CHITRADURGA NEWS | 19 NOVEMBER 2026
ಚಿತ್ರದುರ್ಗ: ಚಿತ್ರದುರ್ಗ ಲೋಕಾಯುಕ್ತ ಅಧಿಕಾರಿಗಳು ಬುಧವಾರ ನಸುಕಿನಲ್ಲೇ ದಾಳಿ ನಡೆಸಿದ್ದು, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಎಸ್.ರವೀಂದ್ರ ಹಾಗೂ ತೂಕ ಮತ್ತು ಅಳತೆ ಇಲಾಖೆಯ ನಿರೀಕ್ಷಕ ವೆಂಕಟೇಶ್ ಮನೆ, ಕಚೇರಿ, ಆಸ್ಪತ್ರೆ ಸೇರಿದಂತೆ ಹತ್ತು ಕಡೆಗಳಲ್ಲಿ ಪರಿಶೀಲನೆ ನಡೆಸಿದರು.
ದಾಳಿ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಎಸ್.ರವೀಂದ್ರ ಅವರ ಬಳಿ ಆದಾಯಕ್ಕಿಂತ ಶೇ.267.45 ಪ್ರಮಾಣದಲ್ಲಿ ಆಸ್ತಿ ಪತ್ತೆಯಾಗಿದೆ.
ಇದನ್ನೂ ಓದಿ:ಅಡಿಕೆ ಧಾರಣೆ | ನವೆಂಬರ್ 18 | ಇಂದು ಯಾವ ಅಡಿಕೆಗೆ ಎಷ್ಟು ರೇಟ್
ಇನ್ನೂ ಮಾಪನಶಾಸ್ತ್ರ ಇಲಾಖೆ ಅಧಿಕಾರಿ ವೆಂಕಟೇಶ್ ಬಳಿ ಶೇ.247ರಷ್ಟು ಗಳಿಕೆಗಿಂತ ಹೆಚ್ಚು ಪ್ರಮಾಣದ ಆಸ್ತಿ ಪಾಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಬಳಿ ಅವರು ವಾಸವಿರುವ ಮನೆ ಸಹಿತ ನಗರದಲ್ಲಿ 3 ಮನೆಗಳು, ಜಿಲ್ಲಾಸ್ಪತ್ರೆ ಜಿಲ್ಲಾ ಸರ್ಜನ್ ಕಚೇರಿ, ಅವರ ಒಡೆತನದ ಆರ್.ವಿ.ಪಬ್ಲಿಕ್ ಸ್ಕೂಲ್ ಮೇಲೆ ದಾಳಿ ನಡೆದಿದ್ದು, 8.50 ಕೋಟಿ ರೂ.ಗಳಿಗೂ ಅಧಿಕ ಆಸ್ತಿಪಾಸ್ತಿ ಇರುವುದನ್ನು ಪತ್ತೆ ಮಾಡಲಾಗಿದೆ. ಮೂರು ಎಕರೆ ವಿಸ್ತೀರ್ಣದಲ್ಲಿರುವ ಖಾಸಗಿ ಶಾಲೆ ಸೇರಿದಂತೆ ಒಟ್ಟು 10 ಎಕರೆ ಜಮೀನು. 4 ಶಾಲಾ ವಾಹನಗಳು, ಅಂದಾಜು 1.75 ಕೋಟಿ ರೂ.ಮೌಲ್ಯದ ಶಾಲಾ ಕಟ್ಟಡ, 4.25 ಕೋಟಿ ರೂ.ಮೌಲ್ಯದ 3 ಮನೆಗಳು, 1.50 ಕೋಟಿ ರೂ.ಮೌಲ್ಯದ ಅಕ್ಷಯ ಗ್ಲೋಬಲ್ ಆಸ್ಪತ್ರೆ ಕಟ್ಟಡ, 192 ಗ್ರಾಂ ಬಂಗಾರ ಒಡವೆಗಳು, 5 ಕೆಜಿಗೂ ಅಧಿಕ ಬೆಳ್ಳಿ ಆಭರಣ, ಒಟ್ಟಾರೆ 30.73 ಲಕ್ಷ ರೂ.ಅಧಿಕ ಮೊತ್ತದ ಬೆಲೆ ಬಾಳುವ ವಸ್ತುಗಳು ದಾಳಿ ವೇಳೆ ಪತ್ತೆಯಾಗಿದೆ.
ಇದನ್ನೂ ಓದಿ:ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಲು ರೈತರ ಆಗ್ರಹ
ಕಾನೂನು ಮಾಪನ ಶಾಸ್ತ್ರ ಇಲಾಖೆ ಇನ್ಸ್ಪೆಕ್ಟರ್ ವೆಂಕಟೇಶ್ ಅವರ ವಿದ್ಯಾ ನಗರದ ನಿವಾಸ, ಕಚೇರಿ ಮೇಲೆ ನಡೆಸಿ ದಾಳಿ ನಡೆಸಿದ್ದು, ವಿದ್ಯಾ ನಗರದಲ್ಲಿ 1 ಕೋಟಿ ರೂ.ಮೌಲ್ಯದ ಮನೆ, 7.20 ಲಕ್ಷ ರೂ.ಮೌಲ್ಯದ ಒಂದು ನಿವೇಶನ, 2 ಲಕ್ಷ ರೂ. ಮೌಲ್ಯದ 2ಎಕರೆ ಜಮೀನು ಹಾಗೂ 21 ಲಕ್ಷ ರೂ.ನಗದು, 48 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 65 ಸಾವಿರ ರೂ.ಬೆಲೆ ಬಾಳುವ ವಾಹನ, 35 ಲಕ್ಷ ರೂ.ಮೌಲ್ಯದ ಇತರೆ ವಸ್ತುಗಳ ಸಹಿತ ಅಂದಾಜು 2 ಕೋಟಿ ರೂ.ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ.
ಮನೆಯಲ್ಲಿ ದೊರೆತಿರುವ 21 ಲಕ್ಷ ರೂ. ನಗದು ಮಗಳ ಮದುವೆಗಾಗಿ ಪಡೆದಿರುವ ಹಣವೆಂದು ತಿಳಿಸಿದ್ದು, ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ:ಕರ್ನಾಟಕದ ಅತೀ ದೊಡ್ಡ ಪಿರಮಿಡ್ ಧ್ಯಾನ ಮಂದಿರ ಲೋಕಾರ್ಪಣೆ
ಬಳ್ಳಾರಿ ಲೋಕಾಯುಕ್ತ ಎಸ್ಪಿ ಎಸ್.ಎಂ.ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಕಲಾವತಿ, ಸಚಿನ್ ಛಲವಾದಿ, ಇನ್ಸ್ಪೆಕ್ಟರ್ಗಳಾದ ಬಸವರಾಜ್ ಬಿ.ಲಮಾಣಿ, ಸುಮಾ ಮತ್ತಿತರೆ ಅಧಿಕಾರಿಗಳು, ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
====
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

