ಲೋಕಸಮರ 2024
ಲೋಕಸಭಾ ಚುನಾವಣೆ ಜಿಲ್ಲಾಡಳಿತ ಸರ್ವ ಸನ್ನದ್ಧ | ಏಪ್ರಿಲ್ 25 ರಂದು ಮತಯಂತ್ರ ಹಂಚಿಕೆ

CHITRADURGA NEWS | 16 APRIL 2024
ಚಿತ್ರದುರ್ಗ: ಏಪ್ರಿಲ್ 26ರಂದು ನಡೆಯಲಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾ ಚುನಾವಣಾ ಶಾಖೆಯು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಏಪ್ರಿಲ್ 25 ರಂದು ಮತಯಂತ್ರ ಹಂಚಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಇದನ್ನೂ ಓದಿ: ಹಂಪಿ ಉತ್ಸವದ ಮಾದರಿಯಲ್ಲಿ ಮದಕರಿ ನಾಯಕ ಉತ್ಸವ | ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಉಮೇದುವಾರರಿಗೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾನ ಪೂರ್ವ ಸಿದ್ಧತೆಗಳ ಮಾಹಿತಿ ನೀಡಿದರಲ್ಲದೇ ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ತಾಲೂಕುಗಳು ಸೇರಿದಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ 08ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ಸರಬರಾಜಾಗಲಿರುವ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಮತ್ತು ವಿವಿಪ್ಯಾಟ್‍ಗಳ 2ನೇ ಹಂತದ ರ‍್ಯಾಂಡಮೈಜೇಶನ್ ಮತ್ತು ಹಂಚಿಕೆ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಈ ಎಲ್ಲಾ ಪ್ರಕ್ರಿಯೆಗಳನ್ನು ಉಮೇದುವಾರರು ಅಥವಾ ಅವರಿಂದ ನಿಯೋಜಿಸಲಾದ ಸಿಬ್ಬಂಧಿಗಳು ಖುದ್ದು ಸ್ಥಳದಲ್ಲಿ ಹಾಜರಿದ್ದು, ವೀಕ್ಷಿಸಬಹುದಾಗಿದೆ ಎಂದ ಅವರು, ಈ ಎಲ್ಲಾ ವಿದ್ಯಾಮಾನಗಳನ್ನು ಪ್ರತಿ ಮತಗಟ್ಟೆಗಳಿಗೆ ನೇಮಿಸಲಾಗುವ ರಾಜಕೀಯ ಪಕ್ಷಗಳ ಏಜೆಂಟರಿಗೆ ತಿಳಿಸುವಂತೆ ಹಾಗೂ ಯಾವುದೇ ಅಡಚಣೆಗಳಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಇದನ್ನೂ ಓದಿ: ರೈತರಿಗೆ ಶುಭ ಸುದ್ದಿ | ವಾಡಿಕೆಗಿಂತ ಅಧಿಕ ಸುರಿಯಲಿದೆ ಮುಂಗಾರು
ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವ 2168ಮತಗಟ್ಟೆಗಳಿಗೆ ಪ್ರತಿ ಕೇಂದ್ರಕ್ಕೆ 2 ಮತಯಂತ್ರದಂತೆ ಒಟ್ಟು 4336 ಮತಯಂತ್ರಗಳನ್ನು ಹಂಚಿಕೆ ಮಾಡಲಾಗುವುದು.
ಅಲ್ಲದೇ ತಾಂತ್ರಿಕ ದೋಷ ಮತ್ತಿತರ ತುರ್ತು ಸಂದರ್ಭಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಪರಿಹಾರ ಕ್ರಮವಾಗಿ ಹೆಚ್ಚುವರಿಯಾಗಿ 897ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ ಎಂದ ಅವರು, ಈ ಚುನಾವಣೆಗಾಗಿ ಒಟ್ಟು 5233 ಬ್ಯಾಲೆಟ್ ಯುನಿಟ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಯುನಿಟ್‍ಗೂ ನಂಬರುಗಳನ್ನು ಹಾಕಲಾಗಿದೆ ಎಂದರು.
85+ ವರ್ಷ ಮೇಲ್ಪಟ್ಟ ವಯಸ್ಕರ ತಮ್ಮ ಕೋರಿಕೆ ಮತದಾನಕ್ಕೆ ಇಂದು ಅಂತಿಮ ದಿನವಾಗಿದೆ. ಈಗಾಗಲೇ ಕೋರಿಕೆ ಸಲ್ಲಿಸಿದ ವಿಕಲಚೇತನರೂ ಕೂಡ ಮನೆಯಲ್ಲಿಯೇ ಮತ ಚಲಾಯಿಸಲು ಅನುಮತಿ ನೀಡಲಾಗಿದೆ.
ಅಗತ್ಯ ಸೇವೆಗಳಿಗೆ ನಿಯೋಜಿತ ಮತದಾರರು ಮತ ಚಲಾಯಿಸಲು ಜಿಲ್ಲೆಯ ತಹಶೀಲ್ದಾರರ ಕಚೇರಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅರ್ಹರು ಏಪ್ರಿಲ್ 19, 20 ಮತ್ತು 21ರಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯೊಳಗಾಗಿ ಮತಚಲಾಯಿಸಬಹುದಾಗಿದೆ ಎಂದರು.
ಇದನ್ನೂ ಓದಿ: ನಾನು ಈಗ ಯಾವುದೇ ಪಕ್ಷದಲ್ಲಿ ಇಲ್ಲ | ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್
ಪ್ರಸಕ್ತ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರ ಅನುಕೂಲಕ್ಕಾಗಿ ಮತಗಟ್ಟೆ ಗುರುತಿನ ಚೀಟಿಗಳನ್ನು ವಿತರಿಸುವ ಕಾರ್ಯ ಜಿಲ್ಲೆಯಾದ್ಯಂತ ಇಂದಿನಿಂದ ಆರಂಭಗೊಳ್ಳಲಿದೆ. ಖಾಸಗಿಯವರು ವಿತರಿಸುವ ಪಕ್ಷದ ಗುರುತು ಚಿಹ್ನೆಗಳುಳ್ಳ ಚೀಟಿಗಳನ್ನು ಮತಗಟ್ಟೆಯೊಳಗೆ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ವಿಶೇಷವಾಗಿ ಜಿಲ್ಲಾ ಚುನಾವಣಾ ಶಾಖೆಯಿಂದ ವಿತರಿಸಲಾಗುವ ಗುರುತಿನ ಚೀಟಿಗಳಲ್ಲಿ ಮತಗಟ್ಟೆಯ ವಿವರವಾದ ಮಾಹಿತಿ ಒದಗಿಸುವ ಕ್ಯೂಆರ್ ಕೋಡನ್ನು ನಮೂದಿಸಲಾಗಿದೆ. ಈ ಕ್ಯೂಆರ್ ಕೋಡನ್ನು ಮತದಾರರು ಬಳಸಿಕೊಳ್ಳಬಹುದಾಗಿದೆ ಎಂದರು.
ಇದನ್ನೂ ಓದಿ: ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ
ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕ ಮನೋಹರ ಮರಾಂಡಿ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಪ್ರಸಕ್ತ ಚುನಾವಣೆಯಲ್ಲಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಉಮೇದುವಾರರು ಅಥವಾ ಅವರ ಪ್ರತಿನಿಧಿಗಳು ಉಪಸ್ಥಿತರಿದ್ದರು.
