ಶಾಸಕ ವೀರೇಂದ್ರ ಪಪ್ಪಿ ಭಾಗೀ
ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿತ್ರದುರ್ಗ ನಗರದ ಒಟ್ಟು ಜನಸಂಖ್ಯೆ ಸೇರಿ ಹಾಗೂ ಸುತ್ತಮುತ್ತಲಿನ 3 ರಿಂದ 8 ಕಿ.ಮೀ ವರೆಗೆ ಇರುವ ಗ್ರಾಮಗಳನ್ನು ಸೇರಿಸಿದರೂ ಈ ಮಾನದಂಡಕ್ಕೆ ಬೇಕಾಗುವಷ್ಟು ಜನಸಂಖ್ಯೆ ಆಗುವುದಿಲ್ಲ. ಹೀಗಾಗಿ 2031ನೇ ಜನಗಣತಿ ವೇಳೆಗೆ ಮಹಾನಗರ ಪಾಲಿಕೆ ಆಗಬಹುದು ಎಂದು ಅಭಿಪ್ರಾಯಪಟ್ಟರು.
ಸದಸ್ಯ ಶ್ರೀನಿವಾಸ್, ಮಹಾನಗರ ಪಾಲಿಕೆಯಾದರೆ ಏನೆಲ್ಲಾ ಅನುಕೂಲಗಳಿವೆ ಎಂದು ವಿಷಯ ಪ್ರಸ್ತಾಪಿಸಿದರು. ಇದೇ ವೇಳೆ ಕುಡಿಯುವ ನೀರು, ಯುಜಿಡಿ, ಸ್ವಚ್ಛತೆ ಸೇರಿ 35 ವಾರ್ಡ್‌ಗಳಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿ ಸದ್ಯಕ್ಕೆ ನಗರಸಭೆಯೇ ಇರಲಿ. ಮಹಾನಗರ ಪಾಲಿಕೆ ಬೇಡವೆಂದು ಶ್ರೀನಿವಾಸ್, ವೆಂಕಟೇಶ್ ಸೇರಿ ಹತ್ತಾರು ಸದಸ್ಯರು ತಿಳಿಸಿದರು.
23 ಮೀಟರ್ ರಸ್ತೆ ವಿಸ್ತರಣೆಗೆ ನಿರ್ಣಯ:
ಹಲವು ದಿನಗಳಿಂದ ಹಗ್ಗ ಜಗ್ಗಾಟದಲ್ಲಿದ್ದ ರಸ್ತೆ ವಿಸ್ತರಣೆ ಕುರಿತಂತೆ ಗುರುವಾರದ ಸಭೆಯಲ್ಲೂ ಪ್ರಸ್ತಾಪವಾಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಗೊಪ್ಪೆ ಮಂಜುನಾಥ್, ರಸ್ತೆ ವಿಸ್ತರಣೆ ಕಾಟಾಚಾರಕ್ಕೆ ಮಾಡಬೇಡಿ. ನಗರ ಸೌಂದರ್ಯ ಹೆಚ್ಚಾಗಬೇಕು. ಇಲ್ಲದಿದ್ದರೆ ಬೇಡ ಎಂದರು.
Also Read: ಅಡಿಕೆ ಧಾರಣೆ | ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್
ಚಳ್ಳಕೆರೆ ಗೇಟ್‌ನಿಂದ ಜೆಎಂಐಟಿ ವೃತ್ತ, ಗಾಂಧಿ ಸರ್ಕಲ್‌ನಿಂದ ಕನಕ ವೃತ್ತ, ಮೆದೇಹಳ್ಳಿ ರಸ್ತೆ, ಜೆಸಿಆರ್ ರಸ್ತೆಯೂ ಸೇರಿ ನಗರದ ಮುಖ್ಯ ರಸ್ತೆಗಳೆಲ್ಲವೂ 25 ಮೀಟರ್ ವಿಸ್ತರಣೆಯಾಗಬೇಕು. 22.5 ಮೀಟರ್ ಬೇಡ. ಗಾಂಧಿ ವೃತ್ತದ ಸುತ್ತಲೂ 100 ಮೀಟರ್ ರಸ್ತೆ ಇರಲಿ ಎಂದು ಮಂಜುನಾಥ್ ಒತ್ತಾಯಿಸಿದರು.
ಅಂತಿಮವಾಗಿ ಮುಖ್ಯ ರಸ್ತೆಗಳನ್ನು 23 ಮೀಟರ್ ವಿಸ್ತರಿಸಬೇಕು ಎಂದು ನಿರ್ಣಯಿಸಲಾಯಿತು.
ನಗರಸಭೆ ಎಇಇ ರಾಜು ಮಾತನಾಡಿ, ನಗರಸಭೆ ವ್ಯಾಪ್ತಿಗೊಳಪಡುವ ರಸ್ತೆ ವಿಸ್ತೀರ್ಣದ ಮಾಹಿತಿ ಲಭ್ಯವಾಗಿಲ್ಲ. ಅಪೂರ್ಣವಿರುವ ಕಾರಣ ಒಂದು ತಿಂಗಳು ಕಾಲಾವಕಾಶ ಕೊಡಿ, ನಂತರ ಎಲ್ಲ ಮಾಹಿತಿ ನೀಡುವುದಾಗಿ ತಿಳಿಸಿದರು.
