ರಾಜಕಾರಣಕ್ಕೆ ಮಾದರಿಯಾಗಿ ಬದುಕಿದ ದಿವಂಗತ ಮಾಜಿ ಮುಖ್ಯಮಂತ್ತಿ ಎಸ್.ನಿಜಲಿಂಗಪ್ಪ ಅವರ ಜೀವನ, ಬದುಕಿನ ಪಯಣ ವಿಶ್ವ ವಿದ್ಯಾಲಯದಲ್ಲಿ ಪಠ್ಯವಾಗಬೇಕು. ಈ ಮೂಲಕ ಯುವ ಪೀಳಿಗೆಗೆ ಅವರ ಆದರ್ಶಗಳನ್ನು ತಿಳಿಸುವ ಕಾರ್ಯವಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲ್ಲೂಕಿನ ಸೀಬಾರದ ‘ಪುಣ್ಯಭೂಮಿ’ಯಲ್ಲಿ ಭಾನುವಾರ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಎಸ್ಸೆನ್ ಅವರ 121ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನಿಜಲಿಂಗಪ್ಪ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ‘ಕರ್ನಾಟಕದ ಯಾವುದೇ ರಾಜಕರಣಿಗೂ ರಾಷ್ಟ್ರ ರಾಜಕಾರಣದಲ್ಲಿ ನಿಜಲಿಂಗಪ್ಪ ಅವರಿಗೆ ಸಿಕ್ಕಿದ ಗೌರವ ಸಿಕ್ಕಿಲ್ಲ. ಅಂತಹ ಸ್ಥಾನಮಾನ ಸಿಕ್ಕಿದೆ. ನಿಜಲಿಂಗಪ್ಪ ಅವರ ಬಗ್ಗೆ ಅಧ್ಯಯನ ನಡೆಸುವವರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.
‘ಜೀವನದಲ್ಲಿ ಅಧಿಕಾರ ಮುಖ್ಯ ಅಲ್ಲವೇ ಅಲ್ಲ, ಆದರ್ಶವೇ ಮುಖ್ಯ ಎಂದು ನಿಜಲಿಂಗಪ್ಪ ಕೊನೆಯ ಕ್ಷಣದವರೆಗೆ ಬದುಕಿದರು. ಅಂದಿನ ರಾಜಕಾರಣಕ್ಕೂ, ಇಂದಿನ ರಾಜಕಾರಣಕ್ಕೂ ಎಳ್ಳು ಕಾಳಷ್ಟು ಸಾಮ್ಯತೆ ಇಲ್ಲ. ಭ್ರಷ್ಟಾಚಾರದ ಸೋಂಕು ಅಂದಿನ ರಾಜಕಾರಣ ಇರಲಿಲ್ಲ’ ಎಂದರು.
‘ಕಾಲಕ್ರಮೇಣ ಮರೆಯುವುದು ಮನುಷ್ಯನ ಸ್ವಭಾವ ಆಗಿದೆ. ಆದ್ದರಿಂದ ಪದೇ ಪದೇ ಇಂತಹ ನಾಯಕರ ಸ್ಮರಣೆ ಆಗಬೇಕು. ಭ್ರಷ್ಟಾಚಾರ ರಹಿತ, ಕುಟುಂಬ, ಪರಿವಾರ ರಹಿತ ರಾಜಕಾರಣ ನಡೆದಾಗ ಮಾತ್ರ ನಿಜಲಿಂಗಲಿಪ್ಪ ಅವರಿಗೆ ನಿಜವಾದ ಗೌರವ ಸಲ್ಲುತ್ತದೆ’ ಎಂದು ತಿಳಿಸಿದರು.
