CHITRADURGA NEWS | 18 NOVEMBER 2026
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದಲ್ಲಿ 9,999 ಜನರು ಏಕಕಾಲದಲ್ಲಿ ಕುಳಿತು ಧ್ಯಾನ ಮಾಡಬಹುದಾದ ಬೃಹತ್ ಪಿರಮಿಡ್ ಧ್ಯಾನ ಮಂದಿರವು ನವೆಂಬರ್ 21 ಮತ್ತು 22ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮೈತ್ರೇಯ ಪಿರಮಿಡ್ ಸ್ಪಿರಿಚುವಲ್ ಟ್ರಸ್ಟ್ನ ಸಂಚಾಲಕ ಗೌರೀಶ್ ತಿಳಿಸಿದರು.
ಇದನ್ನೂ ಓದಿ: ಲೋಕಾಯುಕ್ತ ದಾಳಿ | ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಎಪಿಎಂಸಿ ಅಧಿಕಾರಿ ವೆಂಕಟೇಶ್ ಮನೆ, ಕಚೇರಿಯಲ್ಲಿ ಪರಿಶೀಲನೆ
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ನಲ್ಲಿ 5,000 ಜನರು ಕುಳಿತು ಧ್ಯಾನ ಮಾಡಬಹುದಾದ ಪಿರಮಿಡ್ ನಿರ್ಮಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಕರ್ನಾಟಕದ ಎರಡನೇ ಅತಿ ದೊಡ್ಡ ಪಿರಮಿಡ್ ಧ್ಯಾನ ಮಂದಿರವನ್ನು ಆದಿವಾಲ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಬ್ರಹ್ಮರ್ಷಿ ಪಿತಾಮಹ ಸುಭಾಷ್ ಪತ್ರಿಜಿ ಅವರ ಆಶಯದಂತೆ ನಿರ್ಮಾಣಗೊಂಡಿರುವ ಈ ಮಂದಿರವನ್ನು ಅವರ ಧರ್ಮಪತ್ನಿ ಹಾಗೂ ಗುರುಮಾತೆ ಸ್ವರ್ಣಮಾಲಾ ಪತ್ರಿ ಅಮ್ಮನವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.
ನವೆಂಬರ್ 21ರಂದು ಬೆಳಗ್ಗೆ 11 ಗಂಟೆಗೆ ಆದಿವಾಲ ಗ್ರಾಮದಲ್ಲಿ ಸಸ್ಯಾಹಾರ ರ್ಯಾಲಿ ನಡೆಯಲಿದೆ. ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ವಿದ್ವಾನ್ ಗಣೇಶ್ ತಂಡದಿಂದ ಸಂಗೀತ ನಾದ ಧ್ಯಾನ ಹಾಗೂ ಸಂಜೆ 6ರಿಂದ ರಾತ್ರಿ 9ರವರೆಗೆ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ನವೆಂಬರ್ 22ರಂದು ಬೆಳಗ್ಗೆ 7ರಿಂದ 10ರವರೆಗೆ ಸಾಮೂಹಿಕ ಸಂಗೀತ ಧ್ಯಾನ ನಡೆಯಲಿದ್ದು, ಬಳಿಕ ಬೆಳಗ್ಗೆ 11:11:11ಕ್ಕೆ ಪಿರಮಿಡ್ ಮಂದಿರ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಅವಧೂತ ವಿನಯ್ ಗುರೂಜಿ, 112 ವರ್ಷದ ಹಿಮಾಲಯದ ಯೋಗಿ ಸದಾನಂದಗಿರಿ ಸ್ವಾಮೀಜಿ ಸೇರಿದಂತೆ ಹಲವು ಬ್ರಹ್ಮರ್ಷಿಗಳು, ಸ್ವಾಮೀಜಿಗಳು, ಋಷಿಗಳು, ಯೋಗಿಗಳು ಹಾಗೂ ಹಿರಿಯ ಮಾಸ್ಟರ್ಗಳು ಭಾಗವಹಿಸಲಿದ್ದಾರೆ. ಸುಮಾರು 25 ಸಾವಿರ ಧ್ಯಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ನವೆಂಬರ್ 18 | ಮೆಕ್ಕೆಜೋಳ, ಶೇಂಗಾ ರೇಟ್….
ಟ್ರಸ್ಟ್ನ ಸದಸ್ಯ ಡಾ. ಮಂಜುನಾಥ್ ಮಾತನಾಡಿ, ಪಿರಮಿಡ್ನಲ್ಲಿ ಧ್ಯಾನ ಮಾಡುವುದರಿಂದ ಮನಸ್ಸು ಶಾಂತ ಸ್ಥಿತಿಗೆ ತಲುಪಲು ಸಹಕಾರಿಯಾಗಲಿದೆ ಎಂಬ ಉದ್ದೇಶದಿಂದ ಮಂದಿರ ನಿರ್ಮಿಸಲಾಗಿದೆ. ಇಲ್ಲಿ ಉಚಿತ ಧ್ಯಾನ ಶಿಕ್ಷಣ ಹಾಗೂ ಅನ್ನದಾಸೋಹ ವ್ಯವಸ್ಥೆ ಇರಲಿದೆ. ಪಿರಮಿಡ್ ನಿರ್ಮಾಣಕ್ಕೆ ಹಿರಿಯೂರಿನ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರು ಸರ್ಕಾರದ ಮೂಲಕ 30 ಲಕ್ಷ ರೂ. ಅನುದಾನ ಒದಗಿಸಿದ್ದು, ದಾನಿಗಳ ನೆರವಿನೊಂದಿಗೆ ಒಟ್ಟು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.
52 ಡಿಗ್ರಿ ಕೋನದಲ್ಲಿ ನಿರ್ಮಿಸಲಾಗಿರುವ ಈ ಪಿರಮಿಡ್ ವಿಶ್ವ ಪ್ರಾಣಶಕ್ತಿಯನ್ನು ಆಕರ್ಷಿಸಿ ಧ್ಯಾನಕ್ಕೆ ಪೂರಕ ವಾತಾವರಣ ಕಲ್ಪಿಸುತ್ತದೆ ಎಂಬುದು ಆಯೋಜಕರ ನಂಬಿಕೆಯಾಗಿದೆ. ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿರುವ ಈ ಕೇಂದ್ರವು ಸೌಹಾರ್ದಯುತ ಬದುಕು ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವ ಉದ್ದೇಶ ಹೊಂದಿದೆ. ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಧ್ಯಾನ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಇದನ್ನೂ ಓದಿ: ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಲು ರೈತರ ಆಗ್ರಹ
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಮಂಜುಳ, ಉಪಾಧ್ಯಕ್ಷ ಶ್ರೀನಿವಾಸ ಬಾಬು, ಸದಸ್ಯರಾದ ಗಂಗಾಧರ ಶೆಟ್ಟಿ, ವೀರಭದ್ರಪ್ಪ, ಸರಳ ಹಾಗೂ ನಾಗರತ್ನ ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

