ಗಾದ್ರಿಮಲೆ ಹೆಬ್ಬುಲಿ ಗಾದ್ರಿ ಪಾಲನಾಯಕ ಸ್ವಾಮಿಯ ಸಾಲು..ಸಾಲು ಎತ್ತಿನ ಗಾಡಿಗಳ ಮಿಂಚೇರಿ ಜಾತ್ರೆ ಕಣ್ತುಂಬಿಕೊಳ್ಳುವ ಕಾಲ ಸನಿಹವಾಗಿದೆ. ಐದು ವರ್ಷದ ಬಳಿಕ ಪುನಃ ಜಾತ್ರೆಗೆ ಸಿದ್ದತೆ ನಡೆದಿದ್ದು, ಡಿ.23 ರಿಂದ 28 ರವರೆಗೆ ಬುಡಕಟ್ಟು ಸಂಸ್ಕೃತಿಯ ವೈಭವ ಮೇಳೈಸಲಿದೆ.
ಕಿಲೋ ಮೀಟರ್ ಮಾರ್ಗದುದ್ದಕ್ಕೂ ಎತ್ತ ಕಣ್ಣಾಯಿಸಿದರೂ ಶೃಂಗಾರಗೊಂಡ ಎತ್ತಿನ ಗಾಡಿಗಳೇ ಕಣ್ಣಿಗೆ ರಾಚುತ್ತವೆ. ಈ ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನ ಕಾತುರದಿಂದ ಕಾಯುತ್ತಾರೆ. ಬೇಕೆಂದಾಗ ಇದನ್ನು ನೋಡಲು ಸಾಧ್ಯವಿಲ್ಲ. ಅದಕ್ಕಾಗಿ ಐದು ವರ್ಷ ಕಾಯಲೇಬೇಕು. ಆ ಅಮೃತ ಗಳಿಗೆ ಈಗ ಒದಗಿ ಬಂದಿದೆ. ಉತ್ಸವಕ್ಕೆ ಈಗಾಗಲೇ ದಿನಗಣನೆ ಪ್ರಾರಂಭವಾಗಿದೆ.
ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಮ್ಯಾಸ ನಾಯಕ ಸಮುದಾಯದವರು ತಮ್ಮ ಆರಾಧ್ಯ ದೈವ ಹಾಗೂ ಸಾಂಸ್ಕೃತಿಕ ವೀರ ಎಂದೇ ಖ್ಯಾತಿ ಗಳಿಸಿರುವ ಗಾದ್ರಿಮಲೆ ಹೆಬ್ಬುಲಿ ಗಾದ್ರಿ ಪಾಲನಾಯಕ ಸ್ವಾಮಿಯ ಹೆಸರಿನಲ್ಲಿ ನಡೆಸುವ ಆರು ದಿನಗಳ ಮಿಂಚೇರಿ ಯಾತ್ರೆಯ ಜಾತ್ರೆಯಲ್ಲಿ ನಾವು ಈ ವಿಶಿಷ್ಟ ಆಚರಣೆಯನ್ನು ಕಾಣಬಹುದು.
ಗ್ರಾಮದಿಂದ 40 – 50 ಕಿ.ಮೀ ದೂರದಲ್ಲಿರುವ ಸಿರಿಗೆರೆ ಗ್ರಾಮ ಹತ್ತಿರದ ಗಾದ್ರಿ ಪಾಲನಾಯಕನ ಸ್ಥಳಕ್ಕೆ ಹೋಗಿ ಎಡೆ ಅರ್ಪಿಸಿ, ಪೂಜೆ ಸಲ್ಲಿಸಿ ಬರುವುದು ಈ ಯಾತ್ರೆಯ ವಿಶೇಷ. ಬರುವಂಥ ಭಕ್ತರು ಒಂದು ದಿನದಲ್ಲೇ ಹಿಂತಿರುಗುವುದಿಲ್ಲ. ಎರಡು ದಿನಗಳ ಕಾಲ ಮಿಂಚೇರಿ ಗುಡ್ಡದಲ್ಲಿಯೇ ಬಿಡಾರ ಹೂಡುತ್ತಾರೆ. ಯಾತ್ರೆಗೆ ಸಾವಿರಾರು ಜನರು ತಮ್ಮ ಸಂಬಂಧಿಕರ ಜತೆಗೂಡಿ ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯದಂತೆ ಎತ್ತಿನ ಗಾಡಿ ಜತೆಗೆ ಇತ್ತೀಚೆಗೆ ಟ್ರ್ಯಾಕ್ಟರ್ ಮೂಲಕವೂ ಬರುತ್ತಾರೆ.