ಈ ವೇಳೆ ಸದಸ್ಯರು ಇಚ್ಚಾಶಕ್ತಿ ಇಲ್ಲದಿದ್ದರೆ ಹೀಗೆ ಆಗುವುದು ಎಂದು ಅಸಮಧಾನ ವ್ಯಕ್ತಪಡಿಸಿದರು.
ಸದಸ್ಯ ಭಾಸ್ಕರ್ ಮಾತನಾಡಿ, ನಗರದಲ್ಲಿ ಅಗತ್ಯವಿರುವೆಡೆ ಸದಸ್ಯರು ಸೂಚಿಸುವ ರಸ್ತೆ ವಿಭಜಕಗಳನ್ನು ತೆರವುಗೊಳಿಸಿ. ಅದಕ್ಕಾಗಿ ನಗರಸಭೆ ಸದಸ್ಯರಿರುವ ಸಮಿತಿ ರಚಿಸುವಂತೆ ಒತ್ತಾಯಿಸಿದರು.
Also Read: BVA ಪದವಿ ಪ್ರವೇಶಾತಿಗೆ ಅರ್ಜಿ ಅಹ್ವಾನ
ಜೋಗಿಮಟ್ಟಿ ರಸ್ತೆಯ ದಾರುಕಾ ಬಡಾವಣೆಯಿಂದ ಜಟ್‌ಪಟ್ ನಗರದವರೆಗೂ ಡಿವೈಡರ್ ತೆರವುಗೊಳಿಸಬೇಕು. ತಿರುವು ಪಡೆಯುವಾಗ ವಾಹನಗಳೇ ಕಾಣಿಸುವುದಿಲ್ಲ ಎಂದು ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ನಸರುಲ್ಲಾ ಮಾತನಾಡಿ, ಜನರಿಗೆ ಅನುಕೂಲ ಆಗುವ ಕಡೆಗಳಲ್ಲಿ ಮಾತ್ರ ತೆರವಿಗೆ ಮುಂದಾದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ರಸ್ತೆ ವಿಭಜಕಗಳಲ್ಲಿ ಅವೈಜ್ಞಾನಿಕ ಮರಗಳನ್ನು ಹಾಕಲಾಗಿದೆ. ಮೊದಲು ಅವುಗಳನ್ನು ತೆರವುಗೊಳಿಸಿ ಎಂದು ಶ್ರೀನಿವಾಸ್ ಆಗ್ರಹಿಸಿದರು.
ಸದಸ್ಯ ದೀಪಕ್ ಮಾತನಾಡಿ, ಬಾಲಕರ ಪದವಿ ಪೂರ್ವ ಹಾಗೂ ಸೈನ್ಸ್ ಕಾಲೇಜು ಮುಂಭಾಗ ಡಿವೈಡರ್ ತೆರವುಗೊಳಿಸಬೇಕು. ಇಲ್ಲದಿದ್ದರೆ, ವಿಭಜಕ ಹಾರಲು ಹೋಗಿ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ:
ನಗರಸಭೆ ಸದಸ್ಯೆಯರಾದ ಪಿ.ಕೆ.ಮೀನಾಕ್ಷಿ, ಕೆ.ಮಂಜುಳಾ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಇದೆ. ಜನರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಇಂಜಿನಿಯರ್ ವಿರುದ್ಧ ಅಸಮಾಧಾನ ಹೊರಹಾಕಿದರು. ಪುಟ್‌ವಾಲ್ ಹಾಕಿಸುವಂತೆ ಕೇಳುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
Also Read: ಚಿತ್ರದುರ್ಗ RTO ಕಚೇರಿಯಲ್ಲಿ ಸಾರಿಗೆ ಅದಾಲತ್ | ಅಹವಾಲುಗಳು ಇದ್ದರೆ ಸಲ್ಲಿಸಿ..
ಸದಸ್ಯ ವೆಂಕಟೇಶ್ ದನಿಗೂಡಿಸಿ, ನನ್ನ ವಾರ್ಡ್‌ನಲ್ಲಿ ಟ್ಯಾಂಕ್ ಕೆಳಗಿನ ಪೈಪ್‌ಲೈನ್ ಮಾರ್ಗದ ವಾಲ್ ಲೀಕ್ ಆಗಿ ನೀರು ಪೋಲಾಗುತ್ತಿದೆ. ಬದಲಿಸುವಂತೆ ಅನೇಕ ಬಾರಿ ಹೇಳಿದರು ದುರಸ್ತೆಗೆ ಮುಂದಾಗಿಲ್ಲ ಎಂದು ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ಸದಸ್ಯರೊಂದಿಗೆ ಸಮನ್ವಯತೆ ಸಾಧಿಸಿ ವಾರ್ಡ್‌ಗಳಲ್ಲಿನ ಸಮಸ್ಯೆ ಬಗೆಹರಿಸುವಂತೆ ಸಿಬ್ಬಂದಿಗೆ ಸೂಚಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಸೇರಿದಂತೆ ಸದಸ್ಯರು, ಅಧಿಕಾರಿಗಳು ಇದ್ದರು.