CHITRADURGA NEWS | AUGUST 2025
ಹೊಳಲ್ಕೆರೆ: ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ಶುಕ್ರವಾರ ನಡೆದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 31ನೇ ಸ್ಮರಣೋತ್ಸವ ಹಾಗೂ ಚಿನ್ಮೂಲಾದ್ರಿ ಚಿತ್ಕಳೆ ಪರಿಷ್ಕೃತ ಮತ್ತು ವಿಸ್ತತ ಆವೃತ್ತಿಯ ಲೋಕಾರ್ಪಣೆ ಸಮಾರಂಭದಲ್ಲಿ ಗಣ್ಯರು, ಮಠಾಧೀಶರು ಭಾಗವಹಿಸಿದ್ದರು.
ಇದನ್ನೂ ಓದಿ: ಆಗಸ್ಟ್ 10ರಂದು ಎಸ್.ನಿಜಲಿಂಗಪ್ಪ ಪುಣ್ಯಸ್ಮರಣೆ | ಬೌದ್ಧ ಭಿಕ್ಕುಗಳಿಂದ ಪುಷ್ಪನಮನ
ಈ ವೇಳೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂಟಿಕಂಬದ ಮುರುಘಾಮಠ ಕ್ಷೇತ್ರದಲ್ಲಿ ಲಿಂಗೈಕ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಕಂಡ ಶಾಂತತೆ ಇಂದಿಗೂ ಅದೇ ರೀತಿ ಮುಂದುವರಿದಿದೆ.
ಪೂಜ್ಯರು ಸುಮಾರು 30ವರ್ಷ ಕಾಲ ಪೀಠಾಧ್ಯಕ್ಷರಾಗಿ ಭಕ್ತಸಮೂಹಕ್ಕೆ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಸಮಾಜ ಕಟ್ಟುವ, ದಾಸೋಹ ವ್ಯವಸ್ಥೆ ಕಲ್ಪಿಸುವ ಮೂಲಕ ಹತ್ತು ಹಲವು ಕ್ಷೇತ್ರಗಳ ಮೂಲಕ ಸಮಾಜೋಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಿ ನಾಡಿನಾದ್ಯಂತ ಭಕ್ತಸಮೂಹವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಶ್ರೀಗಳು ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದ ಫಲವಾಗಿ ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯಲು ಸಹಕಾರಿಯಾಗಿದೆ. ಅಂತಹ ಮಹಾನ್ ಚೇತನ ಕುರಿತು ಚಿನ್ಮೂಲಾದ್ರಿ ಚಿತ್ಕಳೆ ಕೃತಿ ಬಿಡುಗಡೆಯಾಗಿದೆ. ಇದು ಪ್ರತಿಯೊಂದು ಗ್ರಂಥಾಲಯ, ಶಿಕ್ಷಣಸಂಸ್ಥೆಗಳಲ್ಲಿ, ಮನೆ-ಮನೆಗಳಲ್ಲಿ ಇರುವಂತಾದರೆ ಅವರ ಆದರ್ಶ ನಿಲುವುಗಳನ್ನು ತಿಳಿದು ನಡೆಯಲು ಸಹಕಾರಿಯಾಗುತ್ತದೆ ಎಂದರು.
ಇದನ್ನೂ ಓದಿ: ಆ.16ರ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ಮಾಡುವಂತೆ ಮಾದಿಗ ಮಹಾಸಭಾ ಒತ್ತಾಯ
ಹೊಳಲ್ಕೆರೆ ಮಾಜಿ ಶಾಸಕ ಪಿ.ರಮೇಶ್ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮಿಗಳವರ ಜೀವನಶೈಲಿ ಪ್ರಸ್ತುತ ಜನಮಾನ್ಯರಲ್ಲಿ ಆಳವಾಗಿ ಬೇರೂರಿದೆ. ಶ್ರೀಗಳು ಎಲ್ಲಿ ಜನ ಬಡತನದ ಜೀವನ ನಡೆಸುತ್ತಿದ್ದರೋ ಅಂಥವರನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಿದರು. ಬಡವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿದರು.
ಶಿಕ್ಷಣ ಎಲ್ಲಿ ವೃದ್ಧಿಯಾಗುತ್ತದೋ ಅಲ್ಲಿ ಸಮಾಜದ ಏಳಿಗೆಯಾಗುತ್ತದೆ ಎಂದು ಆಲೋಚಿಸಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು.
