ಮುಖ್ಯ ಸುದ್ದಿ
ವಕೀಲ ಪ್ರೀತಂ ಮೇಲಿನ ಹಲ್ಲೆಗೆ ಖಂಡನೆ; ನ್ಯಾಯಾಲಯದ ಕಲಾಪದಿಂದ ಹೊರಗುಳಿದ ವಕೀಲರು
ಚಿತ್ರದುರ್ಗ ನ್ಯೂಸ್.ಕಾಂ
ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಚಿತ್ರದುರ್ಗದ ವಕೀಲರ ಸಂಘದ ನೇತೃತ್ವದಲ್ಲಿ ನೂರಾರು ವಕೀಲರು ಶನಿವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ಕೋರ್ಟ್ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಒನಕೆ ಓಬವ್ವ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಗಾಂಧಿ ವೃತ್ತ ತಲುಪಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಿದರು. ಬಳಿಕ ಅಲ್ಲಿಂದ ಪ್ರವಾಸಿ ಮಂದಿರ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಕೀಲರು ಜಮಾಯಿಸಿದರು.
ಇದನ್ನೂ ಓದಿ: ಪೂರ್ಣಿಮಾ–ಶ್ರೀನಿವಾಸ್‌ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಹೂಮಳೆಯ ಸ್ವಾಗತ
ಪೊಲೀಸರ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಬೇಕು. ಹಾಗೂ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಅಮಾನತು ಮಾಡಿದರೆ ಸಾಲದು ತಕ್ಷಣ ಅವರನ್ನು ಬಂಧಿಸಬೇಕು ಎಂದು ವಕೀಲರು ಆಗ್ರಹಿಸಿದರು.
ವಕೀಲರು ಸಮಾಜದ ಅಭಿರಕ್ಷಕರು, ಇವರನ್ನೇ ಪೊಲೀಸ್ ಇಲಾಖೆಯವರು ಹೀಗೆ ನಡಿಸಿಕೊಂಡರೆ, ಇನ್ನು ಸಾಮಾನ್ಯ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ವಕೀಲ ಸಮುದಾಯದಲ್ಲಿ ಮೂಡಿದೆ. ಯುವ ವಕೀಲನ ಮೇಲೆ ಹಲ್ಲೆ ನಡೆಸುವ ಮೂಲಕ ಪೊಲಿಸರು ಕಾನೂನಿಗೆ ಅಗೌರವ ತೋರಿದ್ದಾರೆ. ಹಾಗಾಗಿ ಪೊಲೀಸರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ವಕೀಲ ಪ್ರೀತಂಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮನವಿ ಸ್ವೀಕರಿಸಿದರು. ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಖಜಾಂಚಿ ಬಿ.ಇ.ಪ್ರದೀಪ್, ಜಂಟಿ ಕಾರ್ಯದರ್ಶಿ ಗಿರೀಶ್ ಬಿ. ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ದಾಸಪ್ಪ, ಎಸ್.ಕೆ.ಸುರೇಶ್, ಎಚ್.ಮೊಹಮದ್ ಇಮ್ರಾನ್, ಎನ್.ಹರೀಶ್, ಬಿ.ಎ.ರಾಜೀವ್, ಆರ್.ಧನಂಜಯ, ಎನ್.ಎಸ್.ವರುಣ, ಆರ್.ರವಿ, ಬಿ.ಎನ್.ರೂಪದೇವಿ, ಪಿ.ಶೀಲ, ಭಾರ್ಗವಿ ದ್ರಾವಿಡ್, ಹಿರಿಯ ವಕೀಲರಾದ ಫಾತ್ಯರಾಜನ್, ನೂರುಲ್ಲಾ ಹಸನ್, ಬೀಸ್ನಳ್ಳಿ ಜಯಣ್ಣ, ಹೆಚ್.ಓ.ಜಗದೀಶ್ ಗುಂಡೇರಿ, ಸುದರ್ಶನ್, ಬಿ.ಸಿ.ವೆಂಕಟೇಶ್‍ಮೂರ್ತಿ, ಕೆ.ಎನ್.ವಿಶ್ವನಾಥಯ್ಯ, ಎನ್.ಬಿ.ವಿಶ್ವನಾಥ್, ಪಿ.ಹನುಮಂತಪ್ಪ, ಮೆಹರೂಝ್‍ಬೇಗಂ, ಶ್ವೇತ, ಅನೀಸ್ ಫಾತಿಮ ಇದ್ದರು.