
CHITRADURGA NEWS | 08 December 2025
ಚಿತ್ರದುರ್ಗ: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಡಿ ಇದೇ ಡಿಸೆಂಬರ್ 21 ರಿಂದ 24 ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಐದು ವರ್ಷದೊಳಗಿನ 126361 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಎಬಿವಿಪಿ ಸಂಘಟಿಸಿರುವ ಭೀಮ ನಮನದ ಪೋಸ್ಟರ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಇದೇ ಡಿಸೆಂಬರ್ 21 ರಿಂದ 24 ರವರೆಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಏರ್ಪಡಿಸಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶದ 98279 ಹಾಗೂ ನಗರ ಪ್ರದೇಶದ 28082 ಮಕ್ಕಳು ಸೇರಿದಂತೆ ಒಟ್ಟು 126361 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಎಚ್ಚರ ವಹಿಸಿ, ವ್ಯವಸ್ಥಿತವಾಗಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂಂದು ಹೇಳಿದರು.
ಆರೋಗ್ಯ ಇಲಾಖೆ ಜತೆಗೆ ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜವಾಬ್ದಾರಿಯುತವಾಗಿ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಪೋಲಿಯೋದಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಎಲ್ಲ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ತಾಕೀತು ಮಾಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 08 | ಮೆಕ್ಕೆಜೋಳ ರೇಟ್ ಎಷ್ಟಿದೆ?
ತಹಶೀಲ್ದಾರ್ ನೇತೃತ್ವದಲ್ಲಿ ತಾಲ್ಲೂಕು ಮಟ್ಟದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಚಾಲನಾ ಮಟ್ಟದ ಸಭೆಗಳನ್ನು ನಡೆಸಿ, ಹೈರಿಸ್ಕ್ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಪಲ್ಸ್ ಪೋಲಿಯೋ ಬೂತ್ ಕಾರ್ಯಕ್ರಮ ಮಾಡಬೇಕು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕಾಗಿ 1091 ಲಸಿಕಾ ಕೇಂದ್ರಗಳು, 63 ಟ್ರಾನ್ಸಿಟ್ ಪಾಯಿಂಟ್ ಮತ್ತು 15 ಮೊಬೈಲ್ ತಂಡಗಳ ಮೂಲಕ ಪೋಲಿಯೋ ಲಸಿಕೆ ಹಾಕಲು ಸಿದ್ಧತೆ ಕೈಗೊಂಡಿದ್ದು, ಈ ಸಂಬಂಧ 2338 ಲಸಿಕಾ ಕಾರ್ಯಕರ್ತರು, 239 ಮೇಲ್ವಿಚಾರಕನ್ನು ನಿಯೋಜಿಸಲಾಗಿದೆ ಎಂದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಇದೇ ಡಿ.21ರಂದು ಬೂತ್ ಮಟ್ಟದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.22 ರಿಂದ 24 ರವರೆಗೆ ಮನೆ ಮನೆ ಭೇಟಿ ನೀಡುವ ಮೂಲಕ ಪಲ್ಸ್ ಪೋಲಿಯೋ ಹಾಕಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಟೀಕೆ ಟಿಪ್ಪಣಿ ಸಹಜ | ಹೇಳಬೇಕಾದುದನ್ನು ನಿಷ್ಠುರವಾಗಿ ಹೇಳಬೇಕು | ಸಾಣೇಹಳ್ಳಿ ಶ್ರೀ
ಜಿಲ್ಲೆಯಲ್ಲಿ ಕಳೆದ 2021ನೇ ವರ್ಷದಲ್ಲಿ 1,54,572, 2022ರಲ್ಲಿ 1,56,132, 2023ರಲ್ಲಿ 1,55,729 ಹಾಗೂ 2024ನೇ ವರ್ಷದಲ್ಲಿ 1,42,851 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಬೂತ್ ಮಟ್ಟದಲ್ಲಿಯೇ ಶೇ.95ರಷ್ಟು ಪೋಲಿಯೋ ಲಸಿಕೆ ಹಾಕಲಾಗುತ್ತದೆ. ನಂತರ ಮನೆ ಮನೆ ಭೇಟಿ ಮೂಲಕ ಲಸಿಕೆ ಹಾಕಲಾಗುತ್ತದೆ ಎಂದರು.
ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಡಿ.20ರಂದು ಶಾಲಾ ಮಟ್ಟದಲ್ಲಿ ಜಾಥಾ ನಡೆಸಿ, ಜಾಗೃತಿ ಮೂಡಿಸಬೇಕು. ವಿವಿಧ ಇಲಾಖೆಯ ಮುಖ್ಯಸ್ಥರು ತಮ್ಮ ಇಲಾಖೆಯ ವಾಹನಗಳನ್ನು ನಿಗಧಿತ ಸಮಯಕ್ಕೆ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ವಾಹನಗಳ ನಿಯೋಜಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಪ್ರತಿ ವರ್ಷದಂತೆಯೂ ಈ ಬಾರಿಯೂ ಸಹ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಯಾವುದೇ ಮಗು ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಈ ಸಮಸ್ಯೆ ಇರುವವರು ಓಂಕಾಳಿನ ನೀರನ್ನು ಕುಡಿಯಬೇಡಿ
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಗೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