‘ನಿಸ್ವಾರ್ಥ ಸೇವೆ ಸಲ್ಲಿಸಿದ ಕಾರಣಕ್ಕೆ ಅವರು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅದು ಅವರ ರಾಜಕೀಯ ಜೀವನವನ್ನು ತೋರಿಸುತ್ತದೆ. ನನ್ನ ತಾತ ನಿಜಲಿಂಗಪ್ಪ ಅವರ ಬಲಗೈ ಬಂಟನಂತೆ ಹಲವು ದಶಕಗಳ ಕಾಲ ಇದ್ದರು. ಹಾಗಾಗಿ ಹತ್ತಿರದಿಂದ ನೋಡಿದ್ದೇನೆ. ಶುದ್ಧ ರಾಜಕಾರಣಕ್ಕೆ ನನಗೆ ಪ್ರೇರಣೆಯಾಗಿದ್ದಾರೆ’ ಎಂದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶ್ರೀಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ನಿಜಲಿಂಗಪ್ಪ ಅವರ ರಾಜಕಾರಣದ ಅವಶ್ಯಕತೆ ಇಂದಿನ ಭಾರತಕ್ಕೆ ಅಗತ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಆಗಿದ್ದರೂ, ಜೀವನವಿಡೀ ಅವರ ಮನೆ ಮುಂದೆ ಒಂದು ಸ್ವಂತ ಕಾರು ನಿಲ್ಲಲಿಲ್ಲ ’ ಎಂದು ತಿಳಿಸಿದರು.
‘ಮಧ್ಯ ಕರ್ನಾಟಕದ ಚಿತ್ರದುರ್ಗಕ್ಕೆ ಅವರು ಏನು ಮಾಡಲಿಲ್ಲ ಎನ್ನುವ ಆಪಾದನೆ ಇದೆ. ಹಾಗೇ ನೋಡಿದರೆ ಅವರ ಸ್ವಂತ ಜೀವನಕ್ಕೂ ಏನೂ ಮಾಡಿಕೊಳ್ಳಲಿಲ್ಲ. ಅಧಿಕಾರದ ಅವಧಿಯಲ್ಲಿ ನನ್ನ ಊರು, ಹುಟ್ಟೂರು ಎಂದು ಚಿಂತಿಸಿದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು’ ಎಂದು ಸ್ಮರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಕಾಲದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಅವರ ಪರಿಶುದ್ಧ ರಾಜಕಾರಣ ಇಂದೂ ಕಷ್ಟಸಾಧ್ಯ. ಆದರೂ, ಮುಂದಿನ ಪೀಳಿಗೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು’ ಎಂದರು.
‘ಈ ನೆಲಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಆಗಬೇಕು ಎನ್ನುವುದು ಅವರ ಕನಸಾಗಿತ್ತು. ಅಂದು ಕೇಂದ್ರ ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರನ್ನು ಜಿಲ್ಲೆಗೆ ಆಹ್ವಾನಿಸಿ ಯೋಜನೆಯನ್ನು ಘೋಷಣೆ ಮಾಡಿಸಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.
ಎಸ್.ಎನ್.ಮೆಮೋರಿಯಲ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಚ್.ಹನುಮಂತಪ್ಪ ಮಾತನಾಡಿ, ‘ಜನಪ್ರತಿನಿಧಿಗಳಿಗೆ ಶಿಕ್ಷಣ ಕೊಡುವುದು ನಮ್ಮ ಉದ್ದೇಶವಾಗಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ತರಬೇತಿ ಆಗಬೇಕು. ಇದಕ್ಕಾಗಿ ಸಿದ್ದರಾಮಯ್ಯ ₹ 2 ಕೋಟಿ ಅನುದಾನ ನೀಡಿದ್ದಾರೆ. ಈಗಾಗಲೇ ₹ 1 ಕೋಟಿಯಲ್ಲಿ ಜಮೀನು ಖರೀಧಿಸಿದ್ದೇವೆ’ ಎಂದು ಹೇಳಿದರು.
ಪುಣ್ಯಭೂಮಿ ಆವರಣದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಟ್ರಸ್ಟ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡ ವಿಜಯ ಕುಮಾರ್, ಟ್ರಸ್ಟ್ ನಿರ್ದೇಶಕ ಕೆಇಬಿ ಷಣ್ಮುಖಪ್ಪ, ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ನಾಗರಾಜ್ ಸಂಗಂ, ವೀರೇಶ್ ಇದ್ದರು.