ಶ್ರೀಗಳು ಅನೇಕರಿಗೆ ಲಿಂಗದೀಕ್ಷೆ ನೀಡಿದವರಾಗಿದ್ದಾರೆ. ಕಾಯಕ ಸಂಸ್ಕೃತಿಯ ಮೂಲಕ ಬಸವಾದಿ ಶರಣರು 12ನೇ ಶತಮಾನದಲ್ಲಿ ಶ್ರಮಿಸಿದರೆ ಅವರ ಹಾದಿಯಲ್ಲೇ ಕಾಯಕಯೋಗಿಯಾಗಿ ದುಡಿದಂತವರಾಗಿದ್ದಾರೆ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು. ಅವರು ಹೊಳಲ್ಕೆರೆಯಲ್ಲಿ ಐಕ್ಯವಾಗುವುದರ ಮೂಲಕ ಈ ಕ್ಷೇತ್ರವನ್ನು ಹೊಳೆವಕೆರೆಯನ್ನಾಗಿಸಿ ಇತಿಹಾಸದ ಪುಟಗಳಲ್ಲಿ ಉಳಿಯುವಂತೆ ಮಾಡಿದ್ದಾರೆ ಎಂದರು.

ಆಡಳಿತ ಮಂಡಳಿ ಸದಸ್ಯರಾದ ಡಾ.ಪಿ.ಎಸ್.ಶಂಕರ್ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮಿಗಳು ಜನರಲ್ಲಿ ಶಿಕ್ಷಣ ಜ್ಞಾನ ತುಂಬಲು ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಅನೇಕ ಶಾಲಾಕಾಲೇಜುಗಳನ್ನು ಸ್ಥಾಪನೆ ಮಾಡಿ ಸಾರ್ವಜನಿಕರ ಏಳಿಗೆಗೆ ಶ್ರಮಿಸಿದವರು. ಅಂದು ಅವರು ಹಾಕಿದ ಅಡಿಪಾಯದಿಂದಾಗಿ ಇಂದು ಶ್ರೀಮಠವು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.
ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮಿಗಳು ನಾಡಿನ ಬಹುದೊಡ್ಡ ಸಂಸ್ಥೆಯನ್ನು ಬೆಳೆಸಿದಂತಹವರಾಗಿದ್ದಾರೆ. ಚಿತ್ರದುರ್ಗ ಮುರುಘಾಮಠವು ಒಂದು ಜಾತಿಗೆ ಸೀಮಿತವಾಗಿದ್ದಲ್ಲ. ಅಂದಿನಿಂದಲೂ ಎಲ್ಲಾ ಸಮುದಾಯದವರಿಗೂ ಸಹಕಾರಿಯಾಗಿ ಬೆಳೆದುಬಂದಿದೆ ಎಂದು ಹೇಳಿದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಶ್ರೀಗಳ ಸ್ಮರಣೋತ್ಸವದ ನಿಮಿತ್ತ ಹೊಸ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಭೂಮಿಪೂಜೆ
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಚಿನ್ಮೂಲಾದ್ರಿ ಚಿತ್ಕಳೆ ಗ್ರಂಥದಲ್ಲಿ ಮಲ್ಲಿಕಾರ್ಜುನ ಜಗದ್ಗುರುಗಳ ಚಿತ್ರಣವನ್ನು ಕಣ್ತುಂಬಿ ಬರುವಂತೆ ರಚಿಸಲಾಗಿದೆ. ಇಡೀ ರಾಜ್ಯದಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು ಮುರುಘಾಮಠದ ಕೀರ್ತಿಯನ್ನು ಎತ್ತಿಹಿಡಿದವರಾಗಿದ್ದಾರೆ. ಶ್ರೀಗಳು ತಮ್ಮ ಲೀಲಾವಿಶ್ರಾಂತಿ ಪಡೆಯಲು ಹೊಳಲ್ಕೆರೆ ಆಯ್ಕೆ ಮಾಡಿಕೊಂಡಿರುವುದು ನಮ್ಮ ಈ ತಾಲ್ಲೂಕಿನ ಜನತೆಯ ಪುಣ್ಯ ಎಂದರು.
ಚಿನ್ಮೂಲಾದ್ರಿ ಚಿತ್ಕಳೆ ಬೃಹತ್ ಗ್ರಂಥದ ಪ್ರಧಾನ ಸಂಪಾದಕ ಪ್ರೊ. ಲಕ್ಷ್ಮಿ ಣ್ ತೆಲಗಾವಿ ಮಾತನಾಡುತ್ತ, ಮೊದಲನೇ ಆವೃತ್ತಿಯ 2000 ಪ್ರತಿಗಳು ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಖಾಲಿಯಾದವು. ಆದರೆ ಶ್ರೀಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆತಾಗ ಅದನ್ನು 2ನೇ ಆವೃತ್ತಿಯಲ್ಲಿ ಪ್ರಕಟಿಸಿ ಇಂದು ಬಿಡುಗಡೆಗೊಳಿಸಲಾಗಿದೆ.
ಈ ಗ್ರಂಥದಲ್ಲಿ ಶ್ರೀಗಳ ಕುರಿತು ಮಾಹಿತಿಯಿದ್ದು ಭಕ್ತರು, ಮಠಾಧೀಶರು, ಸಂಶೋಧಕ ಸಾಧಕರಿಗೆ, ಸಾರ್ವಜನಿಕರಿಗೆ ತಲುಪಲು ಅನೇಕರು ಶ್ರಮ ವಹಿಸಿದ್ದಾರೆ. 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶ್ರೀಗಳ ಮಾಹಿತಿಯನ್ನು ಹೊರತರುವಲ್ಲಿ ಆಡಳಿತ ಮಂಡಳಿಯವರ ಸಹಕಾರ ಪೂರಕವಾಗಿತ್ತು. ಮುಂದಿನ 32ನೇ ವರ್ಷದ ಸ್ಮರಣೋತ್ಸವದಲ್ಲಿ ಇನ್ನೊಂದು ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದರು.
ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಗಳು, ಡಾ.ಬಸವಕುಮಾರ ಸ್ವಾಮಿಗಳು ಮಾತನಾಡಿದರು.
ಇದನ್ನೂ ಓದಿ: ಆ.9 ರಂದು ಬುರುಜನಹಟ್ಟಿ ಗರಡಿಮನೆಯಲ್ಲಿ ಮಟ್ಟಿ ಪೂಜಾ ಮಹೋತ್ಸವ
ಇದೇ ಸಂದರ್ಭದಲ್ಲಿ ಲಕ್ಷ್ಮಿ ಣ್ ತೆಲಗಾವಿ ಪ್ರಧಾನ ಸಂಪಾದಕತ್ವ, ಕೆ.ಎಲ್. ರಾಜಶೇಖರ್ ಸಂಪಾದಕತ್ವದಲ್ಲಿ ಹೊರತಂದಿರುವ ಚಿನ್ಮೂಲಾದ್ರಿ ಚಿತ್ಕಳೆ ಪರಿಷ್ಕೃತ ಮತು ವಿಸ್ತತ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮ ಮುನ್ನ ಶಿವಯೋಗಿ ಸಿ. ಕಳಸದ ಅವರು ಬಸವತತ್ತ್ವ ಧ್ಯಜಾರೋಹಣ ನೆರವೇರಿಸಿದರು. ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಇದ್ದರು.
ಈ ಸಂದರ್ಭದಲ್ಲಿ ಶ್ರೀ ರುದ್ರಮುನಿ ಸ್ವಾಮಿಗಳು ಕೊಡ್ಲಿಪೇಟೆ, ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಗುರುಮಠಕಲ್, ಶ್ರೀ ಬಸವಲಿಂಗಮೂರ್ತಿ ಸ್ವಾಮಿಗಳು ಉಳವಿ, ಶರಣೆ ಸತ್ಯಕ್ಕ ಬೀದರ್, ಬೈರಮಂಗಲ ರಾಮೇಗೌಡ, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮಹಡಿ ಶಿವಮೂರ್ತಿ, ಶ್ರೀ ಮಹಾಲಿಂಗ ಸ್ವಾಮಿಗಳು ತಂಗನಹಳ್ಳಿ, ಶ್ರೀ ಬಸವ ಭಂಗೇಶ್ವರ ಸ್ವಾಮಿಗಳು, ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು, ಶ್ರೀ ಮರುಳಶಂಕರ ಸ್ವಾಮಿಗಳು, ಶ್ರೀ ಪೂರ್ಣಾನಂದ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಚನ್ನಬಸವ ಸ್ವಾಮಿಗಳು ಶಿಕಾರಿಪುರ, ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಬ್ಯಾಡಗಿ, ಶರಣೆ ಮುಕ್ತಾಯಕ್ಕ ಸೇರಿದಂತೆ ಹರಗುರುಚರಮೂರ್ತಿಗಳು ಎಲ್.ರಾಜಶೇಖರ್, ಕೆಇಬಿ ಷಣ್ಮುಖಪ್ಪ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

