
CHITRADURGA NEWS | 09 JULY 2024
ಚಿತ್ರದುರ್ಗ: ಡೆಂಗ್ಯೂ ಪತ್ತೆ ಪರೀಕ್ಷೆಗೆ ನಿಗಧಿಗಿಂತ ಹೆಚ್ಚಿನ ದರ ವಿಧಿಸಿದರೆ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‌ಗಳಲ್ಲಿ ಡೆಂಗ್ಯೂ ಪತ್ತೆ ಪರೀಕ್ಷೆಗೆ ಏಕರೂಪ ದರ ನಿಗದಿ ಪಡಿಸಿದೆ. ಇದರ ಆಧಾರದಲ್ಲಿ ಡೆಂಗ್ಯೂ ಎಲಿಸಾ ಎನ್‌ಎಸ್ 1 ಹಾಗೂ ಎಲಿಸಾ ಐಜಿಎಂ ಪರೀಕ್ಷೆಗೆ ತಲಾ ₹ 300, ಎನ್‌ಎಸ್ 1, ಐಜಿಎಂ ಮತ್ತು ಐಜಿಜಿ ರ‍್ಯಾಪಿಡ್ ಕಾರ್ಡ್ ಪರೀಕ್ಷೆಗೆ ₹ 250 ಮಾತ್ರ ಪಡೆಯಬೇಕು ಎಂದು ಸೂಚಿಸಿದ್ದಾರೆ.
2023ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 377 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ 2024ರಲ್ಲಿ ಜುಲೈ ವೇಳೆಗೆ 275 ಪ್ರಕರಣಗಳು ಧೃಡ ಪಟ್ಟಿರುವುದು ಕಳವಳಕಾರಿಯಾಗಿದೆ. ಡೆಂಗ್ಯೂ ಪ್ರಕರಣಗಳು ನಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಎಲ್ಲಾ ನಗರ ಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ನಾಲೆ ಹಾಗೂ ಗ್ರಾಮಗಳಲ್ಲಿಯೂ ಚರಂಡಿಗಳ ಸ್ವಚ್ಛತೆ ಕೈಗೊಳ್ಳಬೇಕು.
ಡೆಂಗ್ಯೂ ಹರಡುವ ಸೊಳ್ಳೆ ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ನಡೆಸುವುದರಿಂದ ಪ್ರತಿ ಮನೆಗಳಿಗೂ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜೊತೆಗೆ ವಿವಿಧ ಇಲಾಖೆಗಳು ಸಹ ತಪ್ಪದೇ ಕೈಜೋಡಿಸಬೇಕು. ನಗರ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಕೈಗೊಳ್ಳುವ ಲಾರ್ವ ನಾಶದ ಕಾರ್ಯಕ್ರಮಕ್ಕೆ ನಗರ ಸಭೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಭಾಗವಹಿಸಬೇಕು.
ಕ್ಲಿಕ್ ಮಾಡಿ ಓದಿ: ಆತಂಕ ಸೃಷ್ಟಿಸಿದ ಡೆಂಗ್ಯೂ | ಕೋವಿಡ್ ಮಾದರಿಯಲ್ಲಿ ನಿಯಂತ್ರಣಕ್ಕೆ ಸಜ್ಜು
ಗಣಿ ಇಲಾಖೆ ಅಧಿಕಾರಿಗಳು ಕಲ್ಲು ಕ್ವಾರಿಗಳಲ್ಲಿ ಲಾರ್ವಾ ನಾಶದ ಕಾರ್ಯ ಕೈಗೊಳ್ಳಬೇಕು. ಎಲ್ಲಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆಯೇ ಅಂತಹ ಪ್ರದೇಶಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಂದ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡು, ಲಾರ್ವಾ ಸಮೀಕ್ಷೆ ಮತ್ತು ಜ್ವರ ಪೀಡಿತರ ಸಮೀಕ್ಷೆ ನಡೆಸಿ, ವರದಿ ಪಡೆದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
ಮೀನುಗಾರಿಕೆ ಇಲಾಖೆಯಿಂದ ವಾಣಿ ವಿಲಾಸ ಸಾಗರ ಮತ್ಸ್ಯ ಪಾಲನ ಕೇಂದ್ರದಲ್ಲಿ ಸೊಳ್ಳೆ ಲಾರ್ವಾಹಾರಿಗಳಾದ ಗಪ್ಪಿ ಹಾಗೂ ಗಾಂಬೂಸಿಯಾ ಮೀನು ಮರಿಗಳನ್ನು ಉತ್ಪತ್ತಿ ಮಾಡಿ ಆರೋಗ್ಯ ಇಲಾಖೆಗೆ ನೀಡಬೇಕು ಎಂದು ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
