CHITRADURGA NEWS | 30 SEPTEMBER 2026
ಚಿತ್ರದುರ್ಗ: ಶರಣಸಂಸ್ಕೃತಿ ಉತ್ಸವ-2026ರ ಅಂಗವಾಗಿ ಅ.17ರಂದು ಶ್ರೀಮಠದ ಅನುಭವ ಮಂಟಪದಲ್ಲಿ ಏಕಕಾಲದಲ್ಲಿ 10 ಸಾವಿರ ಜನರಿಂದ ನಡೆಯಲಿರುವ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದ ಪೂರ್ವಾಭ್ಯಾಸಕ್ಕೆ ಚಾಲನೆ ದೊರೆಯಿತು.
ಇದನ್ನೂ ಓದಿ: ಅಂಗಾರಕ ಸಂಕಷ್ಟ | ಸಿದ್ಧಿ ವಿನಾಯಕನಿಗೆ ವಿಶೇಷ ಪೂಜೆ
ಚಿತ್ರದುರ್ಗ ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿಶ್ವವಿದ್ಯಾಲಯದ ವತಿಯಿಂದ ಸರ್ವ ಸಮಾಜ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಅ.14ರಿಂದ 22ರವರೆಗೆ ಶರಣಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. ಇದರ ಅಂಗವಾಗಿ ಅನುಭವ ಮಂಟಪದಲ್ಲಿ ನಡೆದ ವಚನ ಗಾಯನ ತಾಲೀಮಿನಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಪೂರ್ವಾಭ್ಯಾಸದ ನೇತೃತ್ವ ವಹಿಸಿದ್ದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ವಚನಗಳು ಅನರ್ಘ್ಯ ರತ್ನಗಳಾಗಿದ್ದು, ಅವುಗಳ ಸಾರವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ವಚನಗಳು ನಡೆ-ನುಡಿಗಳ ಅನುಭವದ ಸಾರಾಮೃತವಾಗಿದ್ದು, ಅವುಗಳನ್ನು ಮನನ ಮಾಡುವ ಮೂಲಕ ಶರಣರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದರು.
ಶರಣಸಂಸ್ಕೃತಿ ಉತ್ಸವದ ಆಶಯದಂತೆ ಕಳೆದ ವರ್ಷದಿಂದ ಸಾಮೂಹಿಕ ವಚನ ಗಾಯನದ ಪ್ರಯತ್ನ ನಡೆಸಲಾಗುತ್ತಿದೆ. ಜಿಲ್ಲೆಯ ವಿವಿಧ ಭಾಗಗಳ ಆಸಕ್ತರನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವದಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಹ್ಯಾಂಡಲ್ ಬಿಟ್ಟು ಸ್ಟಂಟ್ ಮಾಡಿ ರೀಲ್ಸ್ ಮಾಡಿದವನ ವಿರುದ್ಧ ದೂರು ದಾಖಲು
ದಾವಣಗೆರೆಯಲ್ಲಿ ಸೆ.30ರಂದು ಸಂಜೆ 6 ಗಂಟೆಗೆ ಲಿಂಗಾಯತ ಮಠಾಧೀಶರ ಒಕ್ಕೂಟದ ವತಿಯಿಂದ ‘ವಚನ ನಾದ’ ಹೆಸರಿನಲ್ಲಿ ಸಾಮೂಹಿಕ ವಚನ ಗಾಯನ ಆಯೋಜಿಸಲಾಗಿದೆ. ಇದರಲ್ಲಿ ಮಕ್ಕಳಿಂದ ಹಿಡಿದು 78–80 ವರ್ಷ ವಯೋಮಾನದ ಹಿರಿಯರವರೆಗೂ ಭಾಗವಹಿಸುತ್ತಿದ್ದು, ಚಿತ್ರದುರ್ಗದ ಜನರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಖ್ಯಾತ ಹಿನ್ನೆಲೆ ಗಾಯಕ ಕೆ.ಎಸ್. ಅಶ್ವಥ್ ಅವರ ನಿರ್ದೇಶನ ಹಾಗೂ ಸ್ವರ ಸಂಯೋಜನೆಯಲ್ಲಿ ಮೂಡಿಬಂದ ‘ಕೂಡಲಸಂಗಮದೇವ’ ಧ್ವನಿಸುರಳಿಯ ಆಯ್ದ 32 ವಚನಗಳನ್ನು ಹೆಸರಾಂತ ಗಾಯಕ ಕೆ. ಯುವರಾಜ್ ಅವರು ಹೇಳಿಕೊಡುವ ಮೂಲಕ ತಾಲೀಮಿಗೆ ಚಾಲನೆ ನೀಡಿದರು.
ಸಾಮೂಹಿಕ ವಚನ ಗಾಯನ ಯಶಸ್ವಿಯಾಗುವ ವಿಶ್ವಾಸವಿದ್ದು, ವಚನಗಳನ್ನು ಹೇಳಿಕೊಡಲು ಅನುಭವಿ ತಂಡವಿರುವುದರಿಂದ ಯಾವುದೇ ಸಮಸ್ಯೆಯಾಗದು ಎಂದು ಕೆ. ಯುವರಾಜ್ ಹೇಳಿದರು.
ಇದನ್ನೂ ಓದಿ: ರಾಜ್ಯದ ವಿವಿಧ ಮಠಾಧೀಶರಿಂದ ತಿರುಮಲ ದರ್ಶನ
ಕಾರ್ಯಕ್ರಮದಲ್ಲಿ ನಗರದ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಎಸ್‌ಜೆಎಂ ವಿದ್ಯಾಪೀಠದ ಶಾಲಾ-ಕಾಲೇಜುಗಳ ಸಿಬ್ಬಂದಿ ಭಾಗವಹಿಸಿದ್ದರು. ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರಿಗೆ ಇಳಕಲ್ ಸೀರೆ ಹಾಗೂ ಪುರುಷರಿಗೆ ರಾಮರಾಜ್ ವಸ್ತ್ರಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುವುದು ಎಂದು ತಿಳಿಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