ಗಾದ್ರಿ ಪಾಲನಾಯಕ ಗೋ ಸಂರಕ್ಷಕ. ಆತನಿಗೆ ಕಂಚವ್ವ, ಕಾಮವ್ವರೆಂಬ ಇಬ್ಬರು ಪತ್ನಿಯರು. ಅಡವಿಯಲ್ಲಿ ಪಶುಪಾಲನೆ ಸಂದರ್ಭ ಹುಲಿಯೊಂದಿಗೆ ಅನೋನ್ಯ ಒಪ್ಪಂದದಿಂದಾಗಿ ಹುಲಿಮರಿಗಳನ್ನು ಹಸು ಕರುಗಳ ರೊಪ್ಪದಲ್ಲಿಯೇ ಬೀಡಲಾಗಿತ್ತು. ಒಮ್ಮೆ ಗಾದ್ರಿ ಪಾಲನಾಯಕನ ಭಾವ ಮೈದುನರಾದ ಚಿತ್ತಯ್ಯ, ಕಾಟಯ್ಯ ರೊಪ್ಪಕ್ಕೆ ಬರುತ್ತಾರೆ. ಯಾರೂ ಕಾಣದಿದ್ದಾಗ ರೊಪ್ಪದಲ್ಲಿದ್ದ ಹುಲಿ ಮರಿಯನ್ನು ಕೊಲ್ಲುತ್ತಾರೆ. ಇದರಿಂದ ಗಾದ್ರಿ ಪಾಲನಾಯಕ ವಚನ ಭ್ರಷ್ಟನಾದೆನೆಂದು ದುಃಖಿಸುತ್ತಾನೆ. ಕೊನೆಗೆ ಹುಲಿಯೊಂದಿಗೆ ಕಾದಾಡಿ ಹುಲಿ ಮತ್ತು ಪಾಲನಾಯಕ ಸಾವನ್ನಪ್ಪುತ್ತಾರೆ. ಆ ಸಮಾಧಿಗಳು ಇಂದಿಗೂ ಇವೆ. ಮ್ಯಾಸನಾಯಕ ಸಮುದಾಯ ಈ ಕಥೆಯನ್ನು ಈಗಲೂ ನಂಬಿಕೊಂಡು ಬಂದಿದ್ದು, ಜಾತ್ರೆಯನ್ನು ಆಚರಿಸುತ್ತಿದೆ.
ತಿಂಗಳ ಮುಂಚೆಯೇ ದೇಗುಲದಲ್ಲಿ ಸಭೆ ಸೇರಿ ಜಾತ್ರೆ ತಯಾರಿ ಕುರಿತು ನಿರ್ಧರಿಸಲಾಗಿದೆ. ಯಾತ್ರೆಗಾಗಿ ಸಜ್ಜೆ ರೊಟ್ಟಿ, ಗಾರ್ಗೆ, ಕರಜೀಕಾಯಿ, ಶೇಂಗಾ ಉಂಡೆ ಸೇರಿ ವಿವಿಧ ಬಗೆಯ ಖಾದ್ಯ ತಯಾರಿಗೆ ಸಿದ್ಧತೆ ನಡೆಸಿದ್ದಾರೆ. ಸ್ವಾಮಿಯ ದೇಗುಲದಿಂದ ಸುಮಾರು 10 ಸಾವಿರ ಮಂದಿ ಜಿಲ್ಲೆಯ ವಿವಿಧೆಡೆಯಿಂದ ಮಿಂಚೇರಿ ಯಾತ್ರೆಗೆ ಹೋಗುತ್ತಾರೆ. ಯಾತ್ರೆಗೆ ಹೋಗಿ ಬಂದ ನಂತರ ಮನಸ್ಸಿನಲ್ಲಿ ಅಂದುಕೊಂಡದ್ದು ಈಡೇರಿರುವ ಉದಾಹರಣೆ ಸಾಕಷ್ಟಿದ್ದು, ಆ ನಂಬಿಕೆ ಇಂದಿಗೂ ಮುಂದುವರೆದಿದೆ.
ಮಿಂಚೇರಿ ಯಾತ್ರೆಗೆ ಬಚ್ಚಬೋರನಹಟ್ಟಿ ಮಾರ್ಗವಾಗಿ ಗೋನೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೇಗುದ್ದು, ಮೇಗಳಹಟ್ಟಿ, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ಮದಕರಿಪುರ ಹಾಗೂ ಮಿಂಚೇರಿ ಪುರದವರೆಗೆ ನಡೆಯಲಿದ್ದು, ಆಯಾ ಗ್ರಾಮಗಳ ಗ್ರಾಮಸ್ಥರು ಭವ್ಯ ಸ್ವಾಗತ ನೀಡುವುದು ಸಂಪ್ರದಾಯ.