ಲೋಕಸಮರ 2024
ಹಂಪಿ ಉತ್ಸವದ ಮಾದರಿಯಲ್ಲಿ ಮದಕರಿ ನಾಯಕ ಉತ್ಸವ | ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
CHITRADURGA NEWS | 16 APRIL 2024
ಚಿತ್ರದುರ್ಗ: ಹಂಪಿ ಉತ್ಸವದ ಮಾದರಿಯಲ್ಲಿ ಚಿತ್ರದುರ್ಗದಲ್ಲಿ ರಾಜಾವೀರ ಮದಕರಿ ನಾಯಕರ ಉತ್ಸವ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದರು.
ನಗರದ ಎಸ್.ಜಿ.ಕನ್ವೆನ್ಷನ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎನ್‌ಡಿಎ ಬೆಂಬಲಿತ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿದರೆ ನನ್ನನ್ನೇ ಗೆಲ್ಲಿಸಿದಂತೆ ಎಂದರು.
ಭದ್ರಾ ಮೇಲ್ದಂಡೆಗೆ 5,300 ಕೋಟಿ ರೂ. ಕೊಡಿಸುತ್ತೇನೆ. 82 ವರ್ಷವಾದರೂ ರಾಜ್ಯದ ಉದ್ದಗಲಕ್ಕೂ ಓಡಾಡುತ್ತಿದ್ದೇನೆ. ದೇವರು ಶಕ್ತಿ ಕೊಟ್ಟರೆ ಇನ್ನೂ ಒಂದು ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆ ನಡೆಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ನರೇಂದ್ರ ಮೋದಿ ಎದುರು ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳುತ್ತಿಲ್ಲ. ಇದರರ್ಥ ಚುನಾವಣೆಗೆ ಮೊದಲು ಅವರು ಸೋತಿದ್ದಾರೆ. ರೈತರಿಗೆ ನಾನು ನಾಲ್ಕು ಸಾವಿರ ರೂ. ಕೊಡುತ್ತಿದ್ದೆ, ಹಾಲು ಉತ್ಪಾದಕರ ಪ್ರೋತ್ಸಾಹ ಧನ, ಭಾಗ್ಯ ಲಕ್ಷ್ಮಿ ಯೋಜನೆ ನಿಲ್ಲಿಸುವ ಮೂಲಕ ಕಾಂಗ್ರೆಸ್ ರೈತ ವಿರೋಧಿಯಾಗಿದೆ ಎಂದು ಕಿಡಿಕಾರಿದರು.
ಕ್ಲಿಕ್ ಮಾಡಿ ಓದಿ: ಬಬ್ಬೂರು ಫಾರ್ಮ್ ಕಾಮಗಾರಿ | ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ
ಹಣ, ಹೆಂಡದ ಬಲದಿಂದ ಚುನಾವಣೆ ನಡೆಸುವ ನಿಮ್ಮ ದೊಂಬರಾಟ ನಡೆಯುವುದಿಲ್ಲ. ಜನ ಜಾಗೃತಗೊಂಡಿದ್ದಾರೆ.
ಬಿಜೆಪಿ– ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಂತೆ. ಹಾಲು ಜೇನಿನಂತೆ ಕೂಡಿ ಮುಂದೆಯು ಕೆಲಸ ಮಾಡಿಕೊಂಡು ಹೋಗುತ್ತೇವೆ. ನಮ್ಮ ಹೊಂದಾಣಿಕೆ ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ. ವಾತಾವರಣ ಅನುಕೂಲಕರವಾಗಿದೆ. ಗೋವಿಂದ ಕಾರಜೋಳ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಲೋಕಸಭಾ ಕ್ಷೇತ್ರ ಎನ್‌ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ಕಳೆದ 20 ವರ್ಷಗಳಿಂದ ಯಡಿಯೂರಪ್ಪ ನನ್ನನ್ನು ಒಡಹುಟ್ಟಿದ ಸಹೋದರನಂತೆ ಈ ಹಂತಕ್ಕೆ ಬೆಳೆಸಿದ್ದಾರೆ. ಹತ್ತಾರು ಇಲಾಖೆಗಳ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಕೊಟ್ಟವರು ಯಡಿಯೂರಪ್ಪ. ಆಗ ಎರಡು ಖಾತೆ ಕೊಟ್ಟಿದ್ದರು. ಒಂದು ಸಾಕು ಎಂದರೂ,ನೀನೇ ಮಾಡಬೇಕು ಎಂದಿದ್ದರು. ಯಡಿಯೂರಪ್ಪ ಸಿಎಂ ಆದಾಗೆಲ್ಲಾ ಅವರ ನಂತರ ಗೋವಿಂದ ಕಾರಜೋಳ ಅಂತಾ ಇರುತ್ತಿತ್ತು. ಎಂದೂ ಬಿಟ್ಟುಕೊಟ್ಟಿಲ್ಲ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳ ಕಾಲ ಅರವತ್ತು ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ದುರಾಡಳಿತಕ್ಕೆ ಬೇಸತ್ತು ಜನ ಮೋದಿ ಅವರಿಗೆ ಎರಡು ಅವಧಿಗೆ ಪ್ರಧಾನಿ ಮಾಡಿದ್ದಾರೆ.ಈಗ ಮೂರನೇ ಬಾರಿಗೆ ಪ್ರಧಾನಿ ಮಾಡಲು ದೇಶದ ಜನ ಹಂಬಲಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಎರಡು ದೈತ್ಯ ಶಕ್ತಿಗಳು ಒಂದಾಗಿವೆ. ರಾಜ್ಯದ 28 ಕ್ಷೇತ್ರ ಗೆಲ್ಲಲು ದೇವೇಗೌಡರು, ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂದರು.
ಕ್ಲಿಕ್ ಮಾಡಿ ಓದಿ: ಆಟೊ ಅಪಘಾತ; ಚಾಲಕ ಮೃತ | ಆರು ಜನರಿಗೆ ಗಾಯ
ನಾನು ಚಿತ್ರದುರ್ಗಕ್ಕೆ ಅನಿರೀಕ್ಷಿತ ಅಭ್ಯರ್ಥಿ. ಯಡಿಯೂರಪ್ಪ ಅವರು ನೀನು ಅಭ್ಯರ್ಥಿ ಆಗಬೇಕು ಎಂದರು. ನಾನು ಬೇಡ ಎಂದಿದ್ದೆ. ಆದರೆ, ಅವರು ಒತ್ತಾಯ ಮಾಡಿ ನಿಲ್ಲಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಬೇಕು. ಕೇಂದ್ರ ಸರ್ಕಾರ ಮೀಸಲಿಟ್ಟಿರುವ 5300 ಕೋಟಿ ಅನುದಾನ ತರಬೇಕು. ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಸರಿಯಾಗಬೇಕು. ನಿರುದ್ಯೋಗ ಸಮಸ್ಯೆ ಸರಿಯಾಗಬೇಕು. ಈನಿಟ್ಟಿನಲ್ಲಿ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಬಿಜೆಪಿ ಹಿರಿಯ ನಾಯಕ ಎಸ್.ಲಿಂಗಮೂರ್ತಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಎಸ್.ತಿಪ್ಪೇಸ್ವಾಮಿ, ನಾಯಕರಾದ ಕೆ.ಟಿ.ಕುಮಾರಸ್ವಾಮಿ, ಗನ್ನಾಯಕನಹಳ್ಳಿ ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಜಿ.ಟಿ.ಸುರೇಶ್, ಡಾ.ಮಂಜುನಾಥ್, ರೇಣುಕಾಪ್ರಸಾದ್, ಅಂಕಳಪ್ಪ, ಎಸ್.ಆರ್.ಗಿರೀಶ್, ಶರಣಪ್ಪ ಮತ್ತಿತರರಿದ್ದರು.