ಕ್ರೈಂ ಸುದ್ದಿ
ಮದುವೆ ಬಸ್ ಪಲ್ಟಿ ಪ್ರಕರಣ | ಸಂಕಟದ ನಡುವೆಯೇ ಮುಗಿದ ಮದುವೆ | ಚಾಲಕನ ವಿರುದ್ಧ ದೂರು ದಾಖಲು
ಚಿತ್ರದುರ್ಗ ನ್ಯೂಸ್.ಕಾಂ: ಮದುವೆ ಅಂದ್ರೆ ಸಂತೋಷ. ಮದುವೆಗೆ ತಿಂಗಳ ಮೊದಲೇ ಮನೆ ಮಂದಿ, ಬಂಧು ಬಳಗದಲ್ಲೆಲ್ಲಾ ಸಂಭ್ರಮ ಮನೆ ಮಾಡಿರುತ್ತದೆ. ಅಂಥದ್ದೇ ಸಡಗರ, ಸಂಭ್ರಮದಲ್ಲಿ ಎಲ್ಲರೂ ತಯಾರಾಗಿ ಬಸ್ಸು ಹತ್ತಿ ಮದುವೆಗೆ ಹೊರಟಿದ್ದರು.
ಬಸ್ಸು ಹೊರಟು ಅರ್ಧ ಗಂಟೆ ಕಳೆದಿರಬಹುದು. ಅತ್ತೆ, ಮಾವ, ಅಣ್ಣ, ತಮ್ಮ, ಅಜ್ಜ, ಅಜ್ಜಿ, ನೆಂಟ, ಅಣ್ತಮ್ಮ ಹೀಗೆ ಮಾತುಕತೆಗಳ ಓಘ ಬಸ್ಸಿನ ಕಿಟಕಿಗಳಾಚೆಯೂ ಅನುರಣಿಸುತ್ತಿತ್ತು.
ಇದನ್ನೂ ಓದಿ: ಮದುವೆಗೆ ಹೊರಟಿದ್ದ ಬಸ್ ಪಲ್ಟಿ
ಆದರೆ, ಈ ಸಂಭ್ರಮದ ಮೇಲೆ ಅದ್ಯಾವ ಕಟ್ಟೆ ಕಣ್ಣು ಬಿತ್ತೋ ಗೊತ್ತಿಲ್ಲ. ಬಸ್ಸು ಪಲ್ಟಿಯಾಗಿತ್ತು. ನೋಡು ನೋಡುತ್ತಿದ್ದಂತೆ ಹಾರಾಟ, ಚೀರಾಟ, ಆಕ್ರಂಧನ, ಮಕ್ಕಳ ಅಳು, ಕೈ ಕಾಲು ಮುರಿದ ನೋವು ಎಲ್ಲವೂ ಕ್ಷಣಮಾತ್ರದಲ್ಲಿ ನಡೆದು ಹೋಗಿತ್ತು.
ಯಾರು ಬದುಕಿದ್ದಾರೋ, ಯಾರು ಸತ್ತಿದ್ದಾರೋ ಎನ್ನುವ ಅನುಮಾನ ಮೂಡುವಂತಹ ಪರಿಸ್ಥಿತಿ.
ಹೊಸದುರ್ಗ ತಾಲೂಕಿನ ಚಿಕ್ಕಯಗಟಿ ಗ್ರಾಮದಿಂದ ದಾವಣಗೆರೆಗೆ ತೆರಳುತ್ತಿದ್ದ ಮದುವೆಗೆ ದಿಬ್ಬಣದ ಬಸ್ಸು ಹೊಳಲ್ಕೆರೆ-ಹೊಸದುರ್ಗ ನಡುವೆ ಆವಿನಹಟ್ಟಿ-ಉಗಣೆಕಟ್ಟೆ ಬಳಿ ಚಾಲಕನ ಅಜಾಗರೂಕತೆಯಿಂದ ಪಲ್ಟಿಯಾದ ಮದುವೆಯ ಕಥೆಯಿದು.
ಅದೃಷ್ಟವಶಾತ್ ಬಸ್ಸಿನಲ್ಲಿ ವಧು ಇರಲಿಲ್ಲ. ಅವರು ಮತ್ತೊಂದು ವಾಹನದಲ್ಲಿ ಮುಂದೆ ಹೋಗಿದ್ದರಿಂದ ಮದುವೆ ನೆರವೇರಿದೆ. ಮದುವೆಗೆ ಬಂದು ಹರಸಬೇಕಾದ ನೆಂಟರು, ಬಂಧುಗಳೆಲ್ಲಾ ಆಸ್ಪತ್ರೆ ಸೇರಬೇಕಾಯಿತಲ್ಲ ಎನ್ನುವ ಕೊರಗಿನಲ್ಲೇ ಮದುವೆ ಮುಗಿದು ಹೋಗಿದೆ.
ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಶಾಂತವೀರ ಸ್ವಾಮೀಜಿಗೆ ಆಹ್ವಾನ
ಬಸ್ಸು ಅಪಘಾತವಾದ ರೀತಿ ನೋಡಿದ ಎಲ್ಲರದ್ದೂ ಒಂದೇ ಉದ್ಘಾರ ದೇವರು ದೊಡ್ಡವನು. ಯಾಕಂದ್ರೆ, ಅಪಘಾತದ ಭೀಕರತೆ ಹಾಗಿದೆ.
ಬಸ್ಸಿನ ಡೋರ್ ಅಡಿಯಲ್ಲಿ ಸಿಲುಕಿದ್ದ ಕಾಲ್ಕೆರೆ ಗ್ರಾಮದ 30 ವರ್ಷದ ಮಂಜುನಾಥ್ ಮಾತ್ರ ಈ ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.
ಖಾಸಗಿ ಬಸ್ಸನ್ನು ಮದುವೆಗೆ ಬಾಡಿಗೆ ಪಡೆದು ಹೋಗುತ್ತಿದ್ದು, ಇದರಲ್ಲಿ ಸುಮಾರು 70 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಸ್ಸಿನಲ್ಲಿ ವಧುವಿನ ಬೇರೆ ಬೇರೆ ಊರುಗಳ ಸಂಬಂಧಿಕರು ಇದ್ದರು.
ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿಗೆ ಆಹ್ವಾನ
ಅಪಘಾತದಲ್ಲಿ ಸುಮಾರು 50ಕ್ಕಿಂತ ಹೆಚ್ಚು ಜನ ಗಾಯಗೊಂಡಿದ್ದಾರೆ. ಕೆಲವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಅವರನ್ನು ದಾವಣಗೆರೆ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ. ಸಣ್ಣ ಪುಟ್ಟ ಗಾಯವಾದವರು ಹೊಳಲ್ಕೆರೆ ಹಾಗೂ ಚಿತ್ರದುರ್ಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇಂದು ಸಂಭ್ರಮದಿಂದ ಮದುವೆ ಮಾಡಬೇಕಾದ ಸಂಬಂಧಿಕರೆಲ್ಲಾ ಅಪಘಾತದ ಕಾರಣಕ್ಕೆ, ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್, ಎಕ್ಸ್‍ರೇ, ಇಂಜಕ್ಷನ್ನು, ಮಾತ್ರೆ ಎಂದು ಓಡಾಡುತ್ತಿದ್ದಾರೆ.
ಘಟನೆಯಲ್ಲಿ ಬಸ್ ಚಾಲಕನಿಗೂ ಗಾಯಗಳಾಗಿವೆ. ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಸ್ ಓಡಿಸಿದ್ದರಿಂದ ಚಾಲಕ ಸಂತೋಷ್ ಮೇಲೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